×
Ad

ಮಣಿಪುರದಲ್ಲಿ ಮುಂದುವರಿದ ಹಿಂಸಾಚಾರ: ಇನ್ನೂ 5 ದಿನ ಇಂಟರ್ನೆಟ್ ನಿಷೇಧ ಮುಂದುವರಿಕೆ

Update: 2023-06-11 21:26 IST

ಇಂಫಾಲ: ಮಣಿಪುರದಲ್ಲಿ ಉಗ್ರಗಾಮಿಗಳ ದಾಳಿ ಹಾಗೂ ಹಿಂಸಾಚಾರ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಶನಿವಾರದಿಂದ ಇನ್ನೂ ಐದು ದಿನಗಳವರೆಗೆ ಅಂತರ್ಜಾಲ ಸೇವೆಗಳಿಗೆ ನಿಷೇಧವನ್ನು ಹೇರಿದೆ. ಇಂಟರ್ನೆಟ್ ನಿಷೇಧವು ಜೂನ್ 15ರಂದು ಮಧ್ಯಾಹ್ನ 3 ಗಂಟೆಯಿಂದ ಜಾರಿಗೆ  ಬರಲಿದೆ. ಇದಕ್ಕೂ ಮೊದಲು ಶನಿವಾರದವರೆಗೆ ಇಂಟರ್ನೆಟ್ ನಿಷೇಧವನ್ನು ವಿಸ್ತರಿಸಲಾಗಿತ್ತು.

ಈ ಮಧ್ಯೆ  ಪೂರ್ವ ಇಂಫಾಲ ಹಾಗೂ ಪಶ್ಚಿಮ ಇಂಫಾಲ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಕರ್ಫ್ಯೂವನ್ನು  ಸಡಿಲಿಸಲಾಗಿದೆ. ರಾಜಧಾನಿ ಇಂಫಾಲದಲ್ಲಿ ಬೆಳಗ್ಗೆ 5ರಿಂದ ಸಂಜೆ 8 ಗಂಟೆಯವರೆಗೆ ಕರ್ಫ್ಯೂ  ಸಡಿಲಿಸಲಾಗಿದೆ. ಇದಕ್ಕೂ ಮೊದಲು ಬೆಗ್ಗೆ 5ರಿಂದ ಸಂಜೆ 6 ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿತ್ತು.
 
ಇಂಫಾಲ ಪಶ್ಚಿಮ ಜಿಲ್ಲೆಯ ಖಾಕೋನ್ ಗ್ರಾಮದಲ್ಲಿ ಶುಕ್ರವಾರ ಬಂಡುಕೋರರ ಗುಂಪೊಂದು  ಭದ್ರತಾಪಡೆಗಳ ಸೋಗಿನಲ್ಲಿ, ಗ್ರಾಮಸ್ಥರನ್ನು ಮನೆಯಿಂದ ಹೊರಕ್ಕೆ ಬರುವಂತೆ ಸೂಚಿಸಿ, ಅವರಿಗೆ ಗುಂಡಿಕ್ಕಿದ್ದು ಘಟನೆಯಲ್ಲಿ ಮೂವರು ಮೃತಪಟ್ಟಿದ್ದರು. 

ಈ ಮಧ್ಯೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಶ್ವ ಶರ್ಮಾ ಅವರು ಶನಿವಾರ ಮಣಿಪುರ  ಮುಖ್ಯಮಂತ್ರಿ ಎನ್.ಬಿರೇನ್ಸಿಂಗ್ ಅವರನ್ನು ಭೇಟಿಯಾಗಿ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.

ಮಣಿಪುರ ಹಿಂಸಾಚಾರದಲ್ಲಿ ಸಂತ್ರಸ್ತರಾದ ಸುಮಾರು 37,450 ಮಂದಿ ಪ್ರಸಕ್ತ 272 ಪರಿಹಾರ ಶಿಬಿರಗಳಲ್ಲಿ ಆಶ್ರಯಪಡೆದಿದ್ದಾರೆ. ಕಳೆದ ತಿಂಗಳಿನಿಂದ ಮಣಿಪುರದಲ್ಲಿ ಮೈತೆಯಿ ಹಾಗೂ ಕುಕಿ ಬುಡಕಟ್ಟುಗಳ ನಡುವೆ ನಡೆದ ಘರ್ಷಣೆಗಳಲ್ಲಿ ಈವರೆಗೆ ನೂರಕ್ಕೆ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸಹಜತೆಯನ್ನು ಮರಳಿ ತರಲು 10 ಸಾವಿರಕ್ಕೂ ಅಧಿಕ ಸೇನಾ ಹಾಗೂ ಆರೆಸೈನಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Similar News