ಮಣಿಪುರ: ಶಾಂತಿ ಸ್ಥಾಪನೆಗೆ ಕೇಂದ್ರದಿಂದ ಸಮಿತಿ ರಚನೆ

Update: 2023-06-10 18:04 GMT

ಹೊಸದಿಲ್ಲಿ, ಜೂ. 10: ಮಣಿಪುರದಲ್ಲಿ ವಿವಿಧ ಜನಾಂಗೀಯ ಗುಂಪುಗಳ ನಡುವೆ ಶಾಂತಿ ಸ್ಥಾಪನೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹಾಗೂ ಮಾತುಕತೆ ನಡೆಸಲು ಕೇಂದ್ರ ಸರಕಾರ ರಾಜ್ಯಪಾಲರ ನೇತೃತ್ವದಲ್ಲಿ ಸಮಿತಿ ರೂಪಿಸಿದೆ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಹೇಳಿದೆ.

ಶಾಂತಿ ಸ್ಥಾಪನೆ ಸಮಿತಿಯ ಸದಸ್ಯರಲ್ಲಿ ಮುಖ್ಯಮಂತ್ರಿ ಕೆಲವು ಸಚಿವರು, ಸಂಸದರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ನಾಯಕರು ಹಾಗೂ ನಾಗರಿಕ ಸಮಾಜದ ಗುಂಪುಗಳು ಒಳಗೊಳ್ಳಲಿವೆ ಎಂದು ಅದು ತಿಳಿಸಿದೆ. ನಿವೃತ್ತ ಐಎಎಸ್ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಹಾಗೂ ವಿವಿಧ ಜನಾಂಗದ ಪ್ರತಿನಿಧಿಗಳನ್ನು ಕೂಡ ಈ ಸಮಿತಿ ಒಳಗೊಂಡಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಕೇಂದ್ರ ಸಚಿವ ಅಮಿತ್ ಶಾ ಅವರು ಮೇ 29ರಿಂದ ಜೂನ್ 1ರ ವರೆಗೆ ಮಣಿಪುರಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಶಾಂತಿ ಸಮಿತಿ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು. 

Similar News