"ಗೋಡ್ಸೆ ಭಕ್ತರನ್ನು ಬಿಜೆಪಿಯಿಂದ ಹೊರದಬ್ಬಿರಿ ಇಲ್ಲವೇ ಗಾಂಧೀಜಿ ಪ್ರತಿಮೆಗೆ ನಮಸ್ಕರಿಸುವ ನಾಟಕ ನಿಲ್ಲಿಸಿ"
ಪ್ರಧಾನಿ ನರೇಂದ್ರ ಮೋದಿಗೆ ಕಾಂಗ್ರೆಸ್ ಸವಾಲು
ಹೊಸದಿಲ್ಲಿ: ನಾಥೂರಾಮ್ ಗೋಡ್ಸೆಯನ್ನು ವೈಭವೀಕರಿಸಿ ಕೆಲವು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ಪಕ್ಷವು ರವಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ‘‘ ಮಹಾತ್ಮಾ ಗಾಂಧೀಜಿಯವರ ಹಂತಕನ ಭಕ್ತರನ್ನು ನರೇಂದ್ರ ಮೋದಿಯವರು ಅವರ ಪಕ್ಷದಿಂದ ಹೊರದಬ್ಬಬೇಕು ಅಥವಾ ಗಾಂಧೀಜಿ ಪ್ರತಿಮೆಗಳ ಮುಂದೆ ತಲೆಬಾಗಿ ನಮಿಸುವ ನಾಟಕವನ್ನು ಕೊನೆಗೊಳಿಸಲಿ’’ ಎಂದು ಕಟಕಿಯಾಡಿದೆ.
ಗೋಡ್ಸೆಯನ್ನು ಭಾರತದ ಸುಪುತ್ರನೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಣ್ಣಿಸಿದ ಮರುದಿನವೇ ಪ್ರಧಾನಿಯನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ. ಬಿಜೆಪಿಯ ಹಿರಿಯ ನಾಯಕರು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದರೆ ಪ್ರಧಾನಿ ಆ ಬಗ್ಗೆ ಏನೂ ಹೇಳುತ್ತಿಲ್ಲ ಹಾಗೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.
‘‘ಇಂದು ನಾವು ಪ್ರಧಾನಿ ಮೋದಿಯವರಿಗೆ ಸವಾಲೆಸೆಯುತ್ತಿದ್ದೇವೆ. ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಗೆಸೆಯಬೇಕು ಅತವಾ ಗಾಂಧೀಜಿ ಪ್ರತಿಮೆಯ ಮುಂದೆ ತಲೆಬಾಗಿ ನಮಸ್ಕರಿಸುವ ನಾಟಕವನ್ನು ಕೊನೆಗೊಳಿಸಬೇಕು. ದೇಶದಲ್ಲಿ ಗೋಡ್ಸೆ ಭಕ್ತರಿಗೆ ಸ್ಥಾನವಿಲ್ಲ. ಮೋದಿಜಿಯವರೇ , ಈ ಬಗ್ಗೆ ನೀವು ನಿರ್ಧರಿಸಬೇಕು’’ ಎಂದು ಕಾಂಗ್ರೆಸ್ ಹಿಂದಿಯಲ್ಲಿ ಟ್ವೀಟ್ ಮಾಡಿದೆ.
ಮೋದಿಯವರು ತನ್ನ ಜಪಾನ್ ಪ್ರವಾಸದ ವೇಳೆ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಗೆ ನಮಿಸುತ್ತಿರುವ ಛಾಯಾಚಿತ್ರವನ್ನು ಕೂಡಾ ಪ್ರಧಾನಿ ಮೋದಿ ಟ್ವೀಟಿಸಿದ್ದಾರೆ.
‘‘ಮೊದಲಿಗೆ ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು ನಾಥುರಾಮ್ ಗೋಡ್ಸೆಯನ್ನು ದೇಶಭಕ್ತನೆಂದು ಕರೆದಿದ್ದರು. ಈಗ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆತನ ಗುಣಗಾನ ಮಾಡಿದ್ದಾರೆ. ಆದರೆ, ಸ್ವಚ್ಛಭಾರತ ಆಂದೋಲನಕ್ಕೆ ಮಹಾತ್ಮಾಗಾಂಧೀಜಿಯರವ ಕನ್ನಡಕಗಳನ್ನೇ ಲೋಗೋ ಆಗಿ ಪರಿವರ್ತಿಸಿರುವ ವ್ಯಕ್ತಿಯು ತನ್ನ ಸಹದ್ಯೋಗಿಗಳ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ’’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.
ಕೆಲವೇ ದಿನಗಳ ಮೊದಲು ಇನ್ನೋರ್ವ ಬಿಜೆಪಿ ನಾಯಕ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಕೂಡಾ ಗೋಡ್ಸೆಯನ್ನು ದೇಶಭಕ್ತನೆಂದು ಪ್ರಶಂಸಿದ್ದುದು ವಿವಾದಕ್ಕೆ ಕಾರಣವಾಗಿತ್ತು.