×
Ad

ಉಡುಪಿ: ಒಂದೇ ಮಳೆಗೆ ರಾ.ಹೆದ್ದಾರಿ 66ರಲ್ಲಿ ಹೊಂಡಗಳು ಸೃಷ್ಠಿ!

ಕೆಲ ತಿಂಗಳ ಹಿಂದಿನ ಮರುಡಾಮರೀಕರಣ ಕಾಮಗಾರಿಯಲ್ಲಿ ಗುಂಡಿಗಳು

Update: 2023-06-13 17:18 IST

ಉಡುಪಿ, ಜೂ.13: ಕಳೆದ ವರ್ಷದ ಮಳೆಗಾಲದಲ್ಲಿ ಉಡುಪಿ ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾಣಿಸಿಕೊಂಡ ಹೊಂಡ ಗುಂಡಿಗಳು ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಇದೀಗ ಈ ಬಾರಿಯ ಒಂದೇ ಮಳೆಗೆ ಕೆಲವೇ ತಿಂಗಳ ಹಿಂದೆಯಷ್ಟೇ ಮಾಡಿರುವ ಮರುಡಾಮರೀಕರಣದ ಕಾಮಗಾರಿಯೇ ಕಿತ್ತು ಹೋಗಿ ಅಲ್ಲಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ.

ಕಳೆದ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಭಾರೀ ಮಳೆಯಾದ ಪರಿಣಾಮ ಹೆಜಮಾಡಿಯಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ 66ರ ಹೊಂಡ ಗುಂಡಿಗಳಿಂದ ತುಂಬಿ ಹೋಗಿತ್ತು. ಇದರ ವಿರುದ್ಧ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ಹಾಗೂ ಟ್ರೋಲ್‌ಗಳು ಕೂಡ ಆಗಿತ್ತು. ಬಳಿಕ ಮಳೆಗಾಲ ಮುಗಿದ ಬಳಿಕ ಈ ಗುಂಡಿ ಗಳಿಗೆ ತೇಪೆ ಹಚ್ಚುವ ಕಾರ್ಯ ಮಾಡಲಾಗಿತ್ತು.

ಈ ವರ್ಷದ ಮಾರ್ಚ್ ತಿಂಗಳಲ್ಲಿ ಹೊಂಡ ಗುಂಡಿ ಹೆಚ್ಚು ಕಂಡುಬರುತ್ತಿದ್ದ ಭಾಗದಲ್ಲಿ ರಸ್ತೆಯ ಮೇಲ್ಪದರ ತೆಗೆದು ಮರುಡಾಮರೀಕರಣ ಮಾಡಲಾಗಿತ್ತು. ಕಾಪು, ಉದ್ಯಾವರ, ಉಡುಪಿ, ಪಡುಬಿದ್ರೆ, ಬ್ರಹ್ಮಾವರ, ಕುಂದಾಪುರ ಸೇರಿದಂತೆ ಹೀಗೆ ಹಲವು ಕಡೆಗಳಲ್ಲಿ ಮರುಡಾಮರೀಕರಣವನ್ನು ಮಾಡಲಾಗಿತ್ತು. ಆದರೆ  ಇದೀಗ ಈ ಮರು ಡಾಮರೀಕರಣ ಕೂಡ ಒಂದೇ ಮಳೆಗೆ ಕಿತ್ತು ಹೋಗಿ ಹಲವು ಕಡೆಗಳಲ್ಲಿ ಹೊಂಡಗುಂಡಿಗಳು ಸೃಷ್ಠಿಯಾಗುತ್ತಿವೆ.

ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆ ನೀರು ಸೂಕ್ತ ರೀತಿ ಯಲ್ಲಿ ಚರಂಡಿಗೆ ಹರಿದು ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿದೆ. ಇದರ ಪರಿಣಾಮ ಡಾಮರು ಸವೆತದಿಂದಾಗಿ ಹೊಂಡಗಳು ನಿರ್ಮಾಣವಾಗುತ್ತಿವೆ. ಅಲ್ಲದೆ ಕಾಮಗಾರಿಯ ಗುಣಮಟ್ಟ ಕೂಡ ಸರಿ ಇಲ್ಲದ ಕಾರಣ ಈ ರೀತಿ ಹೊಂಡಗಳು ಕಾಣಿಸಿಕೊಂಡಿವೆ. ಇದರಿಂದ ಬೈಕ್ ಸವಾರರಿಗೆ ಬಹಳಷ್ಠು ತೊಂದರೆಯಾಗಲಿದೆ. ಅಲ್ಲದೆ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ಬಾರದಿದ್ದರೂ ಉದ್ಯಾವರ, ಕಟಪಾಡಿ, ಕಾಪು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುಂಡಿಗಳು ಕಾಣ ಸಿಗುತ್ತಿವೆ. ಅಲ್ಲಲ್ಲಿ ಡಾಮರು ಕಿತ್ತು ಹೋಗಿ ನೀರು ನಿಲ್ಲುತ್ತಿವೆ. ಇದಕ್ಕೆ ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳದಿದ್ದರೆ ಈ ಗುಂಡಿಗಳು ಮತ್ತಷ್ಟು ವಿಸ್ತಾರಗೊಳ್ಳುವ ಮತ್ತು ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ.

"ಉಡುಪಿ, ಕುಂದಾಪುರ, ಬೈಂದೂರು ಸಹಿತ ಜಿಲ್ಲೆಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಗಾಲ ದಲ್ಲಿ ಉಂಟಾಗುವ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಇಲಾಖೆಯೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಿದ ಹಿನ್ನೆಲೆ ಸಮಸ್ಯೆಗಳಿರುವ ಭಾಗದಲ್ಲಿ ತುರ್ತು ಕಾಮಗಾರಿ ಮಾಡಿದ್ದಾರೆ. ಇದೀಗ ಜಿಲ್ಲೆಯ ಮತ್ತಷ್ಟು ಕಡೆ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಸಮಸ್ಯೆ ಯಾಗುತ್ತಿರುವ ದೂರುಗಳು ಬರುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಬಂಧಿಸಿದ ಗುತ್ತಿಗೆ ಕಂಪೆನಿ ಸಭೆ ಕರೆದು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಲಾಗುವುದು".
-ರಶ್ಮೀ, ಎಸ್.ಆರ್. ಕುಂದಾಪುರ ಉಪವಿಭಾಗಾಧಿಕಾರಿ

Similar News