ಕೆನಡಾದಿಂದ ಭಾರತೀಯ ವಿದ್ಯಾರ್ಥಿಗಳ ಗಡಿಪಾರು: ತನಿಖೆ ಆರಂಭಿಸಿದ ಪಂಜಾಬ್ ಪೊಲೀಸರು
ಲೂಧಿಯಾನಾ: ಕೆನಡಾದಿಂದ ವಿದ್ಯಾರ್ಥಿಗಳ ಗಡಿಪಾರು ಪ್ರಕರಣದ ತನಿಖೆಗಾಗಿ ಪಂಜಾಬ್ ಪೊಲೀಸ್ ಸೋಮವಾರ ಲೂಧಿಯಾನಾ ವಲಯ ಐಜಿಪಿ ಕೌಸ್ತುಭ ಶರ್ಮಾರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಿದೆ.
ಜಲಂಧರ್ ನ ಏಜೆಂಟ್ನೋರ್ವ ಒದಗಿಸಿದ್ದ ‘ನಕಲಿ ಆಫರ್ ಲೆಟರ್’ ಗಳಿಂದಾಗಿ ಗಡಿಪಾರುಗೊಳ್ಳುವ ಅಪಾಯವನ್ನು ಎದುರಿಸುತ್ತಿರುವ ಸುಮಾರು 700 ವಿದ್ಯಾರ್ಥಿಗಳಿಗೆ ಈ ಪ್ರಕರಣವು ಸಂಬಂಧಿಸಿದೆ.
ಏಜೆಂಟ್ ವಂಚನೆಗಳಲ್ಲಿ ತೊಡಗಿಕೊಂಡಿದ್ದಾನೆ ಎನ್ನುವುದು ತಮಗೆ ಆರಂಭದಲ್ಲಿ ಗೊತ್ತಿರಲಿಲ್ಲ, ತಾವು ಈ ವಿಷಯದಲ್ಲಿ ಅಮಾಯಕರಾಗಿದ್ದೇವೆ ಎಂದು ಈ ವಿದ್ಯಾರ್ಥಿಗಳು ಪ್ರತಿಪಾದಿಸಿದ್ದಾರೆ. ತಮ್ಮ ಸಮಸ್ಯೆಗೆ ನ್ಯಾಯಯುತ ಪರಿಹಾರಕ್ಕಾಗಿ ಆಗ್ರಹಿಸಿ ಅವರು ಮೇ 29ರಂದು ಕೆನಡಾದ ಟೊರೊಂಟೊದ ಮಿಸಿಸೌಗಾದಲ್ಲಿನ ಕೆನೆಡಿಯನ್ ಬಾರ್ಡರ್ ಸೆಕ್ಯೂರಿಟಿ ಏಜೆನ್ಸಿಯ ಕೇಂದ್ರ ಕಚೇರಿಯ ಹೊರಗೆ ಪ್ರತಿಭಟನೆ ಆರಂಭಿಸಿದ್ದಾರೆ.
ಕಳೆದ ಮಾರ್ಚ್ ನಲ್ಲಿ ಕೆಲವು ವಿದ್ಯಾರ್ಥಿಗಳು ಕೆನಡಾದಲ್ಲಿ ಕಾಯಂ ವಾಸಕ್ಕಾಗಿ ಅರ್ಜಿ ಸಲ್ಲಿಸಿದಾಗ ಈ ವಿಷಯವು ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು.
ನಾಲ್ಕು ದಿನಗಳ ಹಿಂದೆ ಈ ವಿಷಯಕ್ಕೆ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ ಅವರು, ಸದುದ್ದೇಶದಿಂದ ವರ್ತಿಸಿದ್ದ ವಿದ್ಯಾರ್ಥಿಗಳನ್ನು ದಂಡಿಸುವುದು ಅನ್ಯಾಯ, ತಪ್ಪಿತಸ್ಥರನ್ನು ಹೊಣೆಯಾಗಬೇಕು ಎಂದು ತಿಳಿಸಿದ್ದರು.