×
Ad

ಸೆಪ್ಟಂಬರ್‌ನಲ್ಲಿ ನನ್ನ ಕೊನೆಯ ಡೇವಿಸ್ ಕಪ್ ಪಂದ್ಯ: ರೋಹನ್ ಬೋಪಣ್ಣ

Update: 2023-06-21 23:37 IST

ಬೆಂಗಳೂರು: ಸೆಪ್ಟಂಬರ್‌ನಲ್ಲಿ ಭಾರತದಲ್ಲಿ ಮೊರೊಕ್ಕೊ ವಿರುದ್ಧದ ಡೇವಿಸ್ ಕಪ್ ಪಂದ್ಯಾವಳಿ ನಡೆಯುವ ಸಂದರ್ಭದಲ್ಲಿ ನಾನು ಡೇವಿಸ್ ಕಪ್‌ನಿಂದ ನಿವೃತ್ತಿ ಹೊಂದುತ್ತೇನೆ ಎಂದು ಭಾರತದ ಅಗ್ರ ಡಬಲ್ಸ್ ಆಟಗಾರ ರೋಹನ್ ಬೋಪಣ್ಣ ಬುಧವಾರ ಘೋಷಿಸಿದ್ದಾರೆ. ಆದರೆ ರೋಹನ್ ಬೋಪಣ್ಣಗೆ ತಾನು ಇಚ್ಛಿಸಿದಂತೆ ತನ್ನ ಕೊನೆಯ ಪಂದ್ಯವನ್ನು ತವರು ರಾಜ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ, ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಈಗಾಗಲೇ ಈ ಪಂದ್ಯದ ಆತಿಥ್ಯವನ್ನು ಉತ್ತರಪ್ರದೇಶಕ್ಕೆ ನೀಡಿದೆ.

ಭಾರತ ಮತ್ತು ಮೊರೊಕ್ಕೊ ನಡುವಿನ ವಿಶ್ವ ಗುಂಪು 2 ಪಂದ್ಯವು ಸೆಪ್ಟಂಬರ್‌ನಲ್ಲಿ ನಡೆಯಲಿದೆ. 43 ವರ್ಷದ ಬೋಪಣ್ಣ ತನ್ನ ಮೊದಲ ಡೇವಿಸ್ ಕಪ್ ಪಂದ್ಯವನ್ನು 2002ರಲ್ಲಿ ಆಡಿದರು. ಅವರು ಈಗಾಗಲೇ ಭಾರತಕ್ಕಾಗಿ 32 ಪಂದ್ಯಗಳನ್ನು ಆಡಿದ್ದಾರೆ ಹಾಗೂ ಈಗಲೂ ಎಟಿಪಿ ಟೂರ್‌ನಲ್ಲಿ ಅತ್ಯುತ್ತಮ ಟೆನಿಸ್ ಆಡುತ್ತಿದ್ದಾರೆ.
‘‘ನಾನು ನನ್ನ ಕೊನೆಯ ಡೇವಿಸ್ ಕಪ್ ಪಂದ್ಯವನ್ನು ಸೆಪ್ಟಂಬರ್‌ನಲ್ಲಿ ಆಡಲು ಉದ್ದೇಶಿಸಿದ್ದೇನೆ’’ ಎಂದು ಬೋಪಣ್ಣ ಲಂಡನ್‌ನಿಂದ ಪಿಟಿಐಗೆ ತಿಳಿಸಿದರು.

‘‘ನಾನು 2002ರಿಂದ ತಂಡದಲ್ಲಿದ್ದೇನೆ. ನನ್ನ ಕೊನೆಯ ಪಂದ್ಯವು ನನ್ನ ರಾಜ್ಯದಲ್ಲಿ ನಡೆಯಬೇಕೆಂದು ನಾನು ಬಯಸಿದ್ದೇನೆ. ಈ ಬಗ್ಗೆ ಎಲ್ಲಾ ಭಾರತೀಯ ಆಟಗಾರರೊಂದಿಗೆ ನಾನು ಮಾತನಾಡಿದ್ದೇನೆ. ಬೆಂಗಳೂರಿನಲ್ಲಿ ಆಡಲು ಅವರೆಲ್ಲರೂ ಖುಷಿಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಪಂದ್ಯ ಏರ್ಪಡಿಸಲು ಕೆಎಸ್‌ಎಲ್‌ಟಿಎ ಕೂಡ ಸಂತೋಷ ಪಟ್ಟಿದೆ. ಇನ್ನು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾದವರು ನಮ್ಮ ಫೆಡರೇಶನ್’’ ಎಂದರು.

Similar News