×
Ad

ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭ: ಕಾಲೇಜು ಪ್ರಾಂಶುಪಾಲರ ವಿರುದ್ಧ ಪ್ರಕರಣ

Update: 2023-06-13 18:01 IST

ಹೊಸದಿಲ್ಲಿ: ಕಾಲೇಜು ವೃತ್ತಿಜೀವನ ಮಾರ್ಗದರ್ಶನ ಕಾರ್ಯಕ್ರಮವನ್ನು ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಆರಂಭಿಸಿದ್ದಕ್ಕಾಗಿ ಮಹಾರಾಷ್ಟ್ರದ ಮಾಲೇಗಾಂವ್ ನಲ್ಲಿ ಕಾಲೇಜು ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮಹಾರಾಜಾ ಸಯಾಜಿರಾವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳನ್ನು ಇಸ್ಲಾಮಿನತ್ತ ಸೆಳೆಯಲಾಗುತ್ತಿದೆ ಎಂದು ಬಲಪಂಥೀಯ ಸದಸ್ಯರು ಆರೋಪಿಸಿದ ಬಳಿಕ ಎಫ್ಐಆರ್ ದಾಖಲಾಗಿದೆ. ಶಿವಸೇನೆ (ಉದ್ಧವ ಬಾಳಾಸಾಹೇಬ ಠಾಕ್ರೆ) ನಾಯಕಿ ಹಾಗೂ ಮಾಜಿ ಬಿಜೆಪಿ ಎಂಎಲ್ಸಿ ಡಾ.ಅಪೂರ್ವಾ ಹಿರೇ ಅವರು ಈ ಕಾಲೇಜನ್ನು ನಡೆಸುತ್ತಿದ್ದಾರೆ.

ಮಹಾರಾಷ್ಟ್ರದ ಬಂದರು ಅಭಿವೃದ್ಧಿ ಮತ್ತು ಗಣಿಗಾರಿಕೆ ಸಚಿವ ದಾದಾ ಭುಸೆ ಅವರೂ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿದ್ದಾರೆ. 

ಕಾರ್ಯಕ್ರಮವು ಪುಟ್ಟ ಇಸ್ಲಾಮಿಕ್ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತ್ತು ಮತ್ತು ಭಾಷಣಕಾರರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದರು. ಕಾರ್ಯಕ್ರಮ ಅಂತ್ಯಗೊಳ್ಳುತ್ತಿದೆ ಎನ್ನುವಾಗ ಇದು ಇಸ್ಲಾಮ್ ಪ್ರಚಾರದ ಪ್ರಯತ್ನವಾಗಿದೆ ಎಂದು ಹೇಳಿಕೊಂಡು ಭಾರೀ ಸಂಖ್ಯೆಯಲ್ಲಿ ಜನರು ಸಭಾಂಗಣವನ್ನು ಪ್ರವೇಶಿಸಿದ್ದರು ಎಂದು ಅಮಾನತುಗೊಂಡಿರುವ ಪ್ರಾಂಶುಪಾಲ ಡಾ.ಸುಭಾಷ ನಿಕಂ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸಂಸ್ಥೆಯು ಹೆಚ್ಚಿನ ಕಾರ್ಯಕ್ರಮಗಳನ್ನು ಇದೇ ರೀತಿ ಅರಂಭಿಸಿದೆ ಎಂದೂ ಅವರು ಹೇಳಿದರು.

ಕಳೆದ ವರ್ಷದ ಡಿಸೆಂಬರ್ ನಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಇಂತಹುದೇ ಘಟನೆಯೊಂದರಲ್ಲಿ ಸರಕಾರಿ ಶಾಲೆಯಲ್ಲಿ ಮದ್ರಸ ಮಾದರಿಯ ಪ್ರಾರ್ಥನೆಗಳನ್ನು ಪಠಿಸಲಾಗುತ್ತಿದೆ ಎಂದು ಹಿಂದುತ್ವ ಸಂಘಟನೆಯ ಸ್ಥಳೀಯ ಘಟಕವು ಆರೋಪಿಸಿದ ಬಳಿಕ ಪ್ರಾಂಶುಪಾಲರು ಮತ್ತು ಅರೆಕಾಲಿಕ ಶಿಕ್ಷಕರೋರ್ವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

Similar News