×
Ad

ಹೂಡೆ ಪರಿಸರದಲ್ಲಿ ಹಳದಿ ಬಣ್ಣದ ಕಪ್ಪೆಗಳ ಹಿಂಡು!

Update: 2023-06-21 21:50 IST

ಉಡುಪಿ: ಹೂಡೆಯ ಸಾಲಿಹಾತ್ ಮೈದಾನದಲ್ಲಿ ಹಳದಿ ಬಣ್ಣದ ಕಪ್ಪೆಗಳ ಹಿಂಡು ಕಂಡುಬಂದಿದ್ದು, ಈ ಅಪರೂಪದ ದೃಶ್ಯ ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ಇಂಡಿಯನ್ ಬುಲ್ ಫ್ರಾಗ್(ಭಾರತ ಗೂಳಿ ಕಪ್ಪೆ) ಪ್ರಬೇಧಕ್ಕೆ ಸೇರಿದ ಗಂಡು ಕಪ್ಪೆಗಳು ಮಳೆಗಾಲದಲ್ಲಿ ತಮ್ಮ ಚರ್ಮವನ್ನು ಹಳದಿ ಬಣ್ಣಕ್ಕೆ ಬದಲಾಯಿಸುವುದು ಸಾಮಾನ್ಯವಾದ ಪ್ರಕ್ರಿಯೆ ಆಗಿದೆ. ಇದು ಸಂತಾನೋಭಿವೃದ್ಧಿ ಗಾಗಿ ಗಂಡು ಕಪ್ಪೆಯು ಹೆಣ್ಣು ಕಪ್ಪೆಯನ್ನು ಆಕರ್ಷಣೆ ಮಾಡುವ ವಿಧಾನ ಇದಾಗಿದೆ ಎಂದು ಸಂಶೋಧಕ ಡಾ.ಗುರುರಾಜ್ ಕೆ.ವಿ. ತಿಳಿಸಿದ್ದಾರೆ.

ಗದ್ದೆ ಸೇರಿದಂತೆ ನೀರು ನಿಂತ ಪ್ರದೇಶಗಳಲ್ಲಿ ಹೆಣ್ಣು ಕಪ್ಪೆಗಳು ಮೊಟ್ಟೆ ಇಡುತ್ತದೆ. ಇಂತಹ ಪ್ರದೇಶದಲ್ಲಿ ಮೊಟ್ಟೆ ಇಟ್ಟರೆ ಬಿಸಿಲು ಬಂದರೂ ಮೊಟ್ಟೆ ಬಿಸಿಲಿನಲ್ಲಿ ಒಣಗಿ ಹೋಗಲ್ಲ ಎಂಬುದು ಕಪ್ಪೆಗಳ ಲೆಕ್ಕಚಾರ. ಅದಕ್ಕಾಗಿ ಗಂಡು ಕಪ್ಪೆಗಳು ಇಂತಹ ನೀರು ನಿಂತ ಪ್ರದೇಶದಲ್ಲಿಯೇ ಸೇರುತ್ತವೆ. ಹೆಣ್ಣು ಕಪ್ಪೆಗಳು ಕಂದು ಹಾಗೂ ಬೂದು ಬಣ್ಣದಿಂದ ಇರುತ್ತದೆ. ಆದರೆ ಹಾರ್ಮೋನ್ ಬದಲಾ ವಣೆಯಾಗಿ ಗಂಡುಗಳು ಮಾತ್ರ ಸಂಪೂರ್ಣ ಹಳದಿ ಯಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಕಪ್ಪೆಯಲ್ಲಿ ಗಂಡು ಮತ್ತು ಹೆಣ್ಣಿನ ಅನುಪಾತ ಮನುಷ್ಯರಿಗಿಂತ ವಿಭಿನ್ನ ವಾಗಿರುತ್ತದೆ. ಒಂದು ಹೆಣ್ಣಿಗೆ 10-15 ಗಂಡು ಕಪ್ಪೆಗಳು ಇರುತ್ತವೆ. ಯಾವ ಗಂಡಿಗೆ ಹೆಣ್ಣು ಸಿಗಬೇಕೆಂಬ ನಿರ್ಧಾರವನ್ನು ಹೆಣ್ಣು ಕಪ್ಪೆ ಮಾಡುತ್ತಾರೆ. ಅದಕ್ಕೆ ಹೆಣ್ಣು ಕಪ್ಪೆಯನ್ನು ಗೊಂದಲಕ್ಕೀಡು ಮಾಡಲು ಗಂಡು ಕಪ್ಪೆಗಳು ಎಲ್ಲ ಒಂದೇ ರೀತಿಯ ಹಳದೆ ಬಣ್ಣ ಹಾಕಿಕೊಂಡಿರುತ್ತಾರೆ. ಎಲ್ಲ ಗಂಡು ಕಪ್ಪೆಗಳು ಒಟ್ಟಿಗೆ ಕೂಗಲು ಆರಂಭಿಸುತ್ತದೆ. ಆಗ ಹೆಣ್ಣಿಗೆ ಗೊಂದಲ ಆಗಿ ಯಾವ ಗಂಡಿನ ಜೊತೆ ಹೋಗಬೇಕೆಂಬುದು ಗೊತ್ತಿರುವುದಿಲ್ಲ. ಇದರಿಂದ ಗಂಡು ಕಪ್ಪೆಗಳು ಹೆಚ್ಚಿನ ಅವಕಾಶಗಳು ಇರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

Similar News