ಟಾಟಾ ಸ್ಟೀಲ್ ಕಾರ್ಖಾನೆಯಲ್ಲಿ ಅವಘಡ: 19 ಕಾರ್ಮಿಕರು ಗಂಭೀರ
ಧೆಂಕನಲ್: ಒಡಿಶಾದ ಧೆಂಕನಲ್ ಜಿಲ್ಲೆಯ ಮೆರಮಂಡಲಿಯಲ್ಲಿರುವ ಟಾಟಾ ಸ್ಟೀಲ್‌ನ ಸ್ಥಾವರದಲ್ಲಿ ಉಗಿ ಕೊಳವೆ ಸೋರಿಕೆಯಾಗಿದ್ದು, ಪರಿಣಾಮ ಕನಿಷ್ಠ 19 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಉಕ್ಕಿನ ಕಾರ್ಖಾನೆಯ ಕಾರ್ಮಿಕರನ್ನು ಚಿಕಿತ್ಸೆಗಾಗಿ ಕಟಕ್‌ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಟಾಟಾ ಸ್ಟೀಲ್ಸ್, "ಒಡಿಶಾದ ಧೆಂಕನಾಲ್‌ನಲ್ಲಿರುವ ಟಾಟಾ ಸ್ಟೀಲ್ BFPP2 ವಿದ್ಯುತ್ ಸ್ಥಾವರದಲ್ಲಿ ಅಪಘಾತ ಸಂಭವಿಸಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ" ಎಂದು ತಿಳಿಸಿದೆ.
"ಇಂದು ಮಧ್ಯಾಹ್ನ 1 ಗಂಟೆಗೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೆಲವರಿಗೆ ಗಾಯಗಳಾಗಿವೆ. ಅವರನ್ನು ತಕ್ಷಣವೇ ಸ್ಥಾವರದ ಆವರಣದಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ಗೆ ಸ್ಥಳಾಂತರಿಸಲಾಗಿದೆ. ಕಂಪನಿಯ ಆಂಬ್ಯುಲೆನ್ಸ್‌ನಲ್ಲಿ ವೈದ್ಯರು ಮತ್ತು ಅರೆವೈದ್ಯರು ಜೊತೆಯಲ್ಲಿದ್ದಾರೆ" ಎಂದು ಟಾಟಾ ಸ್ಟೀಲ್ ಹೇಳಿದೆ.