ಗೀತಾ ಪ್ರೆಸ್‌ಗೆ ಗಾಂಧಿ ಶಾಂತಿ ಪುರಸ್ಕಾರದ ಬಗ್ಗೆ ನನಗೆ ಮಾಹಿತಿ ನೀಡಿರಲಿಲ್ಲ: ಅಧೀರ್ ರಂಜನ್ ಚೌಧುರಿ
ಹೊಸದಿಲ್ಲಿ: ಗೀತಾ ಪ್ರೆಸ್ ಪ್ರಕಾಶನ ಸಂಸ್ಥೆಗೆ 2021ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ನೀಡುವ ನಿರ್ಧಾರದ ಬಗ್ಗೆ ತನ್ನನ್ನು ಕತ್ತಲೆಯಲ್ಲಿರಿಸಲಾಗಿತ್ತು ಎಂದು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯಲ್ಲಿ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧುರಿ ಯವರು ಆರೋಪಿಸಿದ್ದಾರೆ. ಚೌಧುರಿ ಪ್ರಶಸ್ತಿಯನ್ನು ನಿರ್ಧರಿಸುವ ತೀರ್ಪುಗಾರರ ಸಮಿತಿಯ ಸದಸ್ಯರಾಗಿದ್ದಾರೆ.
ಸಮಿತಿಯ ಯಾವುದೇ ಸಭೆಗಳ ಬಗ್ಗೆ ತನಗೆ ಮಾಹಿತಿ ನೀಡಲಾಗಿರಲಿಲ್ಲ ಅಥವಾ ಆಹ್ವಾನಿಸಿಯೂ ಇರಲಿಲ್ಲ. ಮಾಧ್ಯಮಗಳ ಮೂಲಕವೇ ಗೀತಾ ಪ್ರೆಸ್‌ಗೆ ಪುರಸ್ಕಾರದ ಕುರಿತು ತನಗೆ ಗೊತ್ತಾಗಿತ್ತು. ಇದು ಈ ಸರಕಾರದ ಸಂಪೂರ್ಣ ನಿರಂಕುಶಾಧಿಕಾರದ ಧೋರಣೆಯಾಗಿದೆಯೇ ಹೊರತು ಬೇರೇನಲ್ಲ,ಈ ಧೋರಣೆ ಅವರ ಎಲ್ಲ ಕ್ರಿಯೆಗಳಲ್ಲಿ ಮತ್ತು ಪ್ರತಿಕ್ರಿಯೆಗಳಲ್ಲಿ ಅತ್ಯಂತ ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚೌಧುರಿ ತಿಳಿಸಿದರು.
2021ರ ಗಾಂಧಿ ಶಾಂತಿ ಪ್ರಶಸ್ತಿಯನ್ನು ಗೀತಾ ಪ್ರೆಸ್‌ಗೆ ನೀಡುವ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದೆ. ಈ ನಿರ್ಧಾರವನ್ನು ಹಾಸ್ಯಾಸ್ಪದ ಎಂದು ಬಣ್ಣಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಮತ್ತು ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಗೆ ಪ್ರಶಸ್ತಿಯನ್ನು ನೀಡುವುದಕ್ಕೆ ಹೋಲಿಸಿದ್ದರು.
ಗಾಂಧಿ ಶಾಂತಿ ಪುರಸ್ಕಾರ ಪ್ರಕ್ರಿಯಾ ಸಂಹಿತೆಯಂತೆ ಪ್ರಧಾನಿ, ಭಾರತದ ಮುಖ್ಯ ನ್ಯಾಯಾಧೀಶ, ಲೋಕಸಭೆಯಲ್ಲಿ ವಿಪಕ್ಷ ನಾಯಕ ಅಥವಾ ಅತ್ಯಂತ ದೊಡ್ಡ ಪ್ರತಿಪಕ್ಷದ ನಾಯಕ ಮತ್ತು ಇಬ್ಬರು ಗಣ್ಯವ್ಯಕ್ತಿಗಳನ್ನು ಒಳಗೊಂಡಿರುವ ಐವರು ಸದಸ್ಯರ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡುತ್ತದೆ. ಕನಿಷ್ಠ ಮೂವರು ಸದಸ್ಯರ ಉಪಸ್ಥಿತಿಯಲ್ಲಿ ಮಾತ್ರ ಸಮಿತಿಯು ತನ್ನ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಸುಲಭ್ ಇಂಟರ್‌ನ್ಯಾಷನಲ್‌ನ ಸ್ಥಾಪಕ ಬಿಂದೇಶ್ವರ ಪಾಠಕ್ ಅವರು ತೀರ್ಪುಗಾರರ ಸಮಿತಿಯಲ್ಲಿಯ ಇಬ್ಬರು ಗಣ್ಯವ್ಯಕ್ತಿಗಳಾಗಿದ್ದಾರೆ ಎಂದು ಸಂಸ್ಕೃತಿ ಸಚಿವಾಲಯದ ಅನಾಮಿಕ ಅಧಿಕಾರಿಗಳು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದ್ದರು.
ಚೌಧುರಿಯವರ ಹೇಳಿಕೆಯನ್ನು ಅಲ್ಲಗಳೆದ ಅಧಿಕಾರಿಗಳು,ಪುರಸ್ಕೃತರನ್ನು ಆಯ್ಕೆ ಮಾಡುವ ಸಭೆಗೆ ಅವರನ್ನು ಆಹ್ವಾನಿಸಲಾಗಿತ್ತು,ಆದರೆ ಅವರು ಬಂದಿರಲಿಲ್ಲ ಎಂದೂ ತಿಳಿಸಿದ್ದರು.
ಗೋರಖ್‌ಪುರದ ಗೀತಾ ಪ್ರೆಸ್ ಹಿಂದೂ ಧಾರ್ಮಿಕ ಪುಸ್ತಕಗಳ ಅತಿ ದೊಡ್ಡ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿದೆ.