ನೀಟ್ ಪರೀಕ್ಷೆಯಲ್ಲಿ 192ನೇ ರ‍್ಯಾಂಕ್ ಗಳಿಸಿದ ಟ್ರಕ್ ಮೆಕ್ಯಾನಿಕ್ ಪುತ್ರಿ
ಆಗ್ರಾ (ಉ.ಪ್ರ): ಇಲ್ಲಿಯ ಟ್ರಕ್ ಮೆಕ್ಯಾನಿಕ್ವೋರ್ವರ ಪುತ್ರಿ ಆರತಿ ಝಾ (21) ದೇಶದಲ್ಲಿಯೇ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲೊಂದಾಗಿರುವ ನೀಟ್-ಯುಜಿಯಲ್ಲಿ ರಾಷ್ಟ್ರಮಟ್ಟದಲ್ಲಿ 192ನೇ ರ‍್ಯಾಂಕ್ ಗಳಿಸುವ ಮೂಲಕ ಸಾಧನೆಯನ್ನು ಮೆರೆದಿದ್ದಾರೆ. 20 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದ ನೀಟ್-ಯುಜಿ ಪರೀಕ್ಷೆ ಫಲಿತಾಂಶಗಳು ಮಂಗಳವಾರ ಪ್ರಕಟಗೊಂಡಿವೆ.
ಫ್ಯಾನ್ ಇದ್ದರೆ ತನಗೆ ನಿದ್ರೆ ಬರುತ್ತದೆ ಮತ್ತು ದಿನದ ಅಭ್ಯಾಸ ಹಿಂದೆ ಬೀಳುತ್ತದೆ ಎಂದು ಆರತಿ ಓದುವಾಗ ಫ್ಯಾನ್ ಅನ್ನೇ ಹಾಕುತ್ತಿರಲಿಲ್ಲ ಎಂದು ಕಳೆದ 40 ವರ್ಷಗಳಿಂದಲೂ ಟ್ರಕ್ ಮೆಕ್ಯಾನಿಕ್ ಆಗಿ ದುಡಿಯುತ್ತಿರುವ ತಂದೆ ಬಿಶಂಬರ್ ಝಾ ಸುದ್ದಿಸಂಸ್ಥೆಗೆ ತಿಳಿಸಿದರು.
ಆಕೆ ನಮ್ಮ ಕುಟುಂಬದಲ್ಲಿ ಮೊದಲ ವೈದ್ಯೆಯಾಗಲಿದ್ದಾಳೆ ಮತ್ತು ಇದು ಕುಟುಂಬದಲ್ಲಿ ಬಹು ದೊಡ್ಡ ಸಾಧನೆಯಾಗಿದೆ. ಹಣಕಾಸಿನ ಸಮಸ್ಯೆಗಳಿದ್ದರೂ ಆಕೆ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದಾಳೆ. ಆಕೆ ಇಡೀ ಕುಟುಂಬಕ್ಕೆ ಹೆಮ್ಮೆಯನ್ನು ತಂದಿದ್ದಾಳೆ ಎಂದರು.
ಆರತಿ ಆಗಾಗ್ಗೆ ತಲೆನೋವಿನಿಂದ ಬಳಲುತ್ತಿರುತ್ತಾಳೆ, ಆದರೆ ಅದು ತನ್ನ ಪರೀಕ್ಷೆ ಸಿದ್ಧತೆಯ ಮೇಲೆ ಪರಿಣಾಮ ಬೀರಲು ಆಕೆ ಅವಕಾಶ ನೀಡಲಿಲ್ಲ ಎಂದೂ ಹೆಮ್ಮೆಯಿಂದ ಬೀಗುತ್ತಿದ್ದ ಝಾ ಹೇಳಿದರು.
ತನ್ನ ಸಾಧನೆಯ ಹೆಗ್ಗಳಿಕೆಯನ್ನು ಕುಟುಂಬಕ್ಕೆ ಅರ್ಪಿಸಿದ ಆರತಿ, ಅವರ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದರು. ಆರತಿಯ ತಾಯಿ ಗೃಹಿಣಿಯಾಗಿದ್ದು,ಇಬ್ಬರು ಸೋದರರು ಎಸ್ಎಸ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಿರಿಯ ಸೋದರಿಗೆ ಮದುವೆಯಾಗಿದೆ.