×
Ad

ಐಸಿಸಿ ಟೆಸ್ಟ್ ರ‍್ಯಾಂಕಿಂಗ್: ರಹಾನೆ, ಶಾರ್ದೂಲ್‌ಗೆ ಭಡ್ತಿ

ಅಗ್ರ ಸ್ಥಾನ ಕಾಯ್ದುಕೊಂಡ ಆರ್.ಅಶ್ವಿನ್

Update: 2023-06-14 23:25 IST

 ಹೊಸದಿಲ್ಲಿ: ಇತ್ತೀಚೆಗೆ ಟೀಮ್ ಇಂಡಿಯಾಕ್ಕೆ ವಾಪಸಾಗಿರುವ ಅಜಿಂಕ್ಯ ರಹಾನೆ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್ ನಲ್ಲಿ 37ನೇ ಸ್ಥಾನಕ್ಕೇರಿದರೆ, ಶಾರ್ದೂಲ್ ಠಾಕೂರ್ 94ನೇ ಸ್ಥಾನದಲ್ಲಿದ್ದಾರೆ. ರವಿಚಂದ್ರನ್ ಅಶ್ವಿನ್ ಲಂಡನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲ್ಲಿ ಆಡದಿದ್ದರೂ ಟೆಸ್ಟ್ ಬೌಲರ್‌ಗಳ ಪೈಕಿ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಅತ್ಯಂತ ಅಪರೂಪದ ಸಾಧನೆಯೊಂದರಲ್ಲಿ ಆಸ್ಟ್ರೇಲಿಯದ ಬ್ಯಾಟರ್‌ಗಳು  ರ‍್ಯಾಂಕಿಂಗ್ ನ ಅಗ್ರ ಮೂರು ಸ್ಥಾನಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತ ವಿರುದ್ಧ ದಿ ಓವಲ್‌ನಲ್ಲಿ ನಡೆದಿದ್ದ ಡಬ್ಲುಟಿಸಿ ಫೈನಲ್‌ನಲ್ಲಿ ಶತಕಗಳನ್ನು ಗಳಿಸಿರುವ ಸ್ಟೀವನ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಅಗ್ರ ರ್ಯಾಂಕಿನಲ್ಲಿರುವ ಮಾರ್ನಸ್ ಲ್ಯಾಬುಶೇನ್ ಅವರೊಂದಿಗೆ ಸೇರಿಕೊಂಡಿದ್ದಾರೆ.

ಪ್ರಮುಖ ಪಂದ್ಯದಲ್ಲಿ ಭಾರತವು 209 ರನ್ ಅಂತರದಿಂದ ಸೋಲುಂಡಿದ್ದರೂ ಕೂಡ ರಹಾನೆ 89 ಹಾಗೂ 46 ರನ್ ಗಳಿಸಿದ ಕಾರಣ ರ್ಯಾಂಕಿಂಗ್‌ನಲ್ಲಿ 37ನೇ ಸ್ಥಾನಕ್ಕೆ ಮರಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕವನ್ನು ಸಿಡಿಸಿದ್ದ ಶಾರ್ದೂಲ್ ಆರು ಸ್ಥಾನ ಮೇಲಕ್ಕೇರಿದ್ದಾರೆ.

ಕಾರು ಅಪಘಾತದಿಂದ ಆಗಿರುವ ಗಂಭೀರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಕ್ರಮಣಕಾರಿ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ 10ನೇ ರ್ಯಾಂಕನ್ನು ಉಳಿಸಿಕೊಳ್ಳುವ ಮೂಲಕ ಅಗ್ರ ರ್ಯಾಂಕಿನಲ್ಲಿರುವ ಭಾರತದ ಆಟಗಾರನಾಗಿ ಮುಂದುವರಿದಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 12ನೇ ಹಾಗೂ 13ನೇ ಸ್ಥಾನದಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ 11ರ ಬಳಗದ ಭಾಗವಾಗದಿದ್ದರೂ ಹಿರಿಯ ಆಫ್ ಸ್ಪಿನ್ನರ್ ಅಶ್ವಿನ್ ಅಗ್ರ ರ್ಯಾಂಕಿನ ಟೆಸ್ಟ್ ಬೌಲರ್ ಆಗಿ ಮುಂದುವರಿದಿದ್ದಾರೆ. ಭಾರತದ ಇನ್ನೋರ್ವ ಸ್ಪಿನ್ನರ್ ರವೀಂದ್ರ ಜಡೇಜ 9ನೇ ಸ್ಥಾನ ಉಳಿಸಿಕೊಂಡಿದ್ದಾರೆ.

2022ರ ಜುಲೈನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನು ಆಡಿರುವ ಗಾಯಾಳು ಜಸ್‌ಪ್ರಿತ್ ಬುಮ್ರಾ ಎರಡು ಸ್ಥಾನ ಕೆಳಜಾರಿ 8ನೇ ಸ್ಥಾನದಲ್ಲಿದ್ದಾರೆ.

ಅಗ್ರ-3 ಸ್ಥಾನದಲ್ಲಿ ಲ್ಯಾಬುಶೇನ್, ಸ್ಮಿತ್, ಹೆಡ್

ಲ್ಯಾಬುಶೇನ್ 903 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ನಂ.1 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಡಬ್ಲುಟಿಸಿ ಫೈನಲ್‌ನಲ್ಲಿ 121 ಹಾಗೂ 34 ರನ್ ಗಳಿಸಿದ್ದ ಸ್ಮಿತ್ ಒಂದು ಸ್ಥಾನ ಮೇಲಕ್ಕೇರಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಡಬ್ಲುಟಿಸಿ ಫೈನಲ್‌ನಲ್ಲಿ 163 ಹಾಗೂ 18 ರನ್ ಗಳಿಸಿ ಮಿಂಚಿದ್ದ ಹೆಡ್ ಮೂರು ಸ್ಥಾನ ಮೇಲಕ್ಕೇರಿ ಜೀವನಶ್ರೇಷ್ಠ ಮೂರನೇ ಸ್ಥಾನ ತಲುಪಿದ್ದಾರೆ.

ಒಂದೇ ತಂಡದ ಬ್ಯಾಟರ್‌ಗಳು ಅಗ್ರ ಮೂರು ಸ್ಥಾನಗಳನ್ನು ಪಡೆಯುವುದು ತೀರಾ ಅಪರೂಪ. ಕಳೆದ ಬಾರಿ 1984ರಲ್ಲಿ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ ಈ ರೀತಿಯಾಗಿತ್ತು. ಆಗ ವೆಸ್ಟ್‌ಇಂಡೀಸ್‌ನ ಆಟಗಾರರಾದ ಗೊರ್ಡನ್ ಗ್ರೀನಿಜ್(810 ರೇಟಿಂಗ್ ಪಾಯಿಂಟ್ಸ್), ಕ್ಲೈವ್ ಲಾಯ್ಡ್(787) ಹಾಗೂ ಲ್ಯಾರಿ ಗೋಮ್ಸ್(773 ಅಂಕ)ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು.

Similar News