ಬಡವರಿಗೆ ಕೊಟ್ಟ ಯೋಜನೆಯನ್ನು ಬಿಜೆಪಿ ಬೆಂಬಲಿಸಿದೆಯೇ ಹೊರತು ವಿರೋಧಿಸಿಲ್ಲ: ಕೋಟ ಶ್ರೀನಿವಾಸ ಪೂಜಾರಿ
ಉಡುಪಿ, ಜೂ.13: ಬಡವರಿಗೆ ಕೊಟ್ಟ ಯೋಜನೆಯನ್ನು ಬಿಜೆಪಿ ಬೆಂಬಲಿ ಸಿದೆಯೇ ಹೊರತು ಯಾವತ್ತೂ ವಿರೋಧಿಸಿಲ್ಲ. ಶಕ್ತಿ ಯೋಜನೆಯನ್ನು ನಾವು ಸ್ವಾಗತ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂದು ಆರ್ಥಿಕ ತಜ್ಞರು, ನಿವೃತ್ತ ಅಧಿಕಾರಿಗಳು ಗ್ಯಾರೆಂಟಿಗಳ ಜಾರಿ ಕಷ್ಟ ಎಂದು ಹೇಳಿದ್ದರು. ಆಗ ಸಂದೇಹ, ಸಂಶಯವನ್ನು ಬಿಜೆಪಿ ವ್ಯಕ್ತಪಡಿಸಿರುವುದು ನಿಜ. ಅದೇ ರೀತಿ ಉಳಿದ ನಾಲ್ಕು ಗ್ಯಾರಂಟಿಗಳನ್ನು ಜಾರಿಗೆ ತರುವ ಸರ್ವ ಜವಾಬ್ದಾರಿ ಕಾಂಗ್ರೆಸ್‌ನವರ ಮೇಲಿದೆ ಎಂದರು.
ಪ್ರತಿ ವರ್ಷ ಜನವರಿ ತಿಂಗಳಲ್ಲಿ ಕೆಇಆರ್‌ಸಿ ವಿದ್ಯುತ್ ದರ ಏರಿಕೆಯ ಪ್ರಸ್ತಾವ ಸಲ್ಲಿಸುವ ರೂಢಿ ಇದೆ. ನಮ್ಮ ಸರಕಾರ ವಿದ್ಯುತ್ ದರ ಏರಿಕೆಗೆ ಅನುಮೋದನೆ ಕೊಟ್ಟಿರಲಿಲ್ಲ. ಚುನಾವಣೆ ಘೋಷಣೆಯಾದ ನಂತರ ಅಧಿಕಾರಿಗಳು ಅನು ಮೋದನೆ ಕೊಟ್ಟಿರಬಹುದು. ಸಾರ್ವಜನಿಕ ಹಿತಾಸಕ್ತಿಯ ಕಾರಣ ಮುಂದಿಟ್ಟು ಈ ಆದೇಶ ರದ್ದು ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಲ್ಲಿ ನಾನು ವಿನಂತಿ ಮಾಡುತ್ತೇನೆ ಎಂದು ಅವರು ಹೇಳಿದರು.
ನಮ್ಮ ಸರಕಾರ ಮಾಡಿದ ಗೋ ಹತ್ಯೆ ನಿಷೇಧ, ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದು ಹೇಳುತ್ತಾರೆ. ಅದೇ ರೀತಿ ವಿದ್ಯುತ್ ದರ ಪರಿಷ್ಕರಣೆ ಆದೇಶವನ್ನು ಕೂಡ ವಾಪಾಸ್ಸು ಪಡೆಯಲಿ. ಇದು ಕಾಯ್ದೆ ತಿದ್ದುಪಡಿಯ ವಿಚಾರ ಅಲ್ಲ. ಕೇವಲ ಸುತ್ತೋಲೆಯನ್ನು ವಾಪಾಸ್ಸು ಪಡೆಯುವುದಾಗಿದೆ. 200 ಯುನಿಟ್ ಉಚಿತ ಕೊಡುತ್ತೇವೆ ಎಂದು ಎರಡು ಮೂರು ಪಟ್ಟು ವಿದ್ಯುತ್ ದರ ಏರಿಸುವುದು ಸಮಂಜಸ ಅಲ್ಲ. ರಾಜ್ಯದ ಜನರಿಗೆ ಹಿಂದಿನ ದರವನ್ನೇ ನಿಗದಿಪಡಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರಜಾಪ್ರಭುತ್ವದಲ್ಲಿ ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ ಮತ್ತು ಅಧಿಕಾರ ಕೊಟ್ಟಿದ್ದಾರೆ. ಗ್ಯಾರೆಂಟಿ ಜಾರಿ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ. ಕೊಟ್ಟ ಮಾತು ಜಾರಿಗೆ ತನ್ನಿ ಎಂಬುದು ನಮ್ಮ ನಿಲುವು. ಗ್ಯಾರಂಟಿ ಕೊಡುವ ವರೆಗೆ ಬಿಜೆಪಿ ಜನರ ಜೊತೆ ಹೋರಾಟ ಮಾಡುತ್ತದೆ ಎಂದು ಅವರು ಹೇಳಿದರು.