×
Ad

ಮಣಿಪಾಲ ಆರೋಗ್ಯ ಕಾರ್ಡ್ ನೋಂದಾಣಿಗೆ ಚಾಲನೆ

Update: 2023-06-21 18:05 IST

ಮಣಿಪಾಲ, ಜೂ.21: ಆರೋಗ್ಯ ಸೇವೆಯನ್ನು ರಿಯಾಯಿತಿ ದರದಲ್ಲಿ ನೀಡುವ ಉದ್ದೇಶದಿಂದ ಆರಂಭಿಸಲಾದ ಮಣಿಪಾಲ ಆರೋಗ್ಯ ಕಾರ್ಡ್ ಇದರ 2023ನೇ ಸಾಲಿನ ನೊಂದಾಣಿ ಪ್ರಕ್ರಿಯೆಗೆ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಮಂಗಳವಾರ ಉಡುಪಿ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗುಣಮಟ್ಟದ ಆರೋಗ್ಯ ಸೇವೆಯನ್ನು ಸಾರ್ವ ಜನಿಕರಿಗೆ ಕೈಗೆಟಕುವಂತೆ ಮಾಡುವ ಉದ್ದೇಶದಿಂದ ಆರೋಗ್ಯ ಕಾರ್ಡ್ ಅನ್ನು ಪ್ರಾರಂಭಿಸಲಾಗಿದೆ, ಸಣ್ಣ ಮೊತ್ತವನ್ನು ಪಾವತಿಸುವ ಮೂಲಕ ಯಾರಾದರೂ ಸದಸ್ಯರಾಗಬಹುದು ಮತ್ತು ಪ್ರಯೋಜನಗಳನ್ನು ಪಡೆಯಬಹುದು ಎಂದು ಹೇಳಿದರು.

ಮಣಿಪಾಲ ಆರೋಗ್ಯ ಕಾರ್ಡ್ ಹೊಂದಿರುವವರಿಗೆ ತಜ್ಞ ಮತ್ತು ವಿಶೇಷ ತಜ್ಞ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ಶೇ.50 ರಿಯಾಯಿತಿ(ಓಪಿಡಿ ದಿನ ಗಳಂದು), ಹೊರರೋಗಿ ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ.30 ರಿಯಾ ಯಿತಿ, ಹೊರರೋಗಿ ರೇಡಿಯಾಲಜಿ ಪರೀಕ್ಷೆಗಳು(ಸಿಟಿಎಂಆರ್‌ಐ, ಅಲ್ಟ್ರಾ ಸೌಂಡ್ ಇತ್ಯಾದಿ) ಶೇ.20 ರಿಯಾಯಿತಿ, ಹೊರರೋಗಿ ವಿಧಾನಗಳಲ್ಲಿ ಮತ್ತು ಮಧುಮೇಹ ಪಾದ ತಪಾಸಣೆಯಲ್ಲಿ 20 ರಿಯಾಯಿತಿ, ಹೊರರೋಗಿ ಡಯಾಲಿಸಿಸ್ 100ರೂ., ಔಷಧಾಲಯಗಳಲ್ಲಿ ಶೇ.12ರವರೆಗೆ ರಿಯಾಯಿತಿ, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತು ಗಳನ್ನು ಮತ್ತು ಪ್ಯಾಕೇಜ್‌ಗಳನ್ನು ಹೊರತುಪಡಿಸಿ ಶೇ.25ರಷ್ಟು ರಿಯಾಯಿತಿ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮಾಹೆ ಸಹ ಕುಲಪತಿ ಡಾ.ಶರತ್ ಕುಮಾರ್ ರಾವ್ ಮಾತನಾಡಿ, ಈ ಯೋಜನೆಯು ಉಡುಪಿ, ದಕ್ಷಿಣ ಕನ್ನಡ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಉತ್ತರ ಕನ್ನಡ, ಹಾವೇರಿ, ಚಿಕ್ಕಮಗಳೂರು ಮತ್ತು ಬಳ್ಳಾರಿ ಸೇರಿದಂತೆ ಕರಾವಳಿ ಮತ್ತು ಮಧ್ಯ ಕರ್ನಾಟಕದ ಸುಮಾರು 12-15ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸಿದೆ ಹಾಗೂ ಕೇರಳ, ಗೋವಾ ಮುಂತಾದ ನೆರೆಯ ರಾಜ್ಯಗಳ  ಜನರೂ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಮುಂಬರುವ ವರ್ಷ ಗಳಲ್ಲಿ ಸಂಪೂರ್ಣವಾಗಿ ಕಾರ್ಡ್ ರಹಿತ ಮತ್ತು ಗ್ರಾಹಕ ಸ್ನೇಹಿಯಾಗಿಸುವ ಗುರಿ ಹೊಂದಿದ್ದೇವೆ ಎಂದರು.

ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ ದರು. ಕೆಎಂಸಿ ಮಣಿಪಾಲ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕೆಎಂಸಿ ಮಂಗಳೂರು ಡೀನ್ ಡಾ.ಬಿ.ಉನ್ನಿಕೃಷ್ಣನ್ ಉಪಸ್ಥಿತರಿದ್ದರು.

Similar News