ಗುಪ್ತಚರ ಇಲಾಖೆ ಸೇರಿದಂತೆ ಸೇನೆಯ ಪ್ರಮುಖ ನಿರ್ದೇಶನಾಲಯಗಳಿಗೆ ನೂತನ ವರಿಷ್ಠರ ನೇಮಕ
ಹೊಸದಿಲ್ಲಿ: ಸೇನೆಯ ಉನ್ನತ ಮಟ್ಟದ ಅಧಿಕಾರವರ್ಗದಲ್ಲಿ ಮಹತ್ವದ ಪುನಾರಚನೆಯನ್ನು ಮಾಡಲಾಗಿದ್ದು, ಮಿಲಿಟರಿ ಗುಪ್ತಚರ ಇಲಾಖೆ ಸೇರಿದಂತೆ ವಿವಿಧ ನಿರ್ದೇಶನಾಲಯಗಳಿಗೆ ನೂತನ ಮಹಾನಿರ್ದೇಶಕರನ್ನು ನೇಮಿಸಲಾಗಿದೆ.
ಸೇನಾ ಗುಪ್ತಚರ ಇಲಾಖೆಯ ಮಹಾನಿರ್ದೇಶಕರಾಗಿ ಲೆ.ಜ. ಆರ್.ಎಸ್.ರಾಮನ್ ಅವರು ಸೇನಾಗುಪ್ತಚರ ಇಲಾಖೆಯ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗೆಯೇ ಲೆ.ಜ.ರಾಜು ಬೈಜಾಲ್ ಹಾಗೂ ಲೆ.ಜ. ರಾಜೀವ್ ಪುರಿ ಅವರು ಕ್ರಮವಾಗಿ ಆಯಕಟ್ಟಿನ ಯೋಜನೆ ಹಾಗೂ ಮಾಹಿತಿ ಸಮರಕೌಶಲ್ಯದ ನೂತನ ಮಹಾನಿರ್ದೇಶಕರುಗಳಾಗಿ ನೇಮಕಗೊಂಡಿದ್ದಾರೆ.
ಈ ಮೊದಲು ವರದಿಯಾದಂತೆ ಸೇನಾಪಡೆಗಳ ನೂತನ ಉಪಮುಖ್ಯಸ್ಥ ( ಮಾಹಿತಿ ವ್ಯವಸ್ಥೆ ಹಾಗೂ ಸಮನ್ವಯ) ಹಾಗೂ ಮೂವರು ನೂತನ ಕಾರ್ಪ್ಸ್ ಕಮಾಂಡರ್‌ಗಳು ಕೂಡಾ ನೇಮಕಗೊಂಡಿದ್ದಾರೆ. ಲೆ.ಜ. ರಾಕೇಶ್ ಕಪೂರ್ ಅವರು ಹೊಸದಿಲ್ಲಿ ಮೂಲದ ಸೇನಾ ಮುಖ್ಯಕಾರ್ಯಾಲಯದ ನೂತನ ಡಿಸಿಒಎಸ್ (ಐಸಿಆ್ಯಂಡ್ ಡಬ್ಲು) ಅಧಿಕಾರ ಸ್ವೀಕರಿಸಿದ್ದಾರೆ. ಅವರು ಜೋಧಪುರ ಮೂಲದ12 ಕಾರ್ಪ್ಸ್ ಪಡೆಯಲ್ಲಿ ಮುಖ್ಯ ದಂಡನಾಯಕ (ಕಮಾಂಡರ್ ಇನ್ ಚೀಫ್)ರಾಗಿದ್ದರು. ಸಾರ್ವಜನಿಕ ಮಾಹಿತಿ ವಿಭಾಗದಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಲೆ.ಜ. ಮೋಹಿತ್ ಮಲ್ಹೋತ್ರಾ ಅವರು 12ನೇ ಕಾರ್ಪ್ಸ್ ಕಮಾಂಡರ್ ಆಗಿ ಅಧಿಕಾರ ಸ್ವೀಕರಿಸಿದರು. ಭಾರತೀಯ ಸೇನೆಯು ಮೂವರು ಉಪಮುಖ್ಯಸ್ಥರನ್ನು ಹೊಂದಿದೆ.
ಪಾಕಿಸ್ತಾನದ ಗಡಿನಿಯಂತ್ರಣ ರೇಖೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯ ಉಸ್ತುವಾರಿ ಹೊಂದಿರುವ ಶ್ರೀನಗರದ 15 ಕಾರ್ಪ್ಸ್ ಪಡೆಯ ಕಮಾಂಡರ್ ಆಗಿ ಲೆ.ಜ. ರಾಜೀವ್ ಘಾಯ್ ಅವರು ನೇಮಕಗೊಂಡಿದ್ದಾರೆ. 15ನೇ ಕಾರ್ಪ್ಸ್ ಕಮಾಂಡರ್ ನಿರ್ಗಮನ ಕಾರ್ಪ್ಸ್ ಕಮಾಂಡರ್ ಆಗಿದ್ದ ಅಮರದೀಪ್ ಸಿಂಗ್ ಔಜೌಲಾ ಅವರು ಹೊಸದಿಲ್ಲಿಯ ಸೇನಾ ಮುಖ್ಯ ಕಾರ್ಯಾಲಯದಲ್ಲಿ ನೂತನ ಎಂಇಎಸ್ ಆಗಿ ನೇಮಕಗೊಂಡಿದ್ದಾರೆ.
ಮಥುರಾ ಮೂಲದ 1ನೇ ಸ್ಟ್ರೈಕ್ (ದಾಳಿ) ಕಾರ್ಪ್ಸ್ ಕಮಾಂಡರ್ ಆಗಿದ್ದ ಲೆ.ಜ.ಗಜೇಂದ್ರ ಜೋಶಿ ಅವರು ಪ್ರಾಂತೀಯ ಸೇನೆಯ ನೂತನ ಮಹಾನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಲೆ.ಜ. ಸಂಜಯ್ ಮಿತ್ರಾ ಅವರು ಸ್ಟ್ರೈಕ್ 1 ಕಾರ್ಪ್ಸ್‌ನ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಯುದ್ಧ ಆರಂಭವಾದಲ್ಲಿ ಶತ್ರು ಪ್ರದೇಶವನ್ನು ಭೇದಿಸಿ ನುಗ್ಗುವ ಹೊಣೆಹೊಂದಿರುವ ದೇಶದ ನಾಲ್ಕು ದಾಳಿ ಪಡೆಗಳಲ್ಲಿ ಸ್ಟ್ರೈಕ್1 ಕಾರ್ಪ್ಸ್ ಒಂದಾಗಿದೆ. ಈ ಹಿಂದೆ ಅದು ಪಶ್ಚಿಮ ಕಮಾಂಡ್ ಅಧೀನದಲ್ಲಿದೆ. ಆದರೆ 2020ರಲ್ಲಿ ಪೂರ್ವ ಲಡಾಕ್ ಗಡಿಯಲ್ಲಿ ಭಾರತ-ಚೀನಾ ಸೇನೆ ನಡುವೆ ಉದ್ವಿಗ್ನತೆ ಏರ್ಪಟ್ಟ ಬಳಿಕ ಅದನ್ನು ಉತ್ತರ ಕಮಾಂಡ್‌ನ ಅಧೀನಕ್ಕೊಳಪಡಿಸಲಾಯಿತು.
ಹಿಮಾಚಲ ಪ್ರದೇಶದಲ್ಲಿ ಸೇನಾನೆಲೆಯನ್ನು ಹೊಂದಿರುವ 9 ಕಾರ್ಪ್ಸ್ ಪಡೆ ಯ ನೂತನ ಕಾರ್ಪ್ಸ್ ಕಮಾಂಡರ್ ಆಗಿ ಲೆ.ಜ. ಎಸ್.ಪಿ.ಸಿಂಗ್ ನೇಮಕಗೊಂಡಿದ್ದಾರೆ. ಅವರ ಪೂರ್ವಾಧಿಕಾರಿಯಾಗಿದ್ದ ಲೆ.ಜ.ಪಿ.ಪಿ.ಸಿಂಗ್ ಅವರು ಕಾರ್ಯಾಚರಣೆಗಳು ಹಾಗೂ ಲಾಜಿಸ್ಟಿಕ್ಸ್‌ನ ನೂತನ ಮಹಾನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
10.20 ಲಕ್ಷ ಸೈನಿಕ ಬಲದ ಭಾರತೀಯ ಸೇನೆಯನ್ನು ಆರು ಕಾರ್ಯನಿರ್ವಹಣಾ ಹಾಗೂ 1 ತರಬೇತಿ ಕಮಾಂಡ್ ಆಗಿ ಸಂಘಟಿಸಲಾಗಿದೆ. ಅದರ ಕೆಳಗೆ ಸೇನೆಯ ಕದನಸಂರಚನಾ ಪಡೆಗಳನ್ನು 14 ಕಾರ್ಪ್ಸ್‌ಗಳಾಗಿ ಸಂಘಟಿಸಲಾಗಿದ್ದು, ಅವು ಲೆಫ್ಟಿನೆಂಟ್ ಜನರಲ್ ಮಟ್ಟದ ಅಧಿಕಾರಿಯ ಅಧೀನದಲ್ಲಿರುತ್ತವೆ. ಪ್ರತಿಯೊಂದು ಸೇನಾ ಕಮಾಂಡ್‌ನ ನೇತೃತ್ವವನ್ನು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಅವರು ನೇತೃತ್ವ ವಹಿಸಿದ್ದಾರೆ.
ಸೇನಾ ಕಮಾಂಡ್‌ನ ನೇತೃತ್ವವನ್ನು ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಹಾಗೂ ಜನರಲ್ ಆಫೀಸರ್ ಕಮಾಂಡಿಂಗ್ ಅಥವಾ ಕಾರ್ಪ್ಸ್ ಕಮಾಂಡರ್ ವಹಿಸಿಕೊಳ್ಲುತ್ತಾರೆ. ಪ್ರತಿಯೊಂದು ಕಾರ್ಪ್ಸ್ ಪಡೆಯು ಮೂರು ಅಥವಾ ನಾಲ್ಕು ವಿಭಾಗಗಳನ್ನು ಹೊಂದಿರುತ್ತವೆ.