ಭಾರತೀಯ ಕ್ರೀಡೆಗೆ ಕರಾಳ ದಿನ: ಬ್ರಿಜ್‌ಭೂಷಣ್ ಸಿಂಗ್ ವಿರುದ್ಧದ ಪೊಕ್ಸೊ ಪ್ರಕರಣ ರದ್ದತಿ ಕುರಿತು ಕಾಂಗ್ರೆಸ್ ಆಕ್ರೋಶ
ಹೊಸದಿಲ್ಲಿ: ಬಿಜೆಪಿ ಸಂಸದ ಹಾಗೂ ನಿರ್ಗಮಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ ಸಿಂಗ್ ವಿರುದ್ಧ ಅಪ್ರಾಪ್ತ ವಯಸ್ಕ ಕುಸ್ತಿಪಟು ದಾಖಲಿಸಿರುವ ಲೈಂಗಿಕ ಕಿರುಕುಳ ದೂರನ್ನು ರದ್ದುಗೊಳಿಸುವಂತೆ ನ್ಯಾಯಾಲಯಕ್ಕೆ ಶಿಫಾರಸು ಮಾಡಿರುವ ದಿಲ್ಲಿ ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ಗುರುವಾರ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ.
ನ್ಯಾಯಕ್ಕಾಗಿ ದೇಶದ ಪುತ್ರಿಯರ ಕೂಗನ್ನು ಮೋದಿ ಸರಕಾರವು ಕಸದ ಬುಟ್ಟಿಯಲ್ಲಿ ಹೂತುಹಾಕಿದೆ ಎಂದು ಅದು ಆರೋಪಿಸಿದೆ.
‘ಬೇಟಿ ಡರಾವೋ, ಬ್ರಿಜ್‌ಭೂಷಣ್ ಬಚಾವೊ (ಹೆಣ್ಣುಮಕ್ಕಳನ್ನು ಹೆದರಿಸಿ, ಬ್ರಿಜ್‌ಭೂಷಣ್ ರಕ್ಷಿಸಿ) ’ಎನ್ನುವುದು ಬಿಜೆಪಿಯ ಹೊಸ ಘೋಷಣೆಯಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಟ್ವೀಟಿಸಿದ್ದಾರೆ. ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಜೂ.15ರೊಳಗೆ ಸಲ್ಲಿಸುವುದಾಗಿ ಸರಕಾರವು ಭರವಸೆ ನೀಡಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು.
ಇಂದು ದೇಶದಲ್ಲಿ ಕ್ರೀಡೆಗೆ ಕರಾಳ ದಿನವಾಗಿದೆ. ದೇಶದ ಕಾನೂನು ಬಿಜೆಪಿಯ ಬುಲ್ಡೋಜರ್ ನಡಿ ನಜ್ಜುಗುಜ್ಜಾಗಿದೆ ಎಂದು ಟ್ವೀಟಿಸಿರುವ ಸುರ್ಜೆವಾಲಾ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಶೋಷಣೆಯ ಆರೋಪಿ ಸಿಂಗ್ ರಕ್ಷಣೆಗಾಗಿ ಇಡೀ ಸರಕಾರಿ ಯಂತ್ರವನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳು ಲೈಂಗಿಕ ಶೋಷಣೆಯನ್ನು ಆರೋಪಿಸಿ ಬ್ರಿಜ್‌ಭೂಷಣ್ರಂತಹ ಪ್ರಬಲ ವ್ಯಕ್ತಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ದಾಖಲಿಸಿದ್ದಳು. ಬಳಿಕ ಇಡೀ ವ್ಯವಸ್ಥೆ,ಸರಕಾರದ ಸಚಿವರು ಮತ್ತು ಸಂಸದರು ಒಂದಾಗಿ ಬಾಲಕಿಯ ವಿರುದ್ಧ ನಿಂತಿದ್ದಾರೆ ಮತ್ತು ಬ್ರಿಜ್ಭೂಷಣಗೆ ರಕ್ಷಣೆಯನ್ನು ನೀಡಲಾಗಿದೆ. ‘ಬೇಟಿ ಡರಾವೊ, ಬ್ರಿಜ್‌ಭೂಷಣ್ ಬಚಾವೊ’ ಎನ್ನುವುದು ಇಂದು ಬಿಜೆಪಿಯ ಘೋಷಣೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾಠೆ ಹೇಳಿದರು.
ಈಗಷ್ಟೇ ಬ್ರಿಜ್‌ಭೂಷಣ್ ವಿರುದ್ಧ 1,000 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಮತ್ತು 500 ಪುಟಗಳನ್ನು ಹೇಗೆ ಅವರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಮತ್ತು ಪೊಕ್ಸೊದಡಿ ಇಡೀ ಪ್ರಕರಣವನ್ನು ಹಿಂದೆಗೆದುಕೊಳ್ಳಲಾಗಿದೆ ಎನ್ನುವುದನ್ನು ವಿವರಿಸಲು ಮೀಸಲಿರಿಸಲಾಗಿದೆ ಎಂದ ಅವರು,ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಬೇಕು ಎಂದು ಪೊಕ್ಸೊ ಕಾಯ್ದೆಯು ಹೇಳುತ್ತದೆ. ಆದರೆ ಬ್ರಿಜ್ಭೂಷಣ ಜೊತೆ ಅದು ಸಂಭವಿಸಿಲ್ಲ.
ಕಳೆದ 45 ದಿನಗಳಿಂದಲೂ ಮುಕ್ತವಾಗಿ ತಿರುಗಾಡುತ್ತಿರುವ ಅವರು ಟಿವಿ ಸಂದರ್ಶನಗಳನ್ನು ನೀಡುತ್ತಿದ್ದಾರೆ,ಕುಸ್ತಿಪಟುಗಳು ಗೆದ್ದಿರುವ ಪದಕಗಳು ಕೇವಲ 15 ರೂ.ಮೌಲ್ಯದ್ದು ಎಂದು ಟೀಕಿಸುತ್ತಿದ್ದಾರೆ ಎಂದರು.
ದೇಶದ ಪ್ರಧಾನಿ ಅಥವಾ ಗೃಹಸಚಿವರು ತುಟಿಪಿಟಕ್ಕೆಂದಿಲ್ಲ. ಇದೇ ದಿಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಲು ಒಂದು ತಿಂಗಳು ತೆಗೆದುಕೊಂಡಿದ್ದರು,ಅದೂ ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶದ ಬಳಿಕ. ಆದರೆ ಕ್ಲೀನ್ ಚಿಟ್ ನೀಡುವಲ್ಲಿ ಮಾತ್ರ ಚುರುಕಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ರೀನೇತ ಕಿಡಿಕಾರಿದರು.