×
Ad

ಸಂಪೂರ್ಣ ಹದಗೆಟ್ಟ ಆದಿಉಡುಪಿ ಎಪಿಎಂಸಿ ಮಾರುಕಟ್ಟೆ ರಸ್ತೆ!

Update: 2023-06-15 17:32 IST

ಉಡುಪಿ, ಜೂ.15: ಉಡುಪಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಆದಿಉಡುಪಿಯಲ್ಲಿರುವ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಒಂದೇ ಮಳೆಗೆ ಇಡೀ ರಸ್ತೆ ಕೆಸರು ಮಯ ವಾಗಿದೆ. ಇದರಿಂದ ವ್ಯಾಪಾರಸ್ಥರು ಹಾಗೂ ಗ್ರಾಹಕರು ತೀರಾ ತೊಂದರೆ ಅನುಭವಿಸುವಂತಾಗಿದೆ.

ಆದಿಉಡುಪಿಯಲ್ಲಿ ಎಪಿಎಂಸಿಗೆ ಸುಮಾರು 10 ಎಕರೆ ಜಾಗ ಇದ್ದು, ಇದರಲ್ಲಿ ಪ್ರತಿ ಬುಧವಾರ ಸಂತೆ ನಡೆಯು ತ್ತದೆ. ಅಲ್ಲದೆ ಪ್ರತಿದಿನ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು ಇಲ್ಲಿ ಓಡಾಟ ನಡೆಸುತ್ತಿರುತ್ತಾರೆ. ಇಲ್ಲಿನ ರಸ್ತೆ ಮಾತ್ರ ಕಳೆದ ಮೂರು ವರ್ಷಗಳಿಂದ ದುರಸ್ತಿ ಕಾರಣದೇ ಹೊಂಡ ಗುಂಡಿ ಗಳಿಂದ ತುಂಬಿ ಹೋಗಿದೆ.

ಇದೀಗ ಹೊಂಡ ತುಂಬಿದ ರಸ್ತೆಗೆ ಮಣ್ಣು ಹಾಕಿದ್ದು, ಈ ಮಣ್ಣು ಒಂದೇ ಮಳೆಗೆ ಕೊಚ್ಚಿ ಹೋಗಿ ಇಡೀ ರಸ್ತೆ ಕೆಸರುಮಯವಾಗಿದೆ. ಇದರಿಂದ ಗ್ರಾಹಕರು ಮಾರುಕಟ್ಟೆಯೊಳಗೆ ನಡೆದಾಡಲು ಪರದಾಡುವಂತಾಗಿದೆ. ಬುಧವಾರದ ಸಂತೆ ಸಂದರ್ಭ ಸಾಕಷ್ಟು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಇದೇ ವೇಳೆ ತರಕಾರಿ ತುಂಬಿದ ವಾಹನಗಳು ಹಾಗೂ ಸಾರ್ವಜನಿಕರು ಖಾಸಗಿ ವಾಹನಗಳು ಕೂಡ ಇಲ್ಲಿ ಓಡಾಟ ನಡೆಸುತ್ತಿರುತ್ತದೆ.

ಈ ವಾಹನಗಳು ಎಲ್ಲಿಯಾದರೂ ಗುಂಡಿಗೆ ಬಿದ್ದರೆ ಅಲ್ಲಿಯೇ ನಡೆದು ಕೊಂಡು ಹೋಗುವ ಮತ್ತು ವ್ಯಾಪಾರ ನಡೆಸುವ ವ್ಯಾಪಸ್ಥರಿಗೆ ಕೆಸರು ನೀರಿನ ಅಭಿಷೇಕ ಖಚಿತವಾಗುತ್ತದೆ. ಇದಲ್ಲದೆ ಇಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಕೂಡ ಸರಿಯಾಗಿ ಇಲ್ಲ ಎಂಬ ಆರೋಪಗಳು ಕೂಡ ಇವೆ. ಕುಡಿಯುವ ನೀರು ವ್ಯವಸ್ಥೆ ಕೂಡ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

"ಕಳೆದ ಮೂರು ವರ್ಷಗಳಿಂದ ಇಲ್ಲಿನ ರಸ್ತೆ ಸರಿ ಇಲ್ಲ. ಇಡೀ ರಸ್ತೆ ಹೊಂಡ ಮಯವಾಗಿದೆ. ಪ್ರತಿ ಬಾರಿಯು ಕೆಂಪು ಮಣ್ಣು ತಂದು ಹಾಕುತ್ತಾರೆ. ಇದು ಒಂದೇ ಮಳೆಗೆ ಸಂಪೂರ್ಣ ಕೆಸರುಮಯವಾಗುತ್ತದೆ. ಇಲ್ಲಿನ ಹೊಂಡದಿಂದ ಬೈಕ್ ಸವಾರರು ಬೀಳುತ್ತಿದ್ದಾರೆ. ಕೆಸರಿನಿಂದ ಸಂತೆಗೆ ಬರುವವರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ಡಾಮರೀಕರಣ ಮಾಡಬೇಕು. ಇಲ್ಲದಿದ್ದರೆ ಕಾಂಕ್ರೀಟಿಕರಣ ಮಾಡಿ ಪರಿಹಾರ ಮಾಡಬೇಕು. ಪ್ರತಿ ಅಂಗಡಿ ಯವರಿಂದ ಹಣ ಸಂಗ್ರಹ ಮಾಡುತ್ತಾರೆ. ಆದರೆ ಯಾವುದೇ ಮೂಲಭೂತ ಸೌರ್ಕಯ ಒದಗಿಸುವುದಿಲ್ಲ".
-ಶೇಕ್ ಅಹ್ಮದ್, ವ್ಯಾಪಾರಸ್ಥರು

"ಪ್ರಾಂಗಣದ ಒಳಗೆ ಇಂಟರ್‌ಲಾಕ್ ಅಳವಡಿಕೆಗೆ 10ಲಕ್ಷ ರೂ., ರಸ್ತೆ ಡಾಮರೀಕರಣ ನಿರ್ಮಾಣಕ್ಕೆ 30ಲಕ್ಷ ರೂ., ಶೌಚಾಲಯ ನಿರ್ಮಾಣಕ್ಕೆ 10 ಲಕ್ಷ ರೂ. ಸೇರಿದಂತೆ ಒಟ್ಟು 50ಲಕ್ಷ ರೂ. ಮೊತ್ತದ ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಾಗುವುದು. ಸದ್ಯ ರಸ್ತೆಯ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಮಾಡಲಾಗುತ್ತದೆ".
-ಗೋಪಾಲ ಕಾಕನೂರು, ಆಡಳಿತಾಧಿಕಾರಿ, ಎಪಿಎಂಸಿ, ಉಡುಪಿ

Similar News