ಘಾಂದ್ರುಕ್’: ಬೇರು-ಭೂಮಿ-ಆಕಾಶ -ಕನಸು-ಮೋಡಗಳ ಸಂಗಮ
ಹಿರಿಯ ಪತ್ರಕರ್ತ-ಲೇಖಕ-ಕಥೆಗಾರ ಸತೀಶ್ ಚಪ್ಪರಿಕೆ ಅವರ ಪ್ರಥಮ ಕಾದಂಬರಿ ‘ಘಾಂದ್ರುಕ್’ ಜೂನ್ 25, 2023ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಮೂಲತಃ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ಚಪ್ಪರಿಕೆ ಗ್ರಾಮದವರಾದ ಇವರ ಎರಡು ಕಥಾ ಸಂಕಲನಗಳು - ‘ಬೇರು’, ‘ವರ್ಜಿನ್ ಮೊಹಿತೊ’ ಈಗಾಗಲೇ ಪ್ರಕಟವಾಗಿವೆ. ಮನುಷ್ಯ-ಮನುಷ್ಯತ್ವ, ಧರ್ಮ-ಅಧರ್ಮ, ಕಾಮ-ಸಾವು, ಪ್ರೇಮ-ಒಲವು... ಎಲ್ಲ ದ್ರವ್ಯಗಳನ್ನೂ ಒಡಲಲ್ಲಿ ಹುದುಗಿಸಿಕೊಂಡಿದೆ ‘ಘಾಂದ್ರುಕ್’ ಕನ್ನಡ ಕಾದಂಬರಿ.
ಈ ಕೃತಿ ಕನ್ನಡದ ಮಹತ್ವದ ಪ್ರಕಾಶನ ಸಂಸ್ಥೆಯಾದ ಬೆಂಗಳೂರಿನ ‘ಅಂಕಿತ ಪುಸ್ತಕ’ದ 881ನೇ ಪ್ರಕಟಣೆ. ‘ಅಂಕಿತ ಪುಸ್ತಕ’, ‘ನವಕರ್ನಾಟಕ ಪ್ರಕಾಶನ’, ‘ಸಪ್ನಾ ಬುಕ್ಸ್’ ಹಾಗೂ ಇವುಗಳ ಆನ್‌ಲೈನ್ ಮಾರುಕಟ್ಟೆಯಲ್ಲಿ ಮತ್ತು ರಾಜ್ಯದ ಎಲ್ಲ ಪ್ರಮುಖ ಮಳಿಗೆಗಳಲ್ಲಿ ಸಿಗಲಿದೆ. ಪುಟಗಳ ಸಂಖ್ಯೆ- 424; ಹಾರ್ಡ್ ಬೌಂಡ್; ಬೆಲೆ: ರೂ.495
‘ಘಾಂದ್ರುಕ್’ ಕಾದಂಬರಿಯ ಆಯ್ದ ಭಾಗ...
ವಿಕ್ಟೋರಿಯ ಎಸ್ಟೇಟ್‌ನಿಂದ ಹತ್ತು ಜನ ಶಸ್ತ್ರ ಸಜ್ಜಿತ ಸೈನಿಕರ ನಡುವೆ ಹೆಲಿಕಾಪ್ಟರ್‌ನಲ್ಲಿ ಸೋಫಿಯ-ಪ್ರಮೀಳಾ ಇಬ್ಬರನ್ನೂ ಕಾರ್ಡಿಫ್‌ಗೆ ಕರೆದೊಯ್ಯಲಾಯಿತು. ಅಲ್ಲಿಂದ ಅಜ್ಜನ ಖಾಸಗಿ ವಿಮಾನದಲ್ಲಿ ನೇರವಾಗಿ ನೆಪೋಲಿಸ್ ಎಸ್ಟೇಟ್‌ನ ಏರ್‌ಸ್ಟ್ರಿಪ್. ಅಲ್ಲಿಂದ ಆ ಮಗು ಎಂದೂ ಕಾಣದ ಭವ್ಯ ಬಂಗಲೆಗೆ. ಸೋಫಿಯ ಆ ಮನೆಗೆ ಕಾಲಿಡುವ ಮೊದಲೇ ಅವಳಿಗೊಂದು ಬೃಹತ್ ಮಲಗುವ ಕೋಣೆ. ಅದರಲ್ಲಿ ಜಗತ್ತಿನ ಎಲ್ಲ ದುಬಾರಿ ಮಕ್ಕಳ ಆಟದ ಸಾಮಾನುಗಳು. ಪಕ್ಕದಲ್ಲಿಯೇ ಪ್ರಮೀಳಾಗೊಂದು ಖಾಸಗಿ ಕೋಣೆ. ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು.
ನೆಪೋಲಿಸ್‌ಗೆ ಹೋದ ಕೆಲವು ವಾರಗಳವರೆಗೆ ಮಗು-ನ್ಯಾನಿ ಇಬ್ಬರಿಗೂ ಅಲ್ಲಿನ ಮಿತಿ ಮೀರಿದ ಅಚ್ಚುಕಟ್ಟು-ಸೆಕ್ಯುರಿಟಿ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾಯಿತು. ಐದು ಸಾವಿರ ಎಕರೆ ಪ್ರದೇಶದಲ್ಲಿ ಹರಡಿದ್ದ ಆ ಎಸ್ಟೇಟ್ ಅಕ್ಷರಶಃ ಒಂದು ಬಂದಿಖಾನೆ. ಸೋಫಿಯ ಪಾಲಿಗೆ ಅಲ್ಲಿದ್ದ ಖಾಸಗಿ ಪ್ರಾಣಿ ಸಂಗ್ರಹಾಲಯದಲ್ಲಿದ್ದ ಆನೆ, ಹುಲಿ, ಜಿರಾಫೆ, ಹಿಪೊಪೊಟಾಮಸ್, ವಿವಿಧ ಬಗೆಯ ಹಕ್ಕಿಗಳು, ಮತ್ತುಳಿದ ಪ್ರಾಣಿಗಳೇ ಜೊತೆಗಾರರಾದವು.
ಪ್ರಮೀಳಾ, ಸದಾ ಇವರಿಬ್ಬರನ್ನು ನೆರಳಿನಂತೆ ಹಿಂಬಾಲಿಸುತ್ತಿದ್ದ ನಾಲ್ವರು ಶಸ್ತ್ರಸಜ್ಜಿತ ಸೆಕ್ಯುರಿಟಿ ಗಾರ್ಡ್‌ಗಳ ಜೊತೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಸೋಫಿಯ ಪ್ರಾಣಿಗಳ ಜೊತೆ ಕಾಲ ಕಳೆಯಲಾರಂಭಿಸಿದಳು. ಅಜ್ಜಿ ಇವಳ ಬಗ್ಗೆ ಅಷ್ಟು ಗಮನ ಹರಿಸಲಿಲ್ಲ. ಮಮತೆ ತೋರುವ ಯತ್ನ ಕೂಡ ಮಾಡಲಿಲ್ಲ. ಊರಲ್ಲಿದ್ದರೆ ಅಜ್ಜ ಮಾತ್ರ ತಪ್ಪದೆ ಮೊಮ್ಮಗಳನ್ನು ಡಿನ್ನರ್ ಟೇಬಲ್‌ಗೆ ಸ್ವತಃ ತಾನೇ ಎತ್ತುಕೊಂಡು ಹೋಗಿ ಕೈಯಾರೆ ತುತ್ತು ತಿನ್ನಿಸುತ್ತಿದ್ದ. ಆಗ ಪಕ್ಕದಲ್ಲಿ ಪ್ರಮೀಳಾ ನಿಂತಿರುತ್ತಿದ್ದಳು.
ಅಜ್ಜನ ಪ್ರೀತಿಗೆ ಮೊಮ್ಮಗಳು ಕ್ರಮೇಣ ಕರಗಲಾರಂಭಿಸಿದಳು. ಆದರದು ಯಾವಾಗಲಾದರೂ ಅಪರೂಪಕ್ಕೆ ಹನಿಯುವ ಪ್ರೀತಿಯದು. ಸದಾ ಜಿನುಗುವ ತೊರೆಯಲ್ಲ. ಎಷ್ಟೋ ಬಾರಿ ‘ಅಜ್ಜ ಬರ್ತಾನೆ, ಜೊತೆಗೆ ಡಿನ್ನರ್ ಮಾಡ್ತೀನಿ’ ಅಂತ ಹೇಳುತ್ತಲೇ ಏನೂ ತಿನ್ನದೇ ಮಗು ಮಲಗಿದ್ದೂ ಇತ್ತು. ಇನ್ನೇನು ಎಲ್ಲವೂ ಸರಿ ಹೋಗುತ್ತಿದೆ. ಸೋಫಿಯ ನೆಪೋಲಿಸ್‌ನಲ್ಲಿ ಖಾಯಂ ಆಗಿ ನೆಲೆ ನಿಲ್ಲುವುದು, ಹೋಂ ಸ್ಕೂಲಿಂಗ್... ಎನ್ನುವಾಗಲೇ...
ಒಂದು ರಾತ್ರಿ ಅಜ್ಜ ಮೊಮ್ಮಗಳ ಜೊತೆ ಮನೆಯ ಹೊರಗಿನ ವರಾಂಡದಲ್ಲಿ, ಲಾನ್ ಪಕ್ಕದ ತೆರೆದ ಪ್ರದೇಶದಲ್ಲಿದ್ದ ಡೈನಿಂಗ್ ಟೇಬಲ್ ಮೇಲೆ ಕೂತು ಅವಳಿಗೆ ಸೂಪ್ ಕುಡಿಸುತ್ತಿದ್ದ. ಲಾನ್‌ನ ತುದಿಯಲ್ಲಿ ಈಜುಕೊಳ. ಸುತ್ತಲೂ ಹೂತೋಟ. ದೂರದಂಚಿನಲ್ಲಿ ಅಜ್ಜನ ಖಾಸಗಿ ಕಚೇರಿ. ಎಲ್ಲೆಡೆ ಸುಮಾರು ಮೂವತ್ತಕ್ಕೂ ಹೆಚ್ಚು ಸೆಕ್ಯುರಿಟಿ ಗಾರ್ಡ್‌ಗಳು ಬಂದೂಕು ಹಿಡಿದು ಕಾವಲು ಕಾಯುತ್ತಿದ್ದರು.
ಅಜ್ಜನ ಬಲಗೈ ಬಂಟ ಗವಿರಿಯ ರಿವೆರೊ ಅವನ ಕಿವಿಯಲ್ಲಿ ಏನೋ ಬಂದು ಉಸುರಿದ. ಅಜ್ಜನ ಮುಖ ಕೆಂಪಾಗಿ, ಹಣೆಯ ಮೇಲಿನ ನರ-ನರಗಳು ಉಬ್ಬಿ ನಿಂತವು. ಪಕ್ಕದಲ್ಲಿದ್ದ ಸೋಫಿಯ, ಪ್ರಮೀಳಾ ಇಬ್ಬರನ್ನೂ ಸಂಪೂರ್ಣವಾಗಿ ಮರೆತು ಎದ್ದು ನಿಂತ ಅಜ್ಜ...
‘‘ಎಲ್ಲಿದ್ದಾರವರು ಇಲ್ಲಿಗೆ ಎಳೆದುಕೊಂಡು ಬನ್ನಿ’’ ಎಂದು ಆದೇಶಿಸಿಯೇ ಬಿಟ್ಟ.
ಆರು ವರ್ಷಗಳ ಹಿಂದೆ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಗ್ರಿಸೆಲ್ಡ್ ಜಾನ್ ಮೇಲೆ ಗುಂಡಿನ ದಾಳಿ ಮಾಡಿ ಅವರ ಮಾರಣಹೋಮಕ್ಕೆ ಕಾರಣವಾದ ಗುಂಪಿನ ನಾಯಕ, ಉಳಿದ ನಾಲ್ವರನ್ನು ಕೊನೆಗೂ ಮೆಡಲಿನ್ ಕಾರ್ಟಲ್ ಪತ್ತೆ ಹಚ್ಚಿ, ಹೆಡೆಮುರಿ ಕಟ್ಟಿಕೊಂಡು ನೆಪೋಲಿಸ್‌ಗೆ ಕರೆತಂದಿತ್ತು. ಆತ ಬೇರೆ ಯಾರೂ ಆಗಿರಲಿಲ್ಲ. ಕಾಲಿ ಕಾರ್ಟೆಲ್ ದೊರೆಗಳ ಬಲಗೈ ಬಂಟರ ಪೈಕಿ ಒಬ್ಬನಾಗಿದ್ದ ಜುವಾನ್ ಕಾರ್ಲೋಸ್. ಉಳಿದ ನಾಲ್ವರು ಅವನ ಶಿಷ್ಯಂದಿರು.
ಡಂಪಿಂಗ್ ಟ್ರಕ್‌ನಲ್ಲಿ ಮುಖಕ್ಕೆ ಕಪ್ಪು ಬಟ್ಟೆಯ ಮುಸುಕು ಹಾಕಿ, ಕೈಕಾಲು ಕಟ್ಟಿದ್ದ ಕಾರಣ ಒದ್ದಾಡುತ್ತ ಬಿದ್ದಿದ್ದ ಕಾರ್ಲೋಸ್‌ನನ್ನು ಮೊದಲು ತಂದು ಅಜ್ಜನ ಕಾಲ ಬುಡದಲ್ಲಿ ಬಿಸಾಕಿದರು. ಅವನ ಹಿಂದೆಯೇ ಅವನ ನಾಲ್ವರು ಶಿಷ್ಯಂದಿರನ್ನು ಕೂಡ ತಂದು ಹುಲ್ಲು ಹಾಸಿನ ಮೇಲೆ ಎಸೆದರು.
ಎಲ್ಲಿನ ರೋಷ ಬಂದಿತ್ತು ಏನೋ, ಅಜ್ಜ ಒಳಗೋಡಿ ಹೋಗಿ ಐದಡಿ ಉದ್ದದ ಖಡ್ಗವನ್ನು ಹಿಡಿದು ಹೊರಗೋಡಿ ಬಂದ. ಆ ಖಡ್ಗದಿಂದಲೇ ಕಾರ್ಲೋಸ್ ಮುಖದ ಮೇಲಿದ್ದ ಕಪ್ಪುಬಟ್ಟೆಯನ್ನು ಕಿತ್ತೆಸೆದ. ಅವನ ಕತ್ತಿನ ಮೇಲೆ ಖಡ್ಗವಿಟ್ಟು...
‘‘ನನ್ನ ಮಗಳು ಅಳಿಯನನ್ನು ಕೊಂದದ್ದು ನೀನೇನಾ? ಅವರಿಬ್ಬರನ್ನು ಕೊಲ್ಲಲು ನಿನಗೆ ಆರ್ಡರ್ ಕೊಟ್ಟಿದ್ದು ಯಾರು?’’ ರುದ್ರ ಭೀಕರ ಸಾವಿನ ಮನೆಯ ಮುಂದೆ ನಿಂತಿದ್ದ ಕಾರ್ಲೋಸ್ ಅಜ್ಜನ ಕಾಲು ಹಿಡಿದುಕೊಂಡು...
‘‘ದೊರೆಯೇ, ನಿಮ್ಮ ಮಗಳು ಅಳಿಯನನ್ನು ಕೊಂದದ್ದು ನಾನೂ ಅಲ್ಲ. ನನ್ನ ಜೊತೆಯಿರುವ ಈ ನಾಲ್ಕು ಮಂದಿ ಕೂಡ ಅಲ್ಲ. ನಿಮ್ಮವರು ಯಾರದೋ ಮಾತು ಕೇಳಿ ನಮ್ಮನ್ನು ಎಳೆದುಕೊಂಡು ಬಂದಿದ್ದಾರೆ. ದೇವರಾಣೆಯಾಗಿ ನಾವು ಆ ಕೆಲಸ ಮಾಡಿಲ್ಲ. ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ’’
ಎಂದು ಕಣ್ಣೀರಿಟ್ಟು ದಯನೀಯವಾಗಿ ಕೇಳಿಕೊಂಡ. ಅಜ್ಜ ಅವನ ಮಾತಲ್ಲ, ಯಾರ ಮಾತೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ರಿವೆರೊ ಉದ್ದೇಶಿಸಿ, ‘‘ಆ ಕೊಲೆಗಾರ ಗಿಲ್ಬರ್ಟೊ ರೊಡ್ರಿಗಸ್‌ಗೆ ಫೋನ್ ಮಾಡು’’ ಎಂದು ಅಬ್ಬರಿಸಿದ. ನಡುಗುತ್ತ ಕಾಲಿ ಕಾರ್ಟೆಲ್ ಮುಖ್ಯಸ್ಥನಿಗೆ ಕರೆ ಮಾಡಿ, ಸ್ಯಾಟಲೈಟ್ ಫೋನ್ ತಂದು ಅಜ್ಜನ ಕೈಗಿಟ್ಟ ರಿವೆರೊ...
‘‘ಬಾಸ್ಟರ್ಡ್ ನೀನು ಸಾಕಿದ ನಾಯಿ ಕಾರ್ಲೋಸ್ ಈಗ ನನ್ನ ಕಾಲ ಕೆಳಗೆ ಬಿದ್ದಿದ್ದಾನೆ. ಅವನ ಜೊತೆ ಇನ್ನೂ ನಾಲ್ಕು ಕುನ್ನಿಗಳು ಕೂಡ ಇಲ್ಲಿ ಬಿದ್ದು ಒದ್ದಾಡುತ್ತಿವೆ. ಇದು ಅಂತ್ಯವಲ್ಲ. ಆರಂಭ. ನನ್ನ ಮಗಳನ್ನು ಕೊಂದವ ಈವತ್ತು ಚೂರು ಚೂರಾಗಿ ವ್ಹಿಲ ವ್ಹಿಲ ಒದ್ದಾಡ್ತಾ ಸಾಯ್ತಾನೆ. ಅದಕ್ಕೆ ಆದೇಶ ಕೊಟ್ಟ ನೀನು-ನಿನ್ನ ತಮ್ಮ ಇಬ್ಬರನ್ನೂ ನನ್ನ ಕೈಯಾರೆ ಕೊಂದ ಮೇಲೆ ಈ ಖಡ್ಗವನ್ನು ಕೆಳಗಿಡುತ್ತೇನೆ. ಯಾವುದೇ ಕಾರಣಕ್ಕೆ ಎದುರಾಳಿ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಕೈಹಾಕಬಾರದು. ಅವರ ಕೊಲೆ ಮಾಡಬಾರದು ಎಂಬ ಕಾರ್ಟೆಲ್ ಲೋಕದ ನಿಯಮ ನೀವು ಬೆಂಕಿಗೆ ತೂರಿದ್ದೀರಿ. ನೀವಿಬ್ಬರು ಮಾತ್ರವಲ್ಲ, ನಿಮ್ಮ ಇಡೀ ಕುಟುಂಬವನ್ನೇ ನಾನು ಸರ್ವ ನಾಶ ಮಾಡುತ್ತೇನೆ...’’
ಅಬ್ಬರಿಸಿ, ಬೊಬ್ಬಿರಿಯಲಾರಂಭಿಸಿದ. ಆ ಕಡೆಯಿಂದ...
‘‘ನಾನು ಹೇಳೋದನ್ನ ಕೇಳು. ನಿನ್ನ ಮಗಳು, ಅಳಿಯನ ಮೇಲಿನ ಶೂಟ್‌ಔಟ್‌ಗೂ ಕಾಲಿ ಕಾರ್ಟೆಲ್‌ಗೂ ಯಾವುದೇ ಸಂಬಂಧ ಇಲ್ಲ. ನನ್ನ ಮಗಳ ಮೇಲೆ ಆಣೆಯಿಟ್ಟು ಹೇಳುತ್ತಿದ್ದೇನೆ. ನನ್ನ ಮಾತು ಸ್ವಲ್ಪಕೇಳು. ತಾಳ್ಮೆ ಕಳೆದುಕೊಳ್ಳಬೇಡ. ನಾನೇ ಸ್ವತಃ ನಿನ್ನ ಮುಂದೆ ಬಂದು ಬೇಕಾದರೆ ಆಣೆ ಮಾಡುತ್ತೇನೆ. ಅವರನ್ನು ಬಿಟ್ಟು ಬಿಡು. ಬಿಡದಿದ್ದರೂ ಪರವಾಗಿಲ್ಲ. ಕೊಚ್ಚಿ ಕೊಲ್ಲಬೇಡ. ಅವರು ಆ ತಪ್ಪನ್ನು ಮಾಡಿಲ್ಲ. ಈವರೆಗೆ ನಮ್ಮಿಬ್ಬರ ನಡುವೆ ಸಾಕಷ್ಟು ನಡೆದಿದೆ. ಅದನ್ನು ಮರೆತು ಬಿಡೋಣ. ಬೇಕಿದ್ದರೆ ನಾಳೆಯೇ ಬಂದು ನಾವೆಲ್ಲ ನಿನ್ನ ಜೊತೆ ಕೂತು ಮಾತನಾಡುತ್ತೇವೆ’’
ಬಹಳ ತಾಳ್ಮೆ, ಸಮಾಧಾನದ ನುಡಿಗಳು ಕೇಳಿ ಬಂದವು. ಅಜ್ಜ ಯಾರ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
‘‘ಫೋನ್ ಹೀಗೆಯೇ ಲೈನ್‌ನಲ್ಲಿ ಇಡುತ್ತೇನೆ. ಆವತ್ತು ನೀನು ನನ್ನ ಮಗಳು, ಅಳಿಯನ ಚೀತ್ಕಾರ ಕೇಳಿಸಿಕೊಂಡಂತಿಲ್ಲ. ಈವತ್ತು ನಿನ್ನ ನಾಯಿಗಳನ್ನು ಕೊಚ್ಚಿ ಹಾಕುವಾಗ ಕೇಳಿ ಬರುವ ಅವುಗಳ ಚೀತ್ಕಾರ ಕೇಳು...’’
ಎಂದು ಸ್ಯಾಟಲೈಟ್ ಫೋನ್ ತಂದು ಡೈನಿಂಗ್ ಟೇಬಲ್ ಮೇಲಿಟ್ಟ. ಎದುರಿಗೆ ಹುಲ್ಲು ಹಾಸಿನ ಮೇಲೆ ಮಂಡಿಯೂರಿ ಕೂತಿದ್ದ ಕಾರ್ಲೋಸ್ ಕುತ್ತಿಗೆಯ ಮೇಲೆ ಖಡ್ಗದ ಮೊದಲ ಪೆಟ್ಟು ಬಿತ್ತು. ರುಂಡ ಅರ್ಧ ತುಂಡಾಗಿ ರಕ್ತ ಕಾರಂಜಿಯಂತೆ ನಾಲ್ಕೂ ದಿಕ್ಕಿನಲ್ಲಿ ಚಿಮ್ಮಿತು.
ಡೈನಿಂಗ್ ಟೇಬಲ್ ಬಳಿಯೇ ಪ್ರಮೀಳಾ ಕೈ ಹಿಡಿದು ನಿಂತಿದ್ದ ಸೋಫಿಯ ಮುಖ ಮೈ ಮೇಲೆಲ್ಲಾ ರಕ್ತ!
ಮಗು ಕಲ್ಲಾಗಿ ನಿಂತಿತು!
(ಪೂರ್ಣ ಪಾಠಕ್ಕಾಗಿ ‘ಘಾಂದ್ರುಕ್’ ಕಾದಂಬರಿ ಓದಬಹುದು)