×
Ad

ಜೀವ ಸಂರಕ್ಷಣೆಯ ದಿಕ್ಕು ತೋರುವ ಚಿಟ್ಟೆ ಜಾಡು

Update: 2023-06-22 18:57 IST

ಸ್ಟೆಲೆನ್‌ಬೋಶ್ ವಿಶ್ವವಿದ್ಯಾ ನಿಲಯದ ಸಂಶೋಧನೆಯೊಂದು, ಚಿಟ್ಟೆಗಳು ತಾವು ಸಂಚರಿಸುವ ನೆಲೆಯಲ್ಲಿ ಹೇಗೆ ಸಂವಹನ ನಡೆಸುತ್ತವೆ ಎಂಬುದರ ಕುರಿತ ಸಮೀಪದ ನೋಟವನ್ನು ನೀಡುತ್ತದೆ. ನೈಸರ್ಗಿಕ ಆವಾಸಸ್ಥಾನಗಳ ಬದಲಾವಣೆಗೆ ಕಾರಣವಾಗುವ ಮನುಷ್ಯ ಚಟುವಟಿಕೆಗಳಿಂದ ಚಿಟ್ಟೆಗಳನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದರ ತಿಳುವಳಿಕೆಯನ್ನೂ ಇದು ಕೊಡುತ್ತದೆ.

ಬೆಳೆಯುತ್ತಿರುವ ನಗರಗಳು, ಕೃಷಿ, ಅಭಿವೃದ್ಧಿ ಯೋಜನೆಗಳು ಹೀಗೆ ಹಲವಾರು ಕಾರಣಗಳಿಗಾಗಿ ಅರಣ್ಯನಾಶ ನಡೆಯುತ್ತಲೇ ಇದೆ. ನೆಲದ ನೈಸರ್ಗಿಕ ಸ್ವರೂಪ ಬದಲಾಗಿದೆ. ಅದರಲ್ಲೂ ಮುಖ್ಯವಾಗಿ ಅದೆಷ್ಟೋ ಜೀವ ಪ್ರಭೇದಗಳ ಆವಾಸಸ್ಥಾನಗಳೇ ಅತಿಕ್ರಮಣಕ್ಕೆ ಒಳಗಾಗಿ, ಪ್ರಕೃತಿಯ ಒಡಲೊಳಗೆ ಒಂದು ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿರುವುದು ಗೋಚರಿಸುತ್ತಿದೆ.

ಮಾನವ ಚಟುವಟಿಕೆಯಿಂದ ಆಗುವ ಈ ರೂಪಾಂತರ ಎಷ್ಟು ವೇಗವಾಗಿದೆಯೆಂದರೆ, ಸಂರಕ್ಷಣಾಕಾರರಿಗೆ ನಿರ್ದಿಷ್ಟ ಪ್ರದೇಶದ ಎಲ್ಲಾ ಜೀವಜಾತಿಗಳ ವಿವರವಾದ ಮಾಹಿತಿಯನ್ನು ಸಂಗ್ರಹಿಸಲೂ ಸಮಯವಾಗುವುದಿಲ್ಲ. ಅದು ಸಂರಕ್ಷಣೆಯ ಕ್ರಮಗಳನ್ನು ನಿಧಾನಗೊಳಿಸುತ್ತದೆ. ಇದೇ ವೇಳೆ, ಯಾವಾಗಲೂ ನೈಸರ್ಗಿಕ ಸ್ವರೂಪದ ಸಂರಕ್ಷಣೆ ಸಾಧ್ಯವಾಗುವುದಿಲ್ಲ ಮತ್ತು ಹಾಗೆ ಮಾಡುವುದು ಆರ್ಥಿಕ ದೃಷ್ಟಿಯಿಂದಲೂ ಆಗದ ವಿಚಾರ.

ಜೀವಜಾತಿಯ ಅಳಿವುಗಳನ್ನು ತಪ್ಪಿಸಲು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇತ್ತೀಚಿನ ಅಧ್ಯಯನ ವರದಿಗಳು ಹೇಳುವ ಪ್ರಕಾರ, ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ಪ್ರಾಂತದ ಹುಲ್ಲುಗಾವಲು ಪ್ರದೇಶದಲ್ಲಿನ ನಿಸರ್ಗಕ್ಕೆ ವ್ಯತಿರಿಕ್ತ ಬೆಳವಣಿಗೆಗಳು, ಬದಲಾವಣೆಗಳು ಚಿಟ್ಟೆಗಳ ಮೇಲೆ ಆಘಾತಕಾರಿ ಪರಿಣಾಮ ಬೀರಲಿವೆ.

ಇಂಥ ಹಲವು ಉದಾಹರಣೆಗಳನ್ನು ಕೊಡುವ ಪರಿಣಿತರು, ಆ ಮೂಲಕ ಎದುರಾಗಬಹುದಾದ ಆಪತ್ತಿನ ಬಗ್ಗೆ ಎಚ್ಚರಿಸುತ್ತಲೇ ಇರುತ್ತಾರೆ.

ಚಿಟ್ಟೆಗಳು ಆಕಾಶದಲ್ಲಿನ ಬೆರಗುಗಳ ಹಾಗೆ ಕಾಣಿಸುವುದುಂಟು. ಬೇಸಿಗೆಯ ದಿನಗಳಲ್ಲಿ ಹೂವಿನಿಂದ ಹೂವಿಗೆ ನಾಜೂಕಾಗಿ ಹಾರುತ್ತ ಮೋಡಿ ಮಾಡುತ್ತವೆ. ಆದರೆ ಅವು ನೋಡಲು ಮಾತ್ರ ಸುಂದರವಲ್ಲ. ಅವು ಪ್ರಮುಖ ಪರಾಗಸ್ಪರ್ಶಕಗಳಾಗಿವೆ ಮತ್ತು ನೈಸರ್ಗಿಕ ಆಹಾರ ಸರಪಳಿಗಳಲ್ಲಿ ಪ್ರಮುಖವಾಗಿವೆ. ವಿಜ್ಞಾನಿಗಳ ದೃಷ್ಟಿಯಲ್ಲಿ ಅವುಗಳಿಗೆ ಬಹಳ ಮಹತ್ವ. ಅವುಗಳ ಅಧ್ಯಯನದ ಮೂಲಕವೇ ಇತರ ಕೀಟ ಪ್ರಭೇದಗಳ ಕುರಿತ ಉತ್ತಮ ತಿಳುವಳಿಕೆ ಸಾಧ್ಯ.

ಸ್ಟೆಲೆನ್‌ಬೋಶ್ ವಿಶ್ವವಿದ್ಯಾನಿಲಯದ ಸಂಶೋಧನೆಯೊಂದು, ಚಿಟ್ಟೆಗಳು ತಾವು ಸಂಚರಿಸುವ ನೆಲೆಯಲ್ಲಿ ಹೇಗೆ ಸಂವಹನ ನಡೆಸುತ್ತವೆ ಎಂಬುದರ ಕುರಿತ ಸಮೀಪದ ನೋಟವನ್ನು ನೀಡುತ್ತದೆ. ನೈಸರ್ಗಿಕ ಆವಾಸಸ್ಥಾನಗಳ ಬದಲಾವಣೆಗೆ ಕಾರಣವಾಗುವ ಮನುಷ್ಯ ಚಟುವಟಿಕೆಗಳಿಂದ ಚಿಟ್ಟೆಗಳನ್ನು ಕಾಯ್ದುಕೊಳ್ಳುವುದು ಹೇಗೆ ಎಂಬುದರ ತಿಳುವಳಿಕೆಯನ್ನೂ ಇದು ಕೊಡುತ್ತದೆ.

ಹೂವಿನ ವೈವಿಧ್ಯತೆಯ ಜೊತೆಗೆ ವಿವಿಧ ರೀತಿಯ ಹುಲ್ಲುಗಾವಲುಗಳು ಚಿಟ್ಟೆಗಳಿಗೆ ಮುಖ್ಯವೆಂಬುದನ್ನು ಪರಿಣಿತರು ಕಂಡುಕೊಂಡಿದ್ದಾರೆ. ಸಂಪೂರ್ಣ ಹುಲ್ಲುಗಾವಲು ಪ್ರದೇಶಗಳನ್ನು ಸಂರಕ್ಷಿಸಲು ಸಾಧ್ಯವಾಗದಿದ್ದಾಗ, ವಿವಿಧ ಸಣ್ಣ ಹುಲ್ಲುಗಾವಲುಗಳನ್ನು ಸೃಷ್ಟಿಸುವುದು ಪರಿಸರ ರೂಪಾಂತರದ ವಿರುದ್ಧ ಚಿಟ್ಟೆಗಳು ಮತ್ತು ಇತರ ಕೀಟಗಳನ್ನು ರಕ್ಷಿಸಲು ನೆರವಾಗುತ್ತದೆ. ಆರ್ಥಿಕ ಲಾಭವನ್ನು ಸಾಧಿಸುತ್ತಲೇ, ಜೀವಪ್ರಭೇದದ ರಕ್ಷಣೆಗೆ ಇಂಥ ಮಾರ್ಗಗಳನ್ನು ಅನುಸರಿಸಬೇಕಾದ ತುರ್ತಿನ ಹೊತ್ತು ಇದು.

ಕ್ವಾಜುಲು-ನಟಾಲ್ ಪ್ರಾಂತದ ಹುಲ್ಲುಗಾವಲಿನಲ್ಲಿ ಚಿಟ್ಟೆಗಳ ಪಾಲಿನ ಆವಾಸ ಸ್ಥಾನ ಕಡಿಮೆಯಾಗುತ್ತಿರುವುದು ಸ್ಟೆಲೆನ್‌ಬೋಶ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಮುಖ್ಯ ಫೋಕಸ್ ಆಗಿದೆ. ಕ್ವಾಜುಲು-ನಟಾಲ್ ಪ್ರಾಂತದ ಮಿಸ್ಟ್ಬೆಲ್ಟ್ ಹುಲ್ಲುಗಾವಲುಗಳಂತಹ ಎತ್ತರದ ಆವಾಸಸ್ಥಾನಗಳಲ್ಲಿ ಅನೇಕ ಚಿಟ್ಟೆ ಪ್ರಭೇದಗಳು ಸಂಚರಿಸುತ್ತವೆ. ಈ ಪ್ರದೇಶವು ಪ್ರಪಂಚದ ಜೀವವೈವಿಧ್ಯದ ಪ್ರಮುಖ ನೆಲೆಗಳಲ್ಲಿ ಒಂದು. ಹಲವು ಬಗೆಯ ಅಪರೂಪದ ಚಿಟ್ಟೆಗಳು ಇಲ್ಲಿ ಹಾರಿಕೊಂಡಿರುವುದನ್ನು ಸಂಶೋಧಕರು ಗುರುತಿಸುತ್ತಾರೆ.

ಸಂಶೋಧನೆಯಲ್ಲಿ ಬಹಳಷ್ಟು ಜಾತಿಗಳ ಚಲನವಲನಗಳನ್ನು ದಾಖಲಿಸಲಾಗಿದೆ. ಇದರಿಂದ ಅವರು ಕಂಡುಕೊಂಡಿರುವ ಒಂದು ಮುಖ್ಯ ವಿಚಾರವೆಂದರೆ, ಮನುಷ್ಯ ಚಟುವಟಿಕೆಯಿಂದ ಆಗುವ ನೈಸರ್ಗಿಕ ರೂಪಾಂತರದ ಪರಿಣಾಮಗಳನ್ನು ಮೀರಿ ಬದುಕಲು ಚಿಟ್ಟೆಗಳಿಗೆ ಹುಲ್ಲುಗಾವಲು ಆವಾಸಸ್ಥಾನಗಳ ಅಗತ್ಯವಿದೆ ಎಂಬುದು. ಒಂದು ವಿಚಾರವೇನೆಂದರೆ, ಒಂದು ಅಥವಾ ಕೆಲವು ವಿಶಿಷ್ಟ ಹುಲ್ಲುಗಾವಲು ಪ್ರಕಾರಗಳನ್ನು ಸಂರಕ್ಷಿಸುವುದರಿಂದ ಎಲ್ಲಾ ಚಿಟ್ಟೆ ಜಾತಿಗಳನ್ನು ರಕ್ಷಿಸಲು ಸಾಧ್ಯವಿಲ್ಲ.

ಚಿಟ್ಟೆಗಳು ಹೆಚ್ಚು ಸಂಚಾರಿ ಕೀಟಗಳಾಗಿವೆ. ಅನೇಕ ಜಾತಿಗಳು ದಿನವಿಡೀ ತೀರಾ ಕಡಿಮೆ ಎತ್ತರದಲ್ಲಷ್ಟೇ ಹಾರುತ್ತಿರುತ್ತವೆ. ಕೆಲವು ನಿರ್ದಿಷ್ಟ ಚಿಟ್ಟೆಗಳು ಹೆಚ್ಚು ಸೂರ್ಯನ ಶಾಖ ಪಡೆಯಲು ಅಥವಾ ತಪ್ಪಿಸಲು ಎತ್ತರದ ಪ್ರದೇಶಗಳ ಮೇಲೆ ಮತ್ತು ಕೆಳಕ್ಕೆ ಚಲಿಸುತ್ತವೆ. ಹಾಗಾಗಿ ಅಂಥ ಚಿಟ್ಟೆಗಳಿಗೆ ದಿನವಿಡೀ ಅವುಗಳು ಸಂಚರಿಸಲು ಅನುಕೂಲವಾಗುವ ಹಾಗೆ ವಿವಿಧ ಎತ್ತರಗಳಲ್ಲಿ ಸೂಕ್ತ ಆವಾಸಸ್ಥಾನಗಳು ಸಿಗುವಂತಿರುವುದು ಮುಖ್ಯ.

ಚಿಟ್ಟೆಗಳ ಸಂಖ್ಯೆಯ ಮಟ್ಟ ವರ್ಷದಿಂದ ವರ್ಷಕ್ಕೆ ಹೆಚ್ಚು ಪ್ರಮಾಣದಲ್ಲಿ ವ್ಯತ್ಯಾಸಗೊಳ್ಳುತ್ತದೆ. ಆಹಾರ ಮತ್ತು ಸಂತಾನೋತ್ಪತ್ತಿ ಸಂಪನ್ಮೂಲಗಳು ವಿರಳವಾಗಿರುವ ಸಮಯದಲ್ಲಿ, ಸಂಪನ್ಮೂಲಗಳು ಹೆಚ್ಚು ಸಿಗುವಂಥ ಪ್ರದೇಶಗಳಲ್ಲಿ ಚಿಟ್ಟೆಗಳು ನೆಲೆ ಕಂಡುಕೊಂಡು ಅಲ್ಲಿಯೇ ಹಾರಾಡಿಕೊಂಡಿರುತ್ತವೆ. ಪ್ರಾಕೃತಿಕ ಆವಾಸ ಸ್ಥಾನಗಳು ಅಂಥ ಸಂಪನ್ಮೂಲಗಳನ್ನು ಹೆಚ್ಚಾಗಿ ಹೊಂದಿರುತ್ತವೆ. ಆದರೆ ಅಂಥ ಕಡೆ ಚಿಟ್ಟೆಗಳು ಹುಡುಕಿಕೊಂಡು ಹೋಗಿ ತಲುಪಬೇಕಿರುತ್ತದೆ.

ಚಿಟ್ಟೆಗಳ ವೈವಿಧ್ಯತೆ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿರುತ್ತದೆ. ಹಾಗಾಗಿಯೇ ಅವುಗಳ ಅಧ್ಯಯನ ಎಲ್ಲಾ ಕೀಟ ಪ್ರಕಾರಗಳ ರಕ್ಷಣೆಯ ನಿಟ್ಟಿನಲ್ಲಿ ಎಂಥ ಹುಲ್ಲುಗಾವಲುಗಳನ್ನು ಸಂರಕ್ಷಿಸಬೇಕು ಮತ್ತು ಪುನಃಸ್ಥಾಪಿಸಬೇಕು ಎಂಬುದನ್ನು ನಿರ್ಧರಿಸಲು ಪೂರಕ ಎಂದು ಅಭಿಪ್ರಾಯಪಡುತ್ತಾರೆ ಸಂಶೋಧಕರು.

 (ಆಧಾರ: theconversation.com)6

Similar News