ಜಾಹೀರಾತಿನಲ್ಲಿ ‘ಲಗಾನ್ ’ಚಿತ್ರದ ದಲಿತ ಪಾತ್ರ ಬಳಕೆ: ಝೊಮೆಟೋಗೆ ಎಸ್ಸಿ ಆಯೋಗದ ನೋಟಿಸ್
ಹೊಸದಿಲ್ಲಿ: ಹಿಂದಿ ಚಲನಚಿತ್ರ ‘ಲಗಾನ್’ನಲ್ಲಿಯ ಕಚ್ರಾ ಹೆಸರಿನ ದಲಿತ ಪಾತ್ರವನ್ನು ತನ್ನ ಜಾಹೀರಾತಿನಲ್ಲಿ ತ್ಯಾಜ್ಯ ಮರುಬಳಕೆಯಿಂದ ತಯಾರಿಸಲಾದ ವಸ್ತುವಿನಂತೆ ತೋರಿಸಿದ್ದಕ್ಕಾಗಿ ಫುಡ್ ಡೆಲಿವರಿ ಕಂಪನಿ ಝೊಮೆಟೋಕ್ಕೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ನೋಟಿಸನ್ನು ಹೊರಡಿಸಿದೆ.
ಗುರುವಾರ ತನ್ನ ಜಾಹೀರಾತನ್ನು ಹಿಂದೆಗೆದುಕೊಂಡ ಝೊಮೆಟೋ, ತ್ಯಾಜ್ಯ ಮರುಬಳಕೆಯಲ್ಲಿ ಕಂಪನಿಯ ಪ್ರಯತ್ನವನ್ನು ತೋರಿಸುವುದು ತನ್ನ ಉದ್ದೇಶವಾಗಿತ್ತು, ಆದರೂ ತಾನು ಅನುದ್ದಿಷ್ಟವಾಗಿ ಕೆಲವು ಸಮುದಾಯಗಳು ಮತ್ತು ವ್ಯಕ್ತಿಗಳ ಭಾವನೆಗಳಿಗೆ ನೋವನ್ನುಂಟು ಮಾಡಿರಬಹುದು ಎಂದು ಸಮಜಾಯಿಷಿ ನೀಡಿತ್ತು.
ಜಾಹೀರಾತು ಚಿತ್ರದಲ್ಲಿನ ಪಾತ್ರ ಮತ್ತು ತ್ಯಾಜ್ಯಕ್ಕಾಗಿ ಹಿಂದಿ ಪದ ‘ಕಚ್ರಾ’ದ ನಡುವೆ ಸಂಬಂಧ ಕಲ್ಪಿಸಿತ್ತು. ಅದು ಚಿತ್ರದಲ್ಲಿ ದಲಿತ ಪಾತ್ರವನ್ನು ನಿರ್ವಹಿಸಿದ್ದ ನಟ ಆದಿತ್ಯ ಲಾಖಿಯಾರನ್ನು ದೀಪ,ಕಾಗದ,ಪೇಪರ್ವೇಟ್ ಮತ್ತು ವಾಟರಿಂಗ್ ಕ್ಯಾನ್ನಂತೆ ಬಿಂಬಿಸಿತ್ತು ಹಾಗೂ ಪ್ರತಿ ವಸ್ತುವಿನ ತಯಾರಿಕೆಗೆ ಎಷ್ಟು ಪ್ರಮಾಣದ ‘ಕಚ್ರಾ’ವನ್ನು ಮರುಬಳಕೆ ಮಾಡಲಾಗಿದೆ ಎಂಬ ವಿವರಗಳನ್ನು ಲಗತ್ತಿಸಿತ್ತು. ವಿಶ್ವ ಪರಿಸರ ದಿನವಾಗಿದ್ದ ಜೂ.5ರಂದು ಈ ಜಾಹೀರಾತನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.
ತಾನು ಈ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆಸುವುದಾಗಿ ಝೊಮೆಟೋ ಸ್ಥಾಪಕ ಹಾಗೂ ಕಾರ್ಯ ನಿರ್ವಹಣಾಧಿಕಾರಿ ದೀಪಿಂದರ್ ಗೋಯಲ್ ಅವರಿಗೆ ನೀಡಿರುವ ನೋಟಿಸ್ ನಲ್ಲಿ ಆಯೋಗವು ತಿಳಿಸಿದ್ದು, ನೋಟಿಸಿಗೆ ಉತ್ತರವನ್ನು ಸಲ್ಲಿಸುವಂತೆ ಸೂಚಿಸಿದೆ.
ಆಯೋಗವು ನಿಗದಿತ ಸಮಯದಲ್ಲಿ ಉತ್ತರವನ್ನು ಸ್ವೀಕರಿಸದಿದ್ದರೆ ವೈಯುಕ್ತಿವಾಗಿ ಹಾಜರಾಗುವಂತೆ ನಿಮಗೆ ಸಮನ್ಸ್ ಹೊರಡಿಸಬಹದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಆಯೋಗವು ಯೂಟ್ಯೂಬ್ ಮತ್ತು ದಿಲ್ಲಿ ಪೊಲೀಸರಿಂದಲೂ ಉತ್ತರಗಳನ್ನು ಕೋರಿದೆ.
ಜಾಹೀರಾತು ಜಾತಿವಾದಿ ಮತ್ತು ಅಮಾನವೀಯವಾಗಿದೆ ಎಂದು ಚಿತ್ರ ನಿರ್ದೇಶಕ ನೀರಜ ಘಾಯವಾನ್ ಸೇರಿದಂತೆ ಹಲವಾರು ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಿದ್ದರು.