ಅಗ್ನಿ ಪ್ರಕೋಪ, ನೆರೆ ಮತ್ತು ಭೂಕುಸಿತಗಳನ್ನು ನಿಭಾಯಿಸಲು ಮೂರು ಪ್ರಮುಖ ಯೋಜನೆಗಳನ್ನು ಪ್ರಕಟಿಸಿದ ಅಮಿತ್ ಶಾ
ಹೊಸದಿಲ್ಲಿ: ಎಲ್ಲ ರಾಜ್ಯಗಳಲ್ಲಿ ಅಗ್ನಿಶಾಮಕ ಸೇವೆಗಳ ಆಧುನೀಕರಣ, ಏಳು ಪ್ರಮುಖ ನಗರಗಳಲ್ಲಿ ನೆರೆ ಶಮನ ಕ್ರಮಗಳು ಮತ್ತು 17 ರಾಜ್ಯಗಳಲ್ಲಿ ಭೂಕುಸಿತಗಳನ್ನು ತಡೆಗಟ್ಟಲು 8,000 ಕೋ.ರೂ.ಗೂ ಅಧಿಕ ವೆಚ್ಚದ ಮೂರು ಪ್ರಮುಖ ಯೋಜನೆಗಳನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಇಲ್ಲಿ ಪ್ರಕಟಿಸಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಪತ್ತು ನಿರ್ವಹಣೆ ಸಚಿವರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ದೇಶದ ಯಾವುದೇ ಭಾಗದಲ್ಲಿ ಯಾವುದೇ ವಿಕೋಪದಿಂದ ಜೀವಹಾನಿಯಾಗದಂತೆ ನೋಡಿಕೊಳ್ಳುವಂತೆಯೂ ಮನವಿ ಮಾಡಿಕೊಂಡರು. ಅಗ್ನಿಶಾಮಕ ಸೇವೆಗಳ ಆಧುನೀಕರಣ ಮತ್ತು ವಿಸ್ತರಣೆಗಾಗಿ ಎಲ್ಲ ರಾಜ್ಯಗಳಿಗೂ ಸುಮಾರು 5,000 ಕೋ.ರೂ.ಗಳ ನೆರವನ್ನು ಒದಗಿಸಲಾಗುವುದು.
ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಅಹ್ಮದಾಬಾದ್, ಹೈದರಾಬಾದ್ ಮತ್ತು ಪುಣೆ ಈ ಏಳು ಪ್ರಮುಖ ನಗರಗಳಲ್ಲಿ ನೆರೆ ಅಪಾಯವನ್ನು ತಗ್ಗಿಸಲು 2,500 ಕೋ.ರೂ.ಗಳನ್ನು ನೀಡಲಾಗುವುದು. ಇದೇ ರೀತಿ 17 ರಾಜ್ಯಗಳಲ್ಲಿ ಭೂಕುಸಿತಗಳನ್ನು ನಿಭಾಯಿಸಲು ಸುಮಾರು 825 ಕೋ.ರೂ.ಗಳನ್ನು ನೀಡಲಾಗುವುದು. ಈ ಬಗ್ಗೆ ವಿವರವಾದ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಶಾ ತಿಳಿಸಿದರು.
ಏಳು ಪರಮಾಣು ವಿದ್ಯುತ್ ಸ್ಥಾವರಗಳು ನಿರ್ಮಾಣಗೊಳ್ಳುತ್ತಿರುವ ರಾಜ್ಯಗಳಿಗೆ ಭೇಟಿ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ)ವು ಯಾವುದೇ ಸಂಭವನೀಯ ವಿಪತ್ತನ್ನು ತಪ್ಪಿಸಲು ಈ ರಾಜ್ಯಗಳಿಗೆ ಕಟ್ಟುನಿಟ್ಟಿನ ಶಿಷ್ಟಾಚಾರಗಳನ್ನು ಹೊರಡಿಸಿದೆ ಮತ್ತು ಅವುಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದೆ ಎಂದು ತಿಳಿಸಿದ ಶಾ ‘ಇದನ್ನು ಆದ್ಯತೆಯಲ್ಲಿ ಪರಿಗಣಿಸುವಂತೆ ನಾನು ಸಂಬಂಧಿತ ಎಲ್ಲ ರಾಜ್ಯಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಪರಮಾಣು ವಿದ್ಯುತ್ ಸ್ಥಾವರಗಳು ಕಾರ್ಯಾರಂಭಗೊಳ್ಳುವ ಮುನ್ನ ಮತ್ತು ವಿದ್ಯುತ್ ಉತ್ಪಾದನೆಯ ಮುನ್ನ ಅಗತ್ಯ ವಿಪತ್ತು ತಡೆ ಕ್ರಮಗಳನ್ನು ಕೈಗೊಳ್ಳಬೇಕು. ಇದು ನಮ್ಮೆಲ್ಲರಿಗೂ ಅತ್ಯಂತ ಅಗತ್ಯವಾಗಿದೆ ’ಎಂದರು.
ಕಳೆದ ಒಂಭತ್ತು ವರ್ಷಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯಗಳು ವಿಪತ್ತು ನಿರ್ವಹಣೆಯ ನಿಟ್ಟಿನಲ್ಲಿ ಬಹಳಷ್ಟು ಸಾಧನೆಗಳನ್ನು ಮಾಡಿವೆ. ಆದರೆ ಯಾರೂ ನೆಮ್ಮದಿಯಿಂದ ಇರುವಂತಿಲ್ಲ,ಏಕೆಂದರೆ ವಿಪತ್ತುಗಳು ನಿರಂತರವಾಗಿ ತಮ್ಮ ಸ್ವರೂಪವನ್ನು ಬದಲಿಸುತ್ತಿವೆ ಮತ್ತು ಅವುಗಳ ತೀವ್ರತೆಯೂ ಹೆಚ್ಚುತ್ತಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ದೇಶವು ಶತಮಾನದ ಅತ್ಯಂತ ಭೀಕರ ಸಾಂಕ್ರಾಮಿಕವನ್ನು ಯಶಸ್ವಿಯಾಗಿ ಎದುರಿಸಿತ್ತು ಎಂದು ಹೇಳಿದ ಶಾ,ಆ ಸಂಕಷ್ಟದ ಸಮಯದಲ್ಲಿ ಕೇಂದ್ರ,ರಾಜ್ಯಗಳು ಮತ್ತು ಎಲ್ಲ ರಂಗಗಳ ಜನರು ಹೇಗೆ ವಿಪತ್ತಿನ ವಿರುದ್ಧ ಹೋರಾಡಬಹುದು ಎನ್ನುವುದಕ್ಕೆ ಅದು ಪ್ರಪಂಚಕ್ಕೆ ಅತ್ಯುತ್ತಮ ಉದಾಹರಣೆಯಾಗಿತ್ತು ಎಂದರು.
ನೈಸರ್ಗಿಕ ವಿಕೋಪಗಳನ್ನು ಎದುರಿಸುವ ರೈತರಿಗೆ ಪರಿಹಾರವನ್ನು ಹೆಚ್ಚಿಸಬೇಕು ಎಂಬ ಕೆಲವು ರಾಜ್ಯಗಳ ಸಚಿವರ ಸಲಹೆಗೆ ಪ್ರತಿಕ್ರಿಯಿಸಿದ ಶಾ,ಇದನ್ನು ಕೇಂದ್ರ ಸರಕಾರವು ಗಂಭೀರವಾಗಿ ಪರಿಶೀಲಿಸಲಿದೆ,ಆದರೆ ಇದಕ್ಕಾಗಿ ರಾಜ್ಯಗಳೂ ತಮ್ಮ ಬಜೆಟ್ ಹಂಚಿಕೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದರು.
ಕೇಂದ್ರವು ರೂಪಿಸಿರುವ ಮಾದರಿ ಅಗ್ನಿ ಮಸೂದೆ,ವಿಪತ್ತು ತಡೆ,ಗುಡುಗು ಮತ್ತು ಮಿಂಚು ಹಾಗೂ ಶೀತ ಮಾರುತ ನೀತಿಗಳ ಕುರಿತು ಮಾತನಾಡಿದ ಅವರು,ಹೆಚ್ಚಿನ ರಾಜ್ಯಗಳು ಇವುಗಳನ್ನು ಜಾರಿಗೊಳಿಸಿಲ್ಲ ಅಥವಾ ಕಾರ್ಯ ಯೋಜನೆಗಳನ್ನು ರೂಪಿಸಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಆದ್ಯತೆಯ ಮೇಲೆ ಕೆಲಸ ಮಾಡುವಂತೆ ರಾಜ್ಯಗಳಿಗೆ ಸೂಚಿಸಿದರು.
‘ಆಪದ್ ಮಿತ್ರ ’ಯೋಜನೆಯಡಿ ನೈಸರ್ಗಿಕ ವಿಕೋಪಗಳ ಸಂಭವಿಸುವ 350 ಜಿಲ್ಲೆಗಳಲ್ಲಿ ಒಂದು ಲಕ್ಷ ಯುವ ಸ್ವಯಂಸೇವಕರನ್ನು ಸಿದ್ಧಗೊಳಿಸಲಾಗುತ್ತಿದೆ ಎಂದು ತಿಳಿಸಿದ ಶಾ,ಹಲವಾರು ವಿಪತ್ತುಗಳನ್ನು ಎದುರಿಸುವಲ್ಲಿ ಇದು ಉತ್ತಮ ಫಲಿತಾಂಶಗಳನ್ನು ನೀಡಿರುವುದು ಧನಾತ್ಮಕ ಮತ್ತು ಉತ್ತೇಜಕವಾಗಿದೆ ಎಂದರು.