×
Ad

‘‘ಎಲ್ಲಿ ಪುಸ್ತಕಗಳನ್ನು ಸುಡುವರೋ ಅಲ್ಲಿ ಜನರನ್ನೂ ಸುಟ್ಟು ಹಾಕಲಾಗುತ್ತದೆ’’

Update: 2023-06-21 18:47 IST

ಬರ್ಲಿನ್ ನಗರದಲ್ಲಿ ಪುಸ್ತಕಗಳನ್ನು ಸುಟ್ಟ ಜಾಗದಲ್ಲಿ ಇಸ್ರೇಲಿ ಕಲಾವಿದ ಮಿಚಾ ಉಲ್ಮನ್ ಕಲಾತ್ಮಕ ಕೋಣೆಯೊಂದನ್ನು ಸೃಷ್ಟಿಸಿದ. ನೆಲಮಾಳಿಗೆಯಲ್ಲಿರುವ ಕೋಣೆಯಲ್ಲಿ ಬಿಳಿಯ ಬಣ್ಣದ ಖಾಲಿ ಶೆಲ್ಗಳಿವೆ. ಬೀದಿಯಲ್ಲಿ ಓಡಾಡುವವರು ಕೂಡ ಪಾರದರ್ಶಕ ಗಾಜಿನ ಮೂಲಕ ಈ ಕೋಣೆಯನ್ನು ನೋಡಬಹುದು. ಅಲ್ಲೇ ಇರುವ ಫಲಕದಲ್ಲಿ ‘‘ಎಲ್ಲಿ ಪುಸ್ತಕಗಳನ್ನು ಸುಡುವರೋ, ಬಹುಬೇಗ ಅಲ್ಲಿ ಜನರನ್ನು ಕೂಡ ಸುಟ್ಟು ಹಾಕಲಾಗುತ್ತದೆ’’ ಎಂದು ಬರೆಯಲಾಗಿದೆ. ಸ್ಪೇನ್ನಲ್ಲಿ ಪುಸ್ತಕಗಳನ್ನು ಸುಟ್ಟುಹಾಕುವಾಗ ಐನ್ರಿಚ್ ಹೇನ್ ಬರೆದ ಈ ಸಾಲು ಜರ್ಮನಿಯಲ್ಲಿ ಭಯಾನಕವಾಗಿ ದಿಟವಾಯಿತು. ನಾಝಿಗಳು 1933ರಲ್ಲಿ ಪುಸ್ತಕಗಳನ್ನು ಸುಟ್ಟರು. 1938ರಲ್ಲಿ ಯುಹೂದಿಯರ ದೇವಾಲಯಗಳು ಬೂದಿಯಾದವು. 1942ರಿಂದ ನಾಝಿಗಳು ಯುರೋಪಿಯನ್ ಯಹೂದಿಯರ ನರಮೇಧ ನಡೆಸಿದರು. ಈ ನರಮೇಧ ‘ಶೋಹ’ (shoah) ಎಂದೇ ಕುಖ್ಯಾತಿಯಾಯಿತು.

ಅಂದು ಧಾರಾಕಾರ ಮಳೆ ಸುರಿಯುತ್ತಿತ್ತು. ಆದರೂ ಅದು ಹೇಗೋ ಬರ್ಲಿನ್ ನಗರದ ಮುಖ್ಯ ಬೀದಿಯಲ್ಲಿ ಒಂದು ದೊಡ್ಡ ಚಿತೆ ಉರಿಯುತ್ತಿತ್ತು. ಅದರ ಸುತ್ತ ನೋಡುಗರು, ನಾಝಿ ಎಸ್ಎ ಅಧಿಕಾರಿಗಳು ನೆರೆದಿದ್ದರು. ಅವರಲ್ಲಿ ಜರ್ಮನ್ ಬರಹಗಾರ ಎರಿಚ್ ಕಾಸ್ಟ್ನರ್ ಕೂಡ ನುಸುಳಿ ನಿಂತಿದ್ದ. ಮೈಕಿನಲ್ಲಿ ಕಾಸ್ಟ್ನರ್ ಹೆಸರನ್ನು ಕೂಗಲಾಯಿತು. ‘‘ನೈತಿಕ ಅಧಃಪತನ, ಅವನತಿಯ ವಿರುದ್ಧ! ಕುಟುಂಬದ ಮತ್ತು ನಾಡಿನ ಶಿಸ್ತಿಗಾಗಿ, ಸಭ್ಯತೆಗಾಗಿ ಹೆನ್ರಿಚ್ಮನ್, ಅರ್ನೆಸ್ಟ್ ಗ್ಲಾಸೆರ್, ಎರಿಚ್ ಕಾಸ್ಟ್ನರ್ ಬರಹಗಳನ್ನು ಬೆಂಕಿಗಾಹುತಿ ನೀಡುತ್ತಿದ್ದೇವೆ’’ ಎಂದು ಕಪ್ಪು ಸಮವಸ್ತ್ರ ತೊಟ್ಟ ನಾಝಿ ಅಧಿಕಾರಿಗಳು ಘೋಷಿಸಿದರು.

ಆ ದಿನ ಬರ್ಲಿನ್ನಲ್ಲಿ ಮಾತ್ರವಲ್ಲದೆ ಜರ್ಮನಿಯ ಇಪ್ಪತ್ತೊಂದು ನಗರಗಳಲ್ಲಿ ಪುಸ್ತಕ ಸುಡಲಾಯಿತು. ವಿಷಯ ಬಹಳ ಸರಳ. ನಾಝಿಗಳಿಲ್ಲದಿದ್ದರೆ ಯಾರೂ ಪುಸ್ತಕಗಳನ್ನು ಸುಟ್ಟುಹಾಕುತ್ತಿರಲಿಲ್ಲ. ಆಗ 1920ರ ದಶಕದಲ್ಲಿ ಜರ್ಮನಿಯಲ್ಲಿ ವೇಗವಾಗಿ ಬೆಳೆಯುತ್ತಿದ್ದ ಸಾಂಸ್ಕೃತಿಕ ವಿವಿಧತೆ, ಹೊಸ ಆವಿಷ್ಕಾರ ಮಾಡುವ ಹುರುಪು ಹಾಗೆ ಮುಂದುವರಿದಿರುತ್ತಿತ್ತು. ಆದರೆ ನಾಝಿಗಳ ಉದಯ ಜರ್ಮನಿಯ ಸಂಸ್ಕೃತಿ ಅರಳುವುದನ್ನು, ಪರರಿಗೆ ತೆರೆದುಕೊಳ್ಳುವುದನ್ನು ಸಂಪೂರ್ಣವಾಗಿ ನಿಲ್ಲಿಸಿತ್ತು. ಅದಕ್ಕೆ ಮೇ 10 ಪುಸ್ತಕ ಸುಡುವ ದುಷ್ಕೃತ್ಯ ಅಲ್ಲಗಳೆಯಲಾಗದ ಸೂಚಕದಂತಿತ್ತು.

ಬರಲಿರುವ ಕೆಟ್ಟದಿನಗಳ ಸ್ಪಷ್ಟ ಸುಳಿವು ಬರಹಗಾರರಿಗೆ, ಬುದ್ಧಿವಂತರಿಗೆ ಸಿಕ್ಕಿತ್ತು. ಪುಸ್ತಕ ಸುಡುವ ಹೊತ್ತಿಗೆ ಬಹಳಷ್ಟು ಮಂದಿ ಬರಹಗಾರರು ದೇಶ ತೊರೆದಿದ್ದರು. ‘ವೆಯ್ಮರ್ ರಿಪಬ್ಲಿಕ್’ ಎಂದೇ ಖ್ಯಾತಿಯಾಗಿದ್ದ ಜರ್ಮನಿಯಿಂದ ಆಲ್ಫ್ರೆಡ್ ಕೆರ್, ಬೆರ್ಟೊಲ್ಟ್ ಬ್ರೆಕ್ಟ್, ಹೆನ್ರಿಚ್ ಮನ್, ಥಾಮಸ್ ಮನ್, ಎರಿಕಾ ಮನ್, ಕ್ಲಾಸ್ ಮನ್, ಆಲ್ಬರ್ಟ್ ಐನ್ಸ್ಟೈನ್, ಅರ್ನೆಸ್ಟ್ ಟೊಳ್ಳರ್ ಅಂಥ ಸೂಕ್ಷ್ಮಮತಿಗಳು ದೇಶ ಬಿಟ್ಟಿದ್ದರು. ಜನವರಿ 30, 1933ರಂದು ಅಡಾಲ್ಫ್ ಹಿಟ್ಲರ್ ಅಧಿಕಾರ ಸ್ವೀಕರಿಸುವ ಹೊತ್ತಿಗೆ ಜರ್ಮನಿಗೆ ಭವಿಷ್ಯವಿಲ್ಲವೆಂದು ಅವರಿಗೆ ತಿಳಿದುಹೋಗಿತ್ತು.

ನಾಝಿಗಳು ಅಧಿಕಾರ ಕಸಿದುಕೊಳ್ಳುವ ಮೊದಲೇ ಅವರ ವಿರೋಧಿಗಳು ಯಾರೆಂಬುದನ್ನು ಸ್ಪಷ್ಟಪಡಿಸಿದ್ದರು. ಅವರನ್ನು ಸದೆಬಡಿಯುತ್ತೇವೆ ಎಂದು ಹೇಳಿಕೆ ನೀಡಿದ್ದರು. ನಾಝಿಗಳ ಪರಮ ವೈರಿಗಳು ಯಹೂದಿಯರು, ಎಡ ಪಂಥೀಯರು ಮತ್ತು ನಾಝಿಗಳ ರಾಜಕೀಯ ಸಿದ್ಧಾಂತ ಒಪ್ಪದ ಬರಹಗಾರರು. ಈ ಮೂವರನ್ನು ಜರ್ಮನ್ ವಿರೋಧಿಗಳೆಂದು ಬ್ರ್ಯಾಂಡ್ ಮಾಡಲಾಗಿತ್ತು. ಅವರ ಬರಹಗಳನ್ನು ಪಟ್ಟಿ ಮಾಡಲಾಗಿತ್ತು. ಮೇ 1933ರ ಹೊತ್ತಿಗೆ ಸುಮಾರು 200 ಬರಹಗಾರರನ್ನು ಬ್ಲ್ಯಾಕ್ ಲಿಸ್ಟ್ ಮಾಡಲಾಗಿತ್ತು ಮತ್ತು ಸುಮಾರು 3,500 ಪುಸ್ತಕಗಳನ್ನು ಬ್ಯಾನ್ ಮಾಡಲಾಗಿತ್ತು.

ನಾಝಿಗಳಿಗೆ ತೀರಾ ಸಿಟ್ಟು ತರಿಸಿದ್ದು ಎರಿಕ್ ಮರಿಯಾ ರೆಮರ್ಕ್. ಅವರ 1928ರ ಕಾದಂಬರಿ 'All Quiet on the Western Front’ ಮೇಲೆ ನಾಝಿಗಳಿಗೆ ಎಲ್ಲಿಲ್ಲದ ಸಿಟ್ಟಿತ್ತು. ಈ ಕಾದಂಬರಿ ನಿರ್ದಾಕ್ಷಿಣ್ಯವಾಗಿ ಮೊದಲ ಮಹಾಯುದ್ಧ್ದದ ಭಯಾನಕ ಚಹರೆಗಳನ್ನು ಓದುಗರ ಮುಂದೆ ತೆರೆದಿಟ್ಟಿತ್ತು. ಈ ಕಾದಂಬರಿಯಲ್ಲಿದ್ದ ಕಟುಸತ್ಯ, ಶಾಂತಿ ಸಂದೇಶಗಳನ್ನು ಅರಗಿಸಿಕೊಳ್ಳಲು ನಾಝಿಗಳಿಗೆ ಸಾಧ್ಯವಾಗಲಿಲ್ಲ. ಜರ್ಮನ್ ಯೋಧರನ್ನು ಕಾದಂಬರಿ ಅವಮಾನಿಸಿದೆ ಎಂದು ನಾಝಿಗಳು ದೂರಿದರು. ಕಾದಂಬರಿ ಆಧಾರಿತ ಚಲನಚಿತ್ರ ಪ್ರದರ್ಶನವನ್ನು ತಡೆಯಲಾಯಿತು. ಚಿತ್ರಕ್ಕೆ ತಾತ್ಕಾಲಿಕ ಬ್ಯಾನ್ ಹೇರುವಂತೆ ಮಾಡಿದರು. ಎರಿಕ್ ಮರಿಯಾ ರೆಮರ್ಕ್ ನಾಝಿಗಳು ಅಧಿಕಾರಕ್ಕೆ ಬರುವ ಮುನ್ನವೇ ಜರ್ಮನಿ ತೊರೆದು ಸ್ವಿಟ್ಸರ್ಲ್ಯಾಂಡಿನಲ್ಲಿ ಆಶ್ರಯ ಪಡೆದ.

ಬಹುಶಃ ಪುಸ್ತಕ ಸುಟ್ಟು ಹಾಕುವ ಕೃತ್ಯಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಎರಿಕ್ ಕಾಸ್ಟ್ನರ್ ಮಾತ್ರ. ಎರಿಕ್ ಕಾಸ್ಟ್ನರ್ ಯುಹೂದಿಯಲ್ಲದ ಕಾರಣಕ್ಕೆ ಜರ್ಮನಿಯಲ್ಲಿ ಹೇಗೋ ಬದುಕಿಬಿಟ್ಟ. ಆದರೆ ಎಲ್ಲರೂ ಎರಿಕ್ನಷ್ಟೇ ಅದೃಷ್ಟವಂತರಾಗಿರಲಿಲ್ಲ. ಅಗಣಿತ ಪತ್ರಕರ್ತರನ್ನು, ಬರಹಗಾರರನ್ನು ಕೊಲ್ಲಲ್ಲಾಯಿತು. ತಂದೆಯನ್ನು ನೋಡಿಕೊಳ್ಳಲು ಜರ್ಮನಿಯಲ್ಲೇ ಉಳಿದುಕೊಂಡ ಕವಯತ್ರಿ ಗರ್ತೃದ್ ಕೋಲ್ಮಳ್ರನ್ನು ಆಶ್ವಿಟ್ಜ್ ಕಾನ್ಸಂಟ್ರೇಶನ್ ಶಿಬಿರಕ್ಕೆ ಅಟ್ಟಲಾಯಿತು. ಅವರು ಅಲ್ಲೇ ಪ್ರಾಣ ಬಿಟ್ಟರು. ದೇಶ ಬಿಟ್ಟು ಹೊರನಡೆದವರ ಜೀವನವೇನೂ ಸುಖಮಯವಾಗಿರಲಿಲ್ಲ. ಹೊಸ ದೇಶದಲ್ಲಿ, ಹೊಸ ಭಾಷೆ ನುಡಿಯುವವರ ನಡುವೆ ಈ ಬರಹಗಾರರಿಗೆ ತಮ್ಮ ಭಾಷೆಯೇ ಬರದಾಯಿತು. ಆರ್ಥಿಕ ಸಂದಿಗ್ದತೆ, ಮಾನಸಿಕ ಯಾತನೆಗಳಿಂದ ವಾಲ್ಟರ್ ಬೆಂಜಮಿನ್, ಸ್ಟೆಫನ್ ಜ್ವಿಗ್ ಮತ್ತು ಅರ್ನೆಸ್ಟ್ ಟೊಳ್ಳರ್ ಆತ್ಮಹತ್ಯೆ ಮಾಡಿಕೊಂಡರು.

ಇನ್ನು ಬ್ರೆಕ್ಟ್, ಥಾಮಸ್ ಮನ್, ಬಿಲ್ಲಿ ವಿಲ್ದೆರ್, ಫ್ರಿಟ್ಜ್ ಲ್ಯಾಂಗ್ನಂತಹ ವಲಸೆ ಬಂದ ಕೆಲ ಬರಹಗಾರರು ತಮ್ಮ ಬದುಕು ಕಟ್ಟಿಕೊಂಡರು. ಹೀಗೆ ಜರ್ಮನಿಯಿಂದ ವಲಸೆ ಬಂದವರಿಂದ ಅಮೆರಿಕದ ವಿಶ್ವವಿದ್ಯಾನಿಲಯಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಭಾರೀ ಉಪಯೋಗವಾದರೆ, ಜರ್ಮನಿ ಇಂದಿಗೂ ಈ ನಷ್ಟದಿಂದ ಚೇತರಿಸಿಕೊಂಡಿಲ್ಲ.

ಇನ್ನೊಂದೆಡೆ ಜರ್ಮನ್ ವಿದ್ಯಾರ್ಥಿ ಸಂಘ ಪುಸ್ತಕ ಸುಟ್ಟು ಹಾಕುವ ಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿತ್ತು ಎಂಬುದು ವಿಸ್ಮಯದ ಸಂಗತಿ. ವಿದ್ಯಾರ್ಥಿ ಸಂಘದಲ್ಲಿ ಸಾಕಷ್ಟು ನಾಝಿ ಸದಸ್ಯರಿದ್ದರು. ಈ ಜರ್ಮನ್ ವಿದ್ಯಾರ್ಥಿ ಸಂಘಕ್ಕೆ ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್’ ಒಂದು ಪತ್ರ ಬರೆದಿತ್ತು. ಅದರ ಉಲ್ಲೇಖ ಇಲ್ಲಿ ಪ್ರಸ್ತುತ. ‘‘ಆಲೋಚನೆಗಳನ್ನು, ವಿಚಾರಗಳನ್ನು ನೀವು ಕೊಲ್ಲಬಹುದೆಂದು ಭಾವಿಸಿದ್ದಾದರೆ ನಿಮಗೆ ಇತಿಹಾಸ ಯಾವುದೇ ಪಾಠವನ್ನೂ ಕಲಿಸಿಲ್ಲ. ಈ ಹಿಂದೆ ಅನೇಕ ಸರ್ವಾಧಿಕಾರಿಗಳು ಆಲೋಚನೆ, ಅನಿಸಿಕೆಗಳನ್ನು ಕೊಲ್ಲಲು ಪ್ರಯತ್ನಿಸಿದ್ದಾರೆ. ಆದರೆ ಆಲೋಚನೆಗಳು ಪುಟಿದೆದ್ದು ಬೃಹದಾಕಾರವಾಗಿ ಬೆಳೆದು ಸರ್ವಾಧಿಕಾರಿಗಳನ್ನು ನಾಶ ಮಾಡಿವೆ’’ ಎಂಬ ಹೆಲೆನ್ ಕೆಲ್ಲರ್ ಅವರ ಮಾತುಗಳನ್ನು ಆ ಪತ್ರದಲ್ಲಿ ಬಳಸಿಕೊಳ್ಳಲಾಗಿತ್ತು. ಅಂದು ಅಂತರ್ರಾಷ್ಟ್ರೀಯ ಖ್ಯಾತಿಯ ಜಾಕ್ ಲಂಡನ್, ಸಿನ್ಕ್ಲೆರ್, ಹೆಮಿಂಗ್ವೇ, ಮ್ಯಾಕ್ಸಿಮ್ ಗೋರ್ಕಿ, ಜಾರೊಸ್ಲಾವ್ ಹಸೆಕ್, ಶೋಲೆಮ್ ಆಶ್ಚ ಬರಹಗಳ ಜೊತೆಗೆ ಹೆಲೆನ್ ಕೆಲ್ಲೆರ್ ಪುಸ್ತಕಗಳನ್ನು ಕೂಡ ಬೆಂಕಿಗೆ ಹಾಕಲಾಗಿತ್ತು.

ಬರ್ಲಿನ್ ನಗರದಲ್ಲಿ ಪುಸ್ತಕಗಳನ್ನು ಸುಟ್ಟ ಜಾಗದಲ್ಲಿ ಇಸ್ರೇಲಿ ಕಲಾವಿದ ಮಿಚಾ ಉಲ್ಮನ್ ಕಲಾತ್ಮಕ ಕೋಣೆಯೊಂದನ್ನು ಸೃಷ್ಟಿಸಿದ. ನೆಲಮಾಳಿಗೆಯಲ್ಲಿರುವ ಕೋಣೆಯಲ್ಲಿ ಬಿಳಿಯ ಬಣ್ಣದ ಖಾಲಿ ಶೆಲ್ಗಳಿವೆ. ಬೀದಿಯಲ್ಲಿ ಓಡಾಡುವವರು ಕೂಡ ಪಾರದರ್ಶಕ ಗಾಜಿನ ಮೂಲಕ ಈ ಕೋಣೆಯನ್ನು ನೋಡಬಹುದು. ಅಲ್ಲೇ ಇರುವ ಫಲಕದಲ್ಲಿ ‘‘ಎಲ್ಲಿ ಪುಸ್ತಕಗಳನ್ನು ಸುಡುವರೋ, ಬಹುಬೇಗ ಅಲ್ಲಿ ಜನರನ್ನು ಕೂಡ ಸುಟ್ಟು ಹಾಕಲಾಗುತ್ತದೆ’’ ಎಂದು ಬರೆಯಲಾಗಿದೆ. ಸ್ಪೇನ್ನಲ್ಲಿ ಪುಸ್ತಕಗಳನ್ನು ಸುಟ್ಟುಹಾಕುವಾಗ ಐನ್ರಿಚ್ ಹೇನ್ ಬರೆದ ಈ ಸಾಲು ಜರ್ಮನಿಯಲ್ಲಿ ಭಯಾನಕವಾಗಿ ದಿಟವಾಯಿತು. ನಾಝಿಗಳು 1933ರಲ್ಲಿ ಪುಸ್ತಕಗಳನ್ನು ಸುಟ್ಟರು. 1938ರಲ್ಲಿ ಯುಹೂದಿಯರ ದೇವಾಲಯಗಳು ಬೂದಿಯಾದವು. 1942ರಿಂದ ನಾಝಿಗಳು ಯುರೋಪಿಯನ್ ಯಹೂದಿಯರ ನರಮೇಧ ನಡೆಸಿದರು. ಈ ನರಮೇಧ ‘ಶೋಹ’ (shoah) ಎಂದೇ ಕುಖ್ಯಾತಿಯಾಯಿತು.

ನಾಝಿಗಳು ಪುಸ್ತಕ ಸುಡುವ ಸಂಸ್ಕೃತಿಯ ಜನಕರೂ ಅಲ್ಲ ಅಥವಾ ಆ ಸಂಸ್ಕೃತಿ ಅಲ್ಲಿಗೆ ಕೊನೆಗೊಳ್ಳಲಿಲ್ಲ ಕೂಡ. ನಾಝಿ ಪುಸ್ತಕ ಸುಡುವ ಬರ್ಬರ ಕೃತ್ಯದ ಅನ್ವೇಷಣೆ ಮಾಡಿದವರೂ ಅಲ್ಲ. ಪುಸ್ತಕ ಸುಡುವ ದೊಡ್ಡ ಪರಂಪರೆಯೇ ಇದೆ. ಪುರಾತನ ಗ್ರೀಸ್, ಚೀನಾ ಮತ್ತು ಇತ್ತೀಚೆಗೆ ರಶ್ಯದಲ್ಲೂ ಪುಸ್ತಕ ಸುಡಲಾಯಿತು. ನಂತರದ ದಿನಗಳಲ್ಲಿ ಪ್ರಭುತ್ವಗಳು ಪುಸ್ತಕ ಸುಡುವ ಬದಲಾಗಿ ಪುಸ್ತಕದ ಮೇಲೆ ನಿಷೇದ ಹೇರುವುದನ್ನು ಕಲಿತುಕೊಂಡವು. ಲಾರೆನ್ಸ್ ಬರೆದ ‘ಸನ್ಸ್ ಆ್ಯಂಡ್ ಲವರ್ಸ್’ನಿಂದ ಹಿಡಿದು ಸಲ್ಮಾನ್ ರಶ್ದಿಯವರ ‘ಸಟಾನಿಕ್ ವರ್ಸಸ್’, ತಸ್ಲೀಮಾ ನಸ್ರೀನ್ ಅವರ ‘ಲಜ್ಜ’, ‘ರೊಹಿಂಗ್ಟನ್ ಮಿಸ್ತ್ರಿ’ಯವರ ‘ಸಚ್ ಆ ಲಾಂಗ್ ಜರ್ನಿ’ವರೆಗೆ ಇದು ನಡೆಯುತ್ತಲೇ ಬಂದಿದೆ. ಇಂದು ಪ್ರಭುತ್ವಗಳು ಮುಂದುವರಿದು ನಿಷೇಧಕ್ಕೂ ಕೈಹಾಕದೆ ಪುಸ್ತಕ ಪರಿಷ್ಕರಣೆಯ ನೆಪದಲ್ಲಿ ಮಹಾಶ್ವೇತ ದೇವಿ, ಸೂಕಿರ್ತಾರಣಿ, ಎ.ಕೆ. ರಾಮಾನುಜನ್(ಮುನ್ನೂರು ರಾಮಾಯಣ) ಪಠ್ಯ ಪುಸ್ತಕದಿಂದ ತೆಗೆದುಹಾಕಿದರೆ, ಭಾರತೀಯ ಇತಿಹಾಸವನ್ನೇ ತಿರುಚಿ ಜನರ ಮನದಲ್ಲಿ ಹಗೆ ತುಂಬುವ ಕೆಲಸವೂ ನಡೆದಿದೆ. ಪ್ರಭುತ್ವದ ಪ್ರಾಬಲ್ಯ, ಅಧಿಕಾರವನ್ನು ಸದಾ ಪ್ರಶ್ನಿಸುವ ಮುಕ್ತ ಪದಗಳಿಗೆ ಇರುವ ಅಗಾಧ ಶಕ್ತಿಗೆ ನಿರಂಕುಶಮತಿ, ಸರ್ವಾಧಿಕಾರಿಗಳು ಹೆದರುತ್ತಾರೆ ಎಂಬುದಂತೂ ಸಾರ್ವಕಾಲಿಕ ಸತ್ಯ.

Similar News