‘21 ಉದ್ಯೋಗಗಳು,225 ಹಗರಣಗಳು’: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ
ಜಬಲ್ಪುರ: ಸೋಮವಾರ ಇಲ್ಲಿ ರ್ಯಾಲಿಯೊಂದನ್ನು ನಡೆಸುವ ಮೂಲಕ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಪಕ್ಷದ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡಿದರು. ಶಿವರಾಜ ಸಿಂಗ್ ಚೌಹಾಣ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ ಮತ್ತು ಉದ್ಯೋಗಗಳನ್ನು ಒದಗಿಸುವಲ್ಲಿ ವಿಫಲಗೊಂಡಿದೆ ಎಂದು ಅವರು ಆರೋಪಿಸಿದರು.
ವ್ಯಾಪಂ ಮತ್ತು ಪಡಿತರ ವಿತರಣೆಯಲ್ಲಿ ಭ್ರಷ್ಟಾಚಾರವನ್ನು ಉಲ್ಲೇಖಿಸಿದ ಅವರು, ‘ರಾಜ್ಯದಲ್ಲಿ ಬಿಜೆಪಿಯ 220 ತಿಂಗಳುಗಳ ಅಧಿಕಾರಾವಧಿಯಲ್ಲಿ 225 ಹಗರಣಗಳು ನಡೆದಿವೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಕೇವಲ 21 ಸರಕಾರಿ ಉದ್ಯೋಗಗಳನ್ನು ಒದಗಿಸಲಾಗಿದೆ. ಈ ಅಂಕಿಅಂಶವನ್ನು ನನ್ನ ಗಮನಕ್ಕೆ ತಂದಾಗ ನನ್ನ ಕಚೇರಿಯಿಂದ ಮೂರು ಬಾರಿ ಪರಿಶೀಲನೆ ಮಾಡಿಸಿದ್ದೆ ಮತ್ತು ಇದು ಸತ್ಯ ಎನ್ನುವುದು ಕಂಡು ಬಂದಿದೆ ’ ಎಂದರು.
ಮೇ 28ರಂದು ಉಜ್ಜಯಿನಿಯ ಮಹಾಕಾಲ ಲೋಕ ಕಾರಿಡಾರ್ನಲ್ಲಿ ಗಾಳಿಯಿಂದಾಗಿ ಆರು ಮೂರ್ತಿಗಳಿಗೆ ಹಾನಿಯುಂಟಾಗಿದ್ದನ್ನು ಪ್ರಸ್ತಾಪಿಸಿದ ಪ್ರಿಯಾಂಕಾ,ಚೌಹಾಣ್ ಸರಕಾರವು ದೇವರನ್ನೂ ಬಿಟ್ಟಿಲ್ಲ ಎಂದರು. ಪ್ರಸಿದ್ಧ ಮಹಾಕಾಲೇಶ್ವರ ದೇವಸ್ಥಾನದ 900 ಮೀ.ಉದ್ದದ ಕಾರಿಡಾರ್ನ್ನು 856 ಕೋ.ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು,351 ಕೋ.ರೂ.ವೆಚ್ಚದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ಅಕ್ಟೋಬರ್ ನಲ್ಲಿ ಉದ್ಘಾಟಿಸಿದ್ದರು.
ಬಿಜೆಪಿಯ ‘ಡಬಲ್ ಇಂಜಿನ್ ಸರಕಾರ’ ಚುನಾವಣಾ ಪ್ರಚಾರವನ್ನು ಲೇವಡಿ ಮಾಡಿದ ಪ್ರಿಯಾಂಕಾ,‘ನಾವು ಬಹಳಷ್ಟು ಡಬಲ್ ಇಂಜಿನ್ ಮತ್ತು ಟ್ರಿಪಲ್ ಇಂಜಿನ್ ಸರಕಾರಗಳನ್ನು ನೋಡಿದ್ದೇವೆ, ಆದರೆ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದ ಜನರು ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡಿದ್ದಾರೆ ’ ಎಂದರು.
ಕಾಂಗ್ರೆಸ್ ನಿಂದ ಬಿಜೆಪಿಗೆ ಜಿಗಿದು ಕೇಂದ್ರದಲ್ಲಿ ಸಚಿವರಾಗಿರುವ ಜ್ಯೋತಿರಾದಿತ್ಯ ಸಿಂದಿಯಾರನ್ನು ಹೆಸರಿಸದೆ ಅವರನ್ನು ವ್ಯಂಗ್ಯವಾಡಿದ ಪ್ರಿಯಾಂಕಾ,ಮಧ್ಯಪ್ರದೇಶದ ಕೆಲವು ನಾಯಕರು ಅಧಿಕಾರಕ್ಕಾಗಿ ಪಕ್ಷದ ಸಿದ್ಧಾಂತವನ್ನು ತೊರೆದಿದ್ದಾರೆ ಎಂದು ಕುಟುಕಿದರು. 2020ರಲ್ಲಿ ಸಿಂದಿಯಾ ಮತ್ತು ಅವರಿಗೆ ನಿಷ್ಠರಾಗಿದ್ದ ಶಾಸಕರು ಬಿಜೆಪಿಗೆ ಸೇರುವ ಮೂಲಕ ರಾಜ್ಯದಲ್ಲಿಯ ಕಮಲನಾಥ ನೇತೃತ್ವದ ಸರಕಾರವನ್ನು ಉರುಳಿಸಿದ್ದರು ಮತ್ತು ಇದು ಚೌಹಾಣ ಅಧಿಕಾರಕ್ಕೆ ಮರಳಲು ದಾರಿಯನ್ನು ಸುಗಮಗೊಳಿಸಿತ್ತು.