ʼಸ್ನೇಹಯುತವಲ್ಲದ ನಗರʼ ಜಾಗತಿಕ ಪಟ್ಟಿಯಲ್ಲಿ ಮುಂಬೈ, ದಿಲ್ಲಿ ಹೆಸರು
ಗುವಾಹಟಿ: ಭಾರತದ ಎರಡು ಮಹಾನಗರಗಳಾದ ಮುಂಬೈ ಹಾಗೂ ದಿಲ್ಲಿ ಜಗತ್ತಿನಾದ್ಯಂತ ಸ್ನೇಹಯುತವಲ್ಲದ ನಗರಗಳ ಸಾಲಿಗೆ ಸೇರಿವೆ. ಕಲಿಕೆ ಹಾಗೂ ಭಾಷಾಬೋಧನೆಯ ಆನ್ಲೈನ್ ವೇದಿಕೆಯಾದ ಪ್ರೆಪ್ಲಿ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಜಗತ್ತಿನಾದ್ಯಂತದ 53 ನಗರಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ‘ಕಮ್ಯೂನಿಟಿ ಸ್ಪಿರಿಟ್ ಇಂಡೆಕ್ಸ್’ ಸಮೀಕ್ಷೆಯು ಸ್ಥಳೀಯರಲ್ಲದವರಿಗೆ ಸ್ನೇಹಪರತೆಯವನ್ನು ಪ್ರದರ್ಶಿಸುವುದನ್ನು ಆಧರಿಸಿ ನಗರಗಳಿಗೆ ರ‍್ಯಾಂಕಿಂಗ್ ನೀಡಲಾಗಿದೆ. ಭಾರತದ ಯಾವುದೇ ನಗರವು ಸ್ನೇಹಯುತವಾದ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ದಿಲ್ಲಿ ಹಾಗೂ ಮುಂಬೈ ಮಹಾನಗರಗಳು ಸ್ನೇಹಯುತವಲ್ಲದ ನಗರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿವೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.12ರಷ್ಟು ಮಂದಿ ಮಾತ್ರವೇ ಮುಂಬೈಯನ್ನು ಸ್ನೇಹಯುತವಾದ ನಗರವೆಂದು ಪರಿಗಣಿಸಿದ್ದಾರೆ. ಅದರೆ ಇದಕ್ಕಿಂತ ದಿಲ್ಲಿ ತುಸು ಮುಂದಿದ್ದು, ಶೇ.17 ಮಂದಿ ಆ ನಗರವನ್ನು ಸ್ನೇಹಯುತವೆಂದು ಹೇಳಿದ್ದಾರೆ. ಸ್ನೇಹಯುತವಾದ ಸಿಬ್ಬಂದಿಯ ಶ್ರೇಣಿಯಲ್ಲಿ, ಮುಂಬೈನಲ್ಲಿ ಶೇ.3.91 ಹಾಗೂ ದಿಲ್ಲಿ 3.27 ಶೇಕಡ ಅಂಕಪಡೆದಿವೆ. ಮುಂಬೈ ಮಹಾನಗರವು 3.78 ಅಂಕವನ್ನು ಪಡೆದಿದ್ದರೆ, ದಿಲ್ಲಿ 4.01 ಅಂಕ ಗಳಿಸಿವೆ.
ಈ ಸಮೀಕ್ಷೆಯು ಆರು ಮಾನದಂಡಗಳನ್ನು ಆಧರಿಸಿ ಜಾಗತಿಕವಾಗಿ ಪರಕೀಯರನ್ನು ಸ್ನೇಹಯುತವಾದ ಹಾಗೂ ಸ್ನೇಹಪರವಲ್ಲದ ನಗರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ನಗರಗಳನ್ನು ಒಮ್ಮೆ ಸಂದರ್ಶಿಸಿದವರ ಪುನಾರಗಮನ, ಸುರಕ್ಷತೆ, ಎಲ್ಜಿಬಿಟಿಕ್ಯೂಪ್ಲಸ್ ಸಮಾನತೆ,ಸಮಗ್ರ ಸಂತೋಷ, ಸಾಮಾನ್ಯ ಭಾಷೆಯ ಮೂಲಕ ಸಂವಹನದಲ್ಲಿ ಸರಳತೆ ಹಾಗೂ ಸ್ನೇಹಯುತವಾದ ಸಿಬ್ಬಂದಿ ಈ ಆರು ಮಾನದಂಡಗಳಾಗಿದ್ದವು.
ಘಾನಾ ದೇಶದ ಅಕ್ರಾ, ಸ್ಥಳೀಯರಲ್ಲದವರಿಗೆ ಅತ್ಯಂತ ಕನಿಷ್ಠ ಸ್ನೇಹಪರತೆಯನ್ನು ಪ್ರದರ್ಶಿಸುವ ನಗರವೆಂಬ ಕುಖ್ಯಾತಿಯನ್ನು ಪಡೆದಿದ್ದು, 10 ಅಂಕಗಳಲ್ಲಿ ಅದಕ್ಕೆ ಕೇವಲ 3.69 ಅಂಕಗಳಷ್ಟೇ ದೊರೆತಿದೆ. ಮೊರಾಕ್ಕೊದ ಮರಾಕೇಶ್ ನಗರವು 3.69 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದೆ. ಮುಂಬೈ, ಕೌಲಾಲಂಪುರ, ರಿಯೋ ಡಿ ಜನೈರೋ ಹಾಗೂ ದಿಲ್ಲಿ ಸ್ನೇಹಪರಲ್ಲದ ನಗರಗಳ ಪಟ್ಟಿಯನ್ನು ಆಲಂಕರಿಸಿವೆ.
ಇನ್ನೊಂದೆಡೆ, 2023ರಲ್ಲಿ ಕೆನಡದ ಟೊರಾಂಟೊ ಹಾಗೂ ಆಸ್ಟ್ರೇಲಿಯದ ಸಿಡ್ನಿ, ಸ್ಥಳೀಯರಲ್ಲದವರಿಗೆ ಅತ್ಯಂತ ಸ್ನೇಹಪರತೆಯನ್ನು ಪ್ರದರ್ಶಿಸುವ ನಗರಗಳಾಗಿ ಮೂಡಿಬಂದಿವೆ.
ಸ್ನೇಹಪರತೆಯ ಕುರಿತಾದ ಈ ಎರಡೂ ನಗರಗಳ ಒಟ್ಟಾರೆ ಅಂಕ 10ರಲ್ಲಿ 7.97 ಆಗಿದೆ. ಸ್ಥಳೀಯರಲ್ಲದವರಿಗೆ ಸ್ನೇಹಪರತೆ ಪ್ರದರ್ಶಿಸುವ ನಗರಗಳ ಪಟ್ಟಿಯಲ್ಲಿ ಬ್ರಿಟನ್ನ ಎಡಿನ್ಬರ್ಗ್ ಹಾಗೂ ಮ್ಯಾಂಚೆಸ್ಟರ್ ನಗರಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಿಯಾಗಿವೆ. ಎಡಿನ್ಬರ್ಗ್ ನಗರವು ಸ್ನೇಹಪರತೆಯಲ್ಲಿ ಸಮಗ್ರವಾಗಿ 7.78 ಅಂಕಗಳಿಸಿದ್ದು, ಸುರಕ್ಷತಾ ಸೂಚ್ಯಂಕದಲ್ಲಿ 100ರಲ್ಲಿ 68.92 ಅಂಕ ಗಳಿಸಿದೆ. ಹೊರಗಿನವರಿಗೆ ಸ್ವಾಗತಾರ್ಹವಾದ ವಾತಾವರಣವಿರುವುದಕ್ಕಾಗಿ ಬ್ರಿಟನ್ನ ಮ್ಯಾಂಚೆಸ್ಟರ್ ನಗರವು 10ರಲ್ಲಿ 7.72 ಅಂಕಗಳನ್ನು ಗಳಿಸಿದೆ.
ನೂತನ ಸ್ನೇಹಿತರನ್ನು ಸಂಪಾದಿಸಲು ಜನರು ಅಂತರ್ಜಾಲ ತಾಣಗಳಲ್ಲಿ ಹುಡುಕಾಡಿದ ಪ್ರಮುಖ ನಗರಗಳನ್ನು ಕೂಡಾ ಈ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ‘‘ಸ್ನೇಹಿತರನ್ನು ಸಂಪಾದಿಸುವುದು ಹೇಗೆ’’ ಕುರಿತ ಸಮೀಕ್ಷೆಯಲ್ಲಿ ಸಾವೋ ಪೌಲೋ ಪ್ರಥಮ ಸ್ಥಾನದಲ್ಲಿದ್ದು, ನ್ಯೂಯಾರ್ಕ್ ಹಾಗೂ ಪ್ಯಾರಿಸ್ ಎರಡನೇ ಸ್ಥಾನದಲ್ಲಿದೆ.