ಹಕ್ಲಾಡಿ: ಶಕ್ತಿ ಯೋಜನೆಗಾಗಿ ಸರಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಧರಣಿ
ಕುಂದಾಪುರ, ಜೂ.22: ಕುಂದಾಪುರ- ಮುಳ್ಳಿಕಟ್ಟೆ- ಹೊಸಾಡು-ಬಂಟ್ವಾಡಿ- ಕಟ್ಟಿನಮಕ್ಕಿ- ಹಕ್ಲಾಡಿ- ಕುಂದಬಾರಂದಾಡಿ- ನೂಜಾಡಿ- ವಂಡ್ಸೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಓಡಿಸಲು ಆಗ್ರಹಿಸಿ ಗುರುವಾರ ಬೆಳಗ್ಗೆ ಹಕ್ಲಾಡಿ ಗ್ರಾಮ ಪಂಚಾಯತ್ ಎದುರು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ, ಮಹಿಳೆಯರಿಗೆ ಸೌಲಭ್ಯಗಳನ್ನು ನೀಡಿದರೆ ಸೋಮಾರಿಗಳಾಗುತ್ತಾರೆ ಎಂದು ಅವಹೇಳನ ಮಾಡಲಾಗುತ್ತಿದೆ. ಸರಕಾರ ಬಡವರಿಗೆ ಸಹಾಯ ಮಾಡಿದರೆ ಸಬ್ಸಿಡಿ ಎಂದು, ಬಂಡವಾಳಗಾರರಿಗೆ ಸಹಾಯ ಮಾಡಿದರೆ ಪ್ರೋತ್ಸಾಹಧನ ಎಂದು ಕರೆಯಲಾಗುತ್ತಿದೆ. ಎಲ್ಲಿಯವರೆಗೆ ಸಾಮಾನ್ಯ ಜನರಿಗೆ ರಕ್ಷಣೆಯ ಆದಾಯ ಕೊಡುವ, ಉದ್ಯೋಗ ಸಿಗುವ ವ್ಯವಸ್ಥೆ ಸರಕಾರ ಮಾಡೋದಿಲ್ಲವೋ ಅಲ್ಲಿಯವರೆಗೆ ಸೌಲಭ್ಯಗಳು ನೀಡಬೇಕು. ಶಕ್ತಿ ಯೋಜನೆಯಲ್ಲಿ ಹಕ್ಲಾಡಿ ಗ್ರಾಮದ ಮಹಿಳೆಯರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರಿ ಬಸ್ ಓಡಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಮುಖಂಡ ಚಂದ್ರಶೇಖರ ಮಾತನಾಡಿ, ಉಚಿತ ಶಕ್ತಿ ಯೋಜನೆಯಿಂದ ಕಡಿಮೆ ಆದಾಯವಿರುವ ಕೃಷಿ ಕೂಲಿಕಾರರಿಗೆ, ಕಾರ್ಮಿಕರಿಗೆ, ಬಡ ರೈತರಿಗೆ ಅನುಕೂಲವಾಗಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗೆ ಸಹಾಯಕ ವಾಗಲಿದೆ. ಶೀಘ್ರ ಬಸ್ ಓಡಿಸಲು ಸಾರಿಗೆ ಪ್ರಾಧಿಕಾರ ಮುಂದಾಗಬೇಕು ಎಂದು ತಿಳಿಸಿದರು.
ಕೃಷಿಕೂಲಿಕಾರರ ಸಂಘಟನೆ ಜಿಲ್ಲಾ ಮುಖಂಡ ವೆಂಕಟೇಶ್ ಕೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್ ಮನವಿ ವಾಚಿಸಿದರು. ಪಂಚಾಯತ್ ಅಧ್ಯಕ್ಷ ಚೇತನ್ ಮೊಗವೀರ ಅವರ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಾರಿಗೆ ನಿಯಂತ್ರಣ ಅಧಿಕಾರಿ ಮಂಗಳೂರು ವಿಭಾಗ ಮಂಗಳೂರು ಅವರಿಗೆ ಮನವಿ ಸಲ್ಲಿಸ ಲಾಯಿತು.
ಧರಣಿಯಲ್ಲಿ ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಜನವಾದಿ ಮಹಿಳಾ ಸಂಘಟನೆಯ ಬಲ್ಕೀಸ್, ಶೀಲಾವತಿ, ನಾಗರತ್ನ ನಾಡ, ಮನೋರಮಾ ಭಂಡಾರಿ, ಜಯ, ಯಮುನಾ ಮೊದಲಾದವರು ಉಪಸ್ಥಿತರಿದ್ದರು.