RSS ಅಂಗ ಸಂಸ್ಥೆಯಿಂದ 'ಗರ್ಭ ಸಂಸ್ಕಾರ' ಅಭಿಯಾನ; 'ದೇಶಭಕ್ತ' ಮಕ್ಕಳಿಗಾಗಿ ಗೀತೆ ಪಠಿಸಲು ಗರ್ಭಿಣಿಯರಿಗೆ ಪ್ರೋತ್ಸಾಹ

Update: 2023-06-10 18:39 GMT

ಹೊಸದಿಲ್ಲಿ: ಆರೆಸ್ಸೆಸ್ ಅಂಗ ಸಂಸ್ಥೆಯಾಗಿರುವ ರಾಷ್ಟ್ರ ಸೇವಿಕಾ ಸಂಘದ ಸಂವರ್ಧಿನಿ ನ್ಯಾಸ್ ಘಟಕವು ನಾಳೆ (ರವಿವಾರ) 'ಗರ್ಭ ಸಂಸ್ಕಾರ' ಅಭಿಯಾನವನ್ನು ಆರಂಭಿಸಲಿದೆ. 

'ಸಂಸ್ಕಾರವಂತ' ಹಾಗೂ 'ದೇಶಭಕ್ತ' ಮಕ್ಕಳು ಜನಿಸಲು ಬೇಕಾಗಿ ಈ ಅಭಿಯಾನ ಆರಂಭಿಸಲಾಗಿದ್ದು, ಇದರಡಿಯಲ್ಲಿ ಗರ್ಭಿಣಿಯರಿಗೆ ಭಗವದ್ಗೀತೆ ಮತ್ತು ರಾಮಾಯಣ ಓದಲು ಪ್ರೋತ್ಸಾಹಿಸಲು ಯೋಜಿಸಲಾಗಿದೆ. ಮಾತ್ರವಲ್ಲದೆ, ಸಂಸ್ಕೃತ ಮಂತ್ರಗಳ ಉಚ್ಚಾರಣೆ ಹಾಗೂ ಯೋಗಾಭ್ಯಾಸ ಕೂಡಾ ಮಾಡಿಸಲು ಸಂಘವು ಸಜ್ಜಾಗಿದೆ. 

ಯೋಗಾಭ್ಯಾಸದಿಂದ ಗರ್ಭಿಣಿಯರಿಗೆ ಸಹಜ ಹೆರಿಗೆ ಆಗಲಿದೆ ಎಂದು ಸಂಸ್ಥೆ ಹೇಳಿದೆ.

ಆನ್‌ಲೈನ್ ಅಭಿಯಾನಕ್ಕೆ ರವಿವಾರ ಚಾಲನೆ ಸಿಗಲಿದ್ದು, ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರರಾಜನ್ ಮತ್ತು ಇತರ ಗಣ್ಯರು ಉಪಸ್ಥಿತರಿರುತ್ತಾರೆ ಎಂದು ಸಂವರ್ಧಿನಿ ನ್ಯಾಸ್ ಘಟಕವು ಹೇಳಿದೆ.

ಈ ಕಾರ್ಯಕ್ರಮವನ್ನು ವೈಜ್ಞಾನಿಕ ವಿಧಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿರುವ ಸಂಸ್ಥೆಯು, ಗರ್ಭಾವಸ್ಥೆಯಿಂದ ಹೆರಿಗೆಯವರೆಗಿನ ಅವಧಿಯಲ್ಲಿ ಶಿಶುಗಳು ಗರ್ಭದಲ್ಲಿಯೇ ಸಂಸ್ಕಾರವನ್ನು ಕಲಿಯುತ್ತವೆ. ಈ ಕಲಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಪ್ರಕ್ರಿಯೆಯು ಮಗುವಿಗೆ ಎರಡು ವರ್ಷ ಆಗುವವರೆಗೆ ಮುಂದುವರಿಸಲಾಗುವುದು ಎಂದು ಹೇಳಿದೆ.

Similar News