×
Ad

ಮೈತೈಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ಕುರಿತ ಪರಾಮರ್ಶನಾ ಅರ್ಜಿ

ಮಣಿಪುರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2023-06-20 23:19 IST

ಹೊಸದಿಲ್ಲಿ: ಪರಿಶಿಷ್ಟ ಜಾತಿ ಪಂಗಡಗಳ(ST) ಪಟ್ಟಿಯಲ್ಲಿ ಮೈತೈ ಸಮುದಾಯವನ್ನು ಸೇರ್ಪಡೆಗೊಳಿಸಬೇಕೆಂಬ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವ ಮಾರ್ಚ್ 27ರ ಆದೇಶದಲ್ಲಿ ಬದಲಾವಣೆ ಮಾಡುವಂತೆ ಕೋರಿ ಸಲ್ಲಿಸಲಾದ ಪರಾಮರ್ಶನಾ ಅರ್ಜಿಯನ್ನು ಮಣಿಪುರ ಹೈಕೋರ್ಟ್ ಮಂಗಳವಾರ ವಿಚಾರಣೆಗೆ ಸ್ವೀಕರಿಸಿದೆ.

ಈ ಅರ್ಜಿಯನ್ನು ಆಧರಿಸಿ, ನ್ಯಾಯಾಲಯವು ಸೋಮವಾರ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು ಅವುಗಳ ಪ್ರತಿಕ್ರಿಯೆ ಕೋರಿದೆ.

ಮೈತೈ ಬುಡಕಟ್ಟುಗಳ ಒಕ್ಕೂಟ (MTU) ಸಲ್ಲಿಸಿದ ಪರಾಮರ್ಶನಾ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಂ.ವಿ. ಮುರಳೀಧರನ್ ನೇತೃತ್ವದ ನ್ಯಾಯಪೀಠವು ಆಲಿಕೆಗೆ ಸ್ವೀಕರಿಸಿದೆ.

ಪರಿಶಿಷ್ಟಪಂಗಡಗಳ ಪಟ್ಟಿಗೆ ಮೈತೈಗಳನ್ನು ಸೇರ್ಪಡೆಗೊಳಿಸಬೇಕೆಂದು ಕೋರುವ ಕಡತಕ್ಕೆ ಸಂಬಂಧಿಸಿ ಕೇಂದ್ರ ಗೃಹಸಚಿವಾಲಯಕ್ಕೆ ಉತ್ತರಿಸುವಂತೆ ಮಣಿಪುರ ಸರಕಾರಕ್ಕೆ ನ್ಯಾಯೂರ್ತಿ ಮುರಳೀಧರನ್ ಈ ಹಿಂದೆ ಮಾರ್ಚ್ 27ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದರು

ತಮಗೆ ಪರಿಶಿಷ್ಟ ಸ್ಥಾನ ಮಾನ ನೀಡಬೇಕೆಂದು ಕೋರಿ 2013ರಿಂದೀಚೆಗೆ ಮೈತೈ ಸಮುದಾಯದವರು ಹಲವಾರು ಸಲ ಮನವಿ ಸಲ್ಲಿಸಿರುವುದಾಗಿ ನ್ಯಾಯಾಲಯ ಗಮನಸೆಳೆಯಿತು. ಆದರೆ ಕೇಂದ್ರ ಸರಕಾರವು ಈ ಬಗ್ಗೆ ಉತ್ತರಿಸುವಂತೆ ತಾನು ನಿರ್ದೇಶನ ನೀಡುವವರೆಗೂ ರಾಜ್ಯ ಸರಕಾರವು ಯಾವುದೇ ರೀತಿಯಲ್ಲಿಯೂ ಕಾರ್ಯಪ್ರವೃತ್ತವಾಗಿರಲಿಲ್ಲವೆಂದು ನ್ಯಾಯಾಲಯ ತಿಳಿಸಿತು.

ಮೈತೈ ಸಮುದಾಯವನ್ನು ಪರಿಶಿಷ್ಟಪಂಗಡಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಕುರಿತಾದ ಪ್ರಕರಣವನ್ನು ಪ್ರಥಮ ಪ್ರತಿವಾದಿಯು ಈ ಆದೇಶದ ಪ್ರತಿಯು ದೊರೆತ ನಾಲ್ಕು ವಾರಗಳೊಳಗೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯವು ಮಾರ್ಚ್ 27ರ ಆದೇಶದಲ್ಲಿ ತಿಳಿಸಿತ್ತು.

ನ್ಯಾಯಾಲಯದ ಈ ಆದೇಶದಲ್ಲಿ ಬದಲಾವಣೆ ಮಾಡಬೇಕೆಂದು ತಾನು ಬಯಸಿರುವುದಾಗಿ ಮೈತೈ ಬುಡಕಟ್ಟುಗಳ ಒಕ್ಕೂಟ (ಎಂಟಿಯು) ತಿಳಿಸಿದೆ. ಯಾವುದೇ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆಗೊಳಿಸುವುದು ಅಥವಾ ಹೊರಗಿಡುವುದು ಸಂಸತ್ ಹಾಗೂ ರಾಷ್ಟ್ರಪತಿಗೆ ಇರುವ ವಿಶೇಷಾಧಿಕಾರವಾಗಿದೆ. ಹೀಗಾಗಿ ನ್ಯಾಯಾಲಯದ ಈ ನಿರ್ದೇಶನವು ಅದಕ್ಕೆ ಅನುಗುಣವಾಗಿಲ್ಲ. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪರಿಷ್ಕರಿಸುವಂತೆ ನಾವು ಪರಾಮರ್ಶನಾ ಅರ್ಜಿಯಲ್ಲಿ ಕೋರಿದ್ದೇವೆ ಎಂದು ಅದು ಹೇಳಿದೆ.

Similar News