×
Ad

ಹಿಂದುತ್ವ ಕುರಿತ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ‘ಅಲ್ ಜಝೀರ’ಕ್ಕೆ ಅಲಹಾಬಾದ್ ಹೈಕೋರ್ಟ್ ಸೂಚನೆ

Update: 2023-06-15 22:02 IST

ಹೊಸದಿಲ್ಲಿ: ಕೋಮು ಹಿಂಸಾಚಾರದ ಕುರಿತ ಸಾಕ್ಷ್ಯಚಿತ್ರವೊಂದನ್ನು ಭಾರತದಲ್ಲಿ ಪ್ರಸಾರ ಮಾಡದಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ‘ಅಲ್ ಜಝೀರ’ ಸುದ್ದಿ ಚಾನೆಲ್ ಗೆ ನಿರ್ದೇಶನ ನೀಡಿದೆ. ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರೆ ‘‘ಕೆಟ್ಟ ಪರಿಣಾಮಗಳು’’ ಸಂಭವಿಸಬಹುದು ಎಂದು ನ್ಯಾಯಾಲಯ ಎಚ್ಚರಿಸಿದೆ.

‘ಇಂಡಿಯಾ ... ಹೂ ಲಿಟ್ ಫ್ಯೂಸ್?’ ಎಂಬ ಹೆಸರಿನ ಸಾಕ್ಷ್ಯಚಿತ್ರವು ಭಾರತದಲ್ಲಿ ಮುಸ್ಲಿಮರ ವಿರುದ್ಧದ ಹಿಂಸಾಚಾರದ ಬಗ್ಗೆ ಹೇಳುತ್ತದೆ. ಜೂನ್ 3ರಂದು, ದೋಹಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಚಾನೆಲ್, ಸಾಕ್ಷ್ಯಚಿತ್ರದ ಅರೇಬಿಕ್ ಆವೃತ್ತಿಯನ್ನು ಟ್ವೀಟ್ ಮಾಡಿತ್ತು.

ಸುಧೀರ್ ಕುಮಾರ್ ಎಂಬ ಹೆಸರಿನ ಸಾಮಾಜಿಕ ಕಾರ್ಯಕರ್ತರೊಬ್ಬರು, ಭಾರತದಲ್ಲಿ ಈ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸದಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದರು. ನಾಗರಿಕರ ನಡುವಿನ ಸಾಮರಸ್ಯವನ್ನು ಕದಡುವ ಮತ್ತು ದೇಶದ ಸಮಗ್ರತೆಗೆ ಬೆದರಿಕೆಯಾಗುವ ಸಾಮರ್ಥ್ಯವನ್ನು ಈ ಚಿತ್ರ ಹೊಂದಿದೆ ಎಂದು ಅವರು ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದ್ದರೂ, ಅದು ಸಕಾರಣದ ನಿರ್ಬಂಧಗಳಿಗೆ ಒಳಪಟ್ಟಿದೆ ಎಂದು ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ಆಶುತೋಷ್ ಶ್ರೀವಾಸ್ತವ ಅವರನ್ನೊಳಗೊಂಡ ಹೈಕೋರ್ಟ್ ಪೀಠವೊಂದು ಬುಧವಾರ ಹೇಳಿತು. 1952 ಸಿನೆಮಾಟೊಗ್ರಾಫ್ ಕಾಯ್ದೆಯ ಪ್ರಕಾರ, ಸಾಕ್ಷ್ಯಚಿತ್ರದ ಅನಿರ್ಬಂಧಿತ ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣಪತ್ರವನ್ನು ಪಡೆಯಲಾಗಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

‘‘ಸಾಕ್ಷ್ಯಚಿತ್ರದ ಪ್ರಸಾರದಿಂದ ಸಂಭವಿಸಿಬಹುದಾದ ಕೆಟ್ಟ ಪರಿಣಾಮಗಳನ್ನು ಪರಿಗಣಿಸಿ, ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಚಿತ್ರದ ಪ್ರದರ್ಶನವನ್ನು ಮುಂದೂಡಬೇಕು’’ ಎಂದು ಪೀಠ ಹೇಳಿತು. ಮುಂದಿನ ವಿಚಾರಣೆ ಜುಲೈ 6ರಂದು ನಡೆಯಲಿದೆ.

Similar News