×
Ad

2002ರ ಗುಜರಾತ್ ಗಲಭೆ ವೇಳೆಯ ಬೆಸ್ಟ್ ಬೇಕರಿ ಹತ್ಯಾಕಾಂಡ ಪ್ರಕರಣದ ಇಬ್ಬರು ಆರೋಪಿಗಳ ದೋಷಮುಕ್ತಿ

Update: 2023-06-13 21:59 IST

ಮುಂಬೈ: 14 ಮಂದಿಯ ಹತ್ಯಾಕಾಂಡ ನಡೆದ ಬೆಸ್ಟ್ ಬೇಕರಿ ಪ್ರಕರಣದ ತೀರ್ಪು 21 ವರ್ಷಗಳ ಬಳಿಕ ಹೊರಬಿದ್ದಿದೆ.2002ರ ಗುಜರಾತ್ ಗಲಭೆ ಸಂದರ್ಭ ನಡೆದ ವಡೋದರಾ ಬೆಸ್ಟ್ ಬೇಕರಿ ಹತ್ಯಾಕಾಂಡ ಪ್ರಕರಣದ ಇಬ್ಬರು ಆರೋಪಿಗಳನ್ನು ಸೆಶನ್ಸ್ ನ್ಯಾಯಾಲಯ ಮಂಗಳವಾರ ದೋಷಮುಕ್ತಗೊಳಿಸಿದೆ.

ಆರೋಪಿಗಳಾದ ಮಫತ್ ಹಾಗೂ ಹರ್ಷದ್ ಸೋಲಂಕಿ ದೋಷಮುಕ್ತಗೊಂಡವರು. ಭಾರತೀಯ ದಂಡಸಂಹಿತೆಯ ಸೆಕ್ಷನ್ ಗಳಡಿ ಸಾಕ್ಷನಾಶ ಹಾಗೂ ಕೊಲೆಯತ್ನದ ಆರೋಪಗಳನ್ನು ಅವರು ಎದುರಿಸುತ್ತಿದ್ದರು. ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಜಯಂತಿಭಾಯ್ ಗೋಹಿಲ್ ಹಾಗೂ ರಮೇಶ್ ಯಾನೆ ರಿಂಕು ಗೋಹಿಲ್ ವಿಚಾರಣೆಯ ಅವಧಿಯಲ್ಲಿ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು.

ಬೆಸ್ಟ್‌ ಬೇಕರಿ ಹತ್ಯಾಕಾಂಡ ಪ್ರಕರಣದಲ್ಲಿ ಗಂಭೀರ ಗಾಯಗಳೊಂದಿಗೆ ಬದುಕುಳಿದ ಬೇಕರಿ ಕಾರ್ಮಿಕ ಸೇರಿದಂತೆ 10 ಮಂದಿ ನೀಡಿದ ಸಾಕ್ಷಗಳನ್ನು ಆಧರಿಸಿ 2012ರಲ್ಲಿ ಮುಂಬೈ ಹೈಕೋರ್ಟ್ ಆರೋಪಿಗಳಾದ ಸಂಜಯ್ ಠಕ್ಕರ್, ದಿನೇಶ್ ರಾಜ್ಭರ್, ಜೀತು ಚೌಹಾಣ್ ಹಾಗೂ ಶಶಿಭಾಯ್ ಬಾರಿಯಾ ದೋಷಿಗಳೆಂದು ಪರಿಗಣಿಸಿ, ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು ಹಾಗೂ ಇತರ ಐವರನ್ನು ದೋಷಮುಕ್ತಗೊಳಿಸಿತ್ತು. ಈ ಸಂದರ್ಭದಲ್ಲಿ ಮಫತ್ ಹಾಗೂ ಹರ್ಷದ್ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದರು.

ಬೆಸ್ಟ್ ಬೇಕರಿ ಹತ್ಯಾಕಾಂಡ ಪ್ರಕರಣದ ವಿಚಾರಣೆಯನ್ನು ಮೊದಲ ಬಾರಿಗೆ 2003ರಲ್ಲಿ ವಡೋದರಾದ ನ್ಯಾಯಾಲಯದಲ್ಲಿ ನಡೆಸಲಾಗಿತ್ತು. ಎರಡೇ ತಿಂಗಳ ಅವಧಿಯಲ್ಲಿ ನಡೆದ ವಿಚಾರಣೆಯಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿತ್ತು.

ಆನಂತರ ಬೆಸ್ಟ್ ಬೇಕರಿ ಹತ್ಯಾಕಾಂಡದ ಸಂತ್ರಸ್ತರಾದ ಝಹಿರಾ ಶೇಖ್ ಹಾಗೂ ಆಕೆಯ ಕುಟುಂಬದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ 2004ರಲ್ಲಿ ಸುಪ್ರೀಂಕೋರ್ಟ್ ಆದೇಶವೊಂದನ್ನು ನೀಡಿ, ಪ್ರಕರಣದ ಮರುವಿಚಾರಣೆ ನಡೆಸಲು ಹಾಗೂ ಮೊಕದ್ದಮೆಯನ್ನು ಮುಂಬೈಗೆ ವರ್ಗಾಯಿಸುವಂತೆ ಸೂಚಿಸಿತ್ತು.

2002ರ ಗುಜರಾತ್ ಗಲಭೆ ಸಂದರ್ಭದಲ್ಲಿ ಮಾರ್ಚ್ 1ರಂದು ರಾತ್ರಿ ವೇಳೆ ಸುಮಾರು 1200ರಷ್ಟಿದ್ದ ಗುಂಪೊಂದು ವಡೋದರಾದಲ್ಲಿ ಹನುಮಾನ್‌ ಟೇಕ್ರಿ ಪ್ರದೇಶದಲ್ಲಿರುವ ಝಹೀರಾ ಶೇಖ್ ಅವರ ಕುಟುಂಬಕ್ಕೆ ಸೇರಿದ ಬೆಸ್ಟ್ ಬೇಕರಿ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿತ್ತು. ಈ ಹತ್ಯಾಕಾಂಡದಲ್ಲಿ 14 ಮಂದಿ ಸಾವನ್ನಪ್ಪಿದ್ದರು. ಪ್ರಕರಣದ ಆರೋಪಿ ಹರ್ಷದ್ನನ್ನು 2010ರಲ್ಲಿ ರಾಜಸ್ತಾನ ಪೊಲೀಸರು ಇನ್ನೊಂದು ಪ್ರಕರಣದಲ್ಲಿ ಬಂಧಿಸಿದ್ದರು. ಇನ್ನೋರ್ವ ಆರೋಪಿ ಮಫತ್ನನ್ನು 2013ರಲ್ಲಿ ಗುಜರಾತ್ನಲ್ಲಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. 2013ರಲ್ಲಿ ಅವರನ್ನು ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ತಮಗೆ ಪ್ರಕರಣದ ಮರುವಿಚಾರಣೆ ನಡೆಯುತ್ತಿರುವ ಬಗ್ಗೆ ತಿಳಿದಿರಲಿಲ್ಲವೆಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು. ತಮ್ಮನ್ನು ಸಿಬಿಐ ಇನ್ನೊಂದು ಪ್ರಕರಣಕ್ಕೆ ಸಂಬಂಧಿಸಿಜೈಪುರದಲ್ಲಿ ಬಂಧಿಸಿತ್ತೆಂದು ಅವರು ಹೇಳಿದ್ದರು. ತಲೆಮರೆಸಿಕೊಂಡಿದ್ದ ಇನ್ನಿಬ್ಬರು ಆರೋಪಿಗಳನ್ನು ಆನಂತರ ಬಂಧಿಸಲಾಗಿದ್ದು, ಅವರಿಬ್ಬರೂ ಜೈಲಿನಲ್ಲಿ ಸಾವಿಗೀಡಾಗಿದ್ದರು. 2019ರಲ್ಲಿ ಇವರ ವಿಚಾರಣೆ ನಡೆದಿದ್ದು, ಹತ್ಯಾಕಾಂಡದಲ್ಲಿ ಬದುಕುಳಿದ ಕಾರ್ಮಿಕ ಸೇರಿದಂತ ಹತ್ತು ಮಂದಿ ಸಾಕ್ಷ ನುಡಿದಿದ್ದರು.

Similar News