ಏಶ್ಯನ್ ಚಾಂಪಿಯನ್‌ಶಿಪ್: ಪದಕ ಗೆದ್ದ ಭಾರತದ ಮೊದಲ ಕತ್ತಿವರಸೆ ಪಟು ಭವಾನಿ ದೇವಿ
ಹೊಸದಿಲ್ಲಿ: ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದುಕೊಂಡಿರುವ ಒಲಿಂಪಿಯನ್ ಭವಾನಿ ದೇವಿ ಈ ಸಾಧನೆ ಮಾಡಿದ ಭಾರತದ ಮೊದಲ ಕತ್ತಿವರಸೆ ಪಟು
ಎಂಬ ಕೀರ್ತಿಗೆ ಪಾತ್ರರಾಗುವ ಮೂಲಕ ಇತಿಹಾಸ ನಿರ್ಮಿ ಸಿದರು.
ಚೀನಾದ ವುಕ್ಸಿಯಲ್ಲಿ ಸೋಮವಾರ ನಡೆದ ಏಶ್ಯನ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗದ ಸ್ಪರ್ಧೆಯ ಸೆಮಿ ಫೈನಲ್‌ನಲ್ಲಿ 29ರ ಹರೆಯದ ಭವಾನಿ ಸೋಲನುಭವಿಸಿ ಕಂಚಿನ ಪದಕ ತನ್ನದಾಗಿಸಿಕೊಂಡರು.
ತೀವ್ರ ಪೈಪೋಟಿಯಿಂದ ಕೂಡಿದ್ದ ಸೆಮಿ ಫೈನಲ್ ಪಂದ್ಯದಲ್ಲಿ ಭವಾನಿ ಅವರು ಉಜ್ಬೇಕಿಸ್ತಾನದ ಝೈನಬ ದೈಬೆಕೋವಾ ವಿರುದ್ಧ 14-15 ಅಂತರದಿಂದ ಸೋಲನುಭವಿಸಿದರು.
ಇದಕ್ಕೂ ಮೊದಲು ಹಾಲಿ ವಿಶ್ವ ಚಾಂಪಿ ಯನ್ ಜಪಾನ್‌ನ ಮಿಸಾಕಿ ಎಮುರಾರನ್ನು ಕ್ವಾರ್ಟರ್ ಫೈನಲ್‌ನಲ್ಲಿ 15-10 ಅಂತರ ದಿಂದ ಮಣಿಸಿದ್ದ ಭವಾನಿ ಭಾರತಕ್ಕೆ ಸ್ಪರ್ಧೆಯಲ್ಲಿ ಚೊಚ್ಚಲ ಪದಕವನ್ನು ಖಚಿತಪಡಿಸಿದರು.
ಮಿಸಾಕಿ ಕೈರೊದಲ್ಲಿ ನಡೆದ 2022ರ ವರ್ಲ್ಡ್ ಫೆನ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ವಿಭಾಗ ದಲ್ಲಿ ಚಿನ್ನದ ಪದಕ ಜಯಿಸಿದ್ದರು. ಭವಾನಿ 64ನೇ ಸುತ್ತಿನಲ್ಲಿ ಬೈ ಪಡೆದಿದ್ದರು. ಮುಂದಿನ ಸುತ್ತಿನಲ್ಲಿ ಕಝಕ್‌ಸ್ತಾನದ ಡೊಸ್ಪೆ ಕರಿನಾರನ್ನು ಸೋಲಿಸಿದ್ದರು. ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಒಝಾಖಿ ಸೆರಿವಾರ ನ್ನು 15-11 ಅಂತರದಿಂದ ಮಣಿಸಿದ್ದರು.
ಐತಿಹಾಸಿಕ ಸಾಧನೆ ಮಾಡಿರುವ ಭವಾನಿಗೆ ಭಾರತದ ಫೆನ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅಭಿನಂದನೆ ಸಲ್ಲಿಸಿದ್ದಾರೆ. ಭವಾನಿದೇವಿ ಟೋಕಿಯೊ ಒಲಿಂಪಿಕ್ ಗೇಮ್ಸ್‌ಗೆ ಅರ್ಹತೆ ಪಡೆದಿದ್ದ ಭಾರತದ ಮೊದಲ ಕತ್ತಿವರಸೆಪಟು ಎನಿಸಿಕೊಂಡಿದ್ದರು. ಆದರೆ ಅವರು ಅಂತಿಮ-32ರ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದರು.