ಮುಂದಿನ 24 ಗಂಟೆಗಳಲ್ಲಿ ಚಂಡಮಾರುತ ತೀವ್ರ: ಹವಾಮಾನ ಇಲಾಖೆ

Update: 2023-06-10 17:26 GMT

ಹೊಸದಿಲ್ಲಿ: ಮುಂದಿನ 24 ಗಂಟೆಗಳಲ್ಲಿ ಬಿಪರ್ಜೋಯ್ ಚಂಡಮಾರುತ ಇನ್ನಷ್ಟು ತೀವ್ರಗೊಳ್ಳಲಿದೆ ಹಾಗೂ ಉತ್ತರ ಈಶಾನ್ಯಕ್ಕೆ ಚಲಿಸಲಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಶನಿವಾರ ಹೇಳಿದೆ.

ಈ ವರ್ಷ ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಮೊದಲ ಚಂಡಮಾರುತವಾಗಿರುವ ಬಿಪರ್ಜೋಯ್ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿಗೆ ಕಾರಣವಾಗಲಿದೆ ಎಂದು ಅದು ತಿಳಿಸಿದೆ. ಗುಜರಾತ್ನಲ್ಲಿ ಶುಕ್ರವಾರ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಹಿಂದೆ ಕರೆಯಲಾಗಿದೆ.

 ಭಾರೀ ಎತ್ತರದ ಅಲೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಲ್ಸದದಲ್ಲಿರುವ ಟಿತಾಲ್ ಕಡಲತೀರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಕೇರಳ, ಗೋವಾ ಹಾಗೂ ಲಕ್ಷದ್ವೀಪ ಕರಾವಳಿಯ ಮೀನುಗಾರರಿಗೆಗೆ ಹವಾಮಾನ ಇಲಾಖೆ ಇದಕ್ಕಿಂತ ಮೊದಲು ಸಲಹೆ ನೀಡಿದೆ. ಈ ಚಂಡಮಾರುತ ಗುಜರಾತ್ ನ ಕರಾವಳಿ ಪೋರ್ಬಂದರ್ ಜಿಲ್ಲೆಯ ದಕ್ಷಿಣ ನೈಋತ್ಯದಲ್ಲಿ 640 ಕಿ.ಮೀ.ದೂರದಲ್ಲಿ ಕೇಂದ್ರ ಹೊಂದಿದೆ.

 ಚಂಡಮಾರುತದ ಕಾರಣದಿಂದ ಜೂನ್ 10,11 ಹಾಗೂ 12ರಂದು ಗಾಳಿ ಗಂಟೆಗೆ 45ರಿಂದ 55 ಕ್ನಾಟ್ (ಗಾಳಿಯ ವೇಗದ ಅಳತೆ) ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಈ ವೇಗ ಗಂಟೆಗೆ 65 ಕ್ನಾಟ್ ಗೆ ತಲುಪುವ ಸಾದ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಡುವೆ ನೈಋತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ವಾಡಿಕೆಯ ದಿನಾಂಕಕ್ಕಿಂತ 7 ದಿನ ವಿಳಂಬವಾಗಿ ಪ್ರವೇಶಿಸಿದ ನೈಋತ್ಯ ಮುಂಗಾರಿನ ಪ್ರಗತಿಯನ್ನು ಗಮನಿಸಲಾಗುತ್ತಿದೆ.

Similar News