×
Ad

ಬದರಿನಾಥದ ಪ್ರಾಕೃತಿಕ ಒಡಲಿಗೆ ಪೆಟ್ಟು ಕೊಟ್ಟೀತೆ ಮರುನಿರ್ಮಾಣದ ಆಡಂಬರ?

Update: 2023-06-22 18:59 IST

ಬದರಿನಾಥ ಹೊಂದಿರುವ ನೈಸರ್ಗಿಕ ಸೌಂದರ್ಯ ವಿಶಿಷ್ಟವಾದುದು. ಈಗ ಬದರಿನಾಥ ಧಾಮದ ಪುನರ್‌ನಿರ್ಮಾಣ ಕಾರ್ಯ ನಡೆಯುತ್ತಿರುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ. ಪರಿಸರವಾದಿ ಮತ್ತು ಸಮಾಜ ಸೇವಕ, 1970ರ ಚಿಪ್ಕೋ ಚಳವಳಿಯ ಪ್ರವರ್ತಕರಲ್ಲಿ ಒಬ್ಬರಾದ ಚಾಂದಿ ಪ್ರಸಾದ್ ಭಟ್ ಅವರು ನಿರ್ಮಾಣ ಕಾರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ಬದರಿನಾಥದ ಪ್ರಾಕೃತಿಕ ಸೊಬಗನ್ನು ಉಳಿಸುವ ಜವಾಬ್ದಾರಿ ಎಲ್ಲರದೂ ಆಗಿದೆ ಎಂದಿದ್ದಾರೆ.

ಬದರಿನಾಥ ಧಾಮ ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಅತೀಂದ್ರಿಯ ಸೌಂದರ್ಯದ ಸಮನ್ವಯವನ್ನು ಸಂಕೇತಿಸುವ ತಾಣ. ಅದರ ಪುನರ್‌ನಿರ್ಮಾಣಕ್ಕೀಗ ಕೆಲಸ ನಡೆಯುತ್ತಿದೆ. ದೇವಾಲಯದ ಕೆಳಭಾಗದಲ್ಲಿ ಬುಲ್ಡೋಜರ್‌ಗಳದ್ದೇ ಸದ್ದು. ಪಂಚ ಧಾರೆಗಳಲ್ಲಿ ಕೂರ್ಮಧಾರೆ ಮತ್ತು ಪ್ರಹ್ಲಾದ ಧಾರೆಗಳ ನೀರು ಕಣ್ಮರೆಯಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಈ ಅಭಿವೃದ್ಧಿ ಕೆಲಸಗಳ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಹಲವು ಆತಂಕಗಳು ಹುಟ್ಟುತ್ತಿವೆ.

ಕಳೆದ ಒಂಭತ್ತು ದಶಕಗಳಿಂದ ಈ ಪ್ರದೇಶದ ವಿಶಿಷ್ಟವಾದ ನೈಸರ್ಗಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ನಾನು ಅನುಭವಿಸಿದ್ದೇನೆ. ಇದನ್ನು ಬುದ್ಧಿಗೇಡಿತನದಿಂದ ಬದಲಿಸುತ್ತಿರುವುದು ಕೆಲ ದಿನಗಳಿಂದ ನನ್ನನ್ನು ಕಾಡುತ್ತಿದೆ.

ಬದರಿನಾಥ ಧಾಮದ ಪುನರ್‌ನಿರ್ಮಾಣ ಕೆಲಸಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯ ಪಾತ್ರ ಹೊಂದಿರುವ ಭಾಸ್ಕರ್ ಖುಲ್ಬೆ ಅವರನ್ನು ಕಳೆದ ಡಿಸೆಂಬರ್‌ನಲ್ಲಿ ಭೇಟಿ ಮಾಡುವ ಅವಕಾಶ ಸಿಕ್ಕಿತು. ತಜ್ಞರ ಅಭಿಪ್ರಾಯ ಪಡೆದು ನಿರ್ಮಾಣ ಕಾರ್ಯಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದೆ.

ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರಿಗೆ ನನ್ನ ಕಳವಳಗಳ ಕುರಿತು ಪತ್ರ ಬರೆದಿದ್ದೆ. ನಾನು ಬರೆದ ಪತ್ರ ಹೀಗಿತ್ತು:

‘‘ಬದರಿನಾಥದಲ್ಲಿ ಪುನರ್‌ನಿರ್ಮಾಣ ಕಾರ್ಯ ನಿಮ್ಮ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಭೌಗೋಳಿಕ ದೃಷ್ಟಿಕೋನದಿಂದ ಮತ್ತು ಆವರ್ತಕ ಹಿಮಕುಸಿತಗಳು, ಭೂಕಂಪಗಳು ಮತ್ತು ಅಲಕಾನಂದ ನದಿಯ ಸವೆತದಿಂದಾಗಿ ಬದರಿನಾಥ ಧಾಮ ಬಹಳ ಸೂಕ್ಷ್ಮವಾಗಿದೆ. ಅದು 1803, 1930, 1949, 1954, 1979, 2007, 2013, 2014ರಲ್ಲಿ ತೀವ್ರ ಅನಾಹುತಗಳನ್ನು ಕಂಡಿದೆ.

ಈ ಕಾರಣಗಳಿಗಾಗಿ, 1974ರಲ್ಲಿ, ಬದರಿನಾಥ ಧಾಮದ ನೋಟವನ್ನು ಬದಲಿಸಲು ಬಿರ್ಲಾ ಗ್ರೂಪ್‌ನ ಜೈ ಶ್ರೀ ಟ್ರಸ್ಟ್ ಮುಂದಾದಾಗ ಅದನ್ನು ವಿರೋಧಿಸಲಾಯಿತು. ಅಂದಿನ ಉತ್ತರ ಪ್ರದೇಶ ಸರಕಾರದಲ್ಲಿ ಹಣಕಾಸು ಮಂತ್ರಿಯಾಗಿದ್ದ ನಾರಾಯಣ ದತ್ ತಿವಾರಿ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಯಿತು. ವಿವಿಧ ಕ್ಷೇತ್ರಗಳ ತಜ್ಞರೂ ಇದ್ದ ಆ ಸಮಿತಿ ಬದರಿನಾಥದಲ್ಲಿನ ನಿರ್ಮಾಣ ಕಾರ್ಯವನ್ನು ನಿಷೇಧಿಸಿತ್ತು.

ಆರೋಗ್ಯ ಮತ್ತಿತರ ಕಾರಣಗಳಿಂದ ಕಳೆದ ನಾಲ್ಕೈದು ವರ್ಷಗಳಿಂದ ಬದರಿನಾಥ ಧಾಮಕ್ಕೆ ಭೇಟಿ ನೀಡಲು ನನಗೆ ಸಾಧ್ಯವಾಗಿಲ್ಲ. ಬದರಿನಾಥ ಯಾತ್ರೆ ಮುಗಿಸಿ ಮರಳಿದ ಮಾನಾ ಗ್ರಾಮದ ಕೆಲವು ಗೆಳೆಯರು ಮತ್ತು ಪರಿಚಯಸ್ಥರು ಪುನರ್‌ನಿರ್ಮಾಣ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಪಂಚಧಾರೆಗಳಲ್ಲಿ ಒಂದಾದ ಕೂರ್ಮಧಾರೆಯ ನೀರಿನ ಹರಿವನ್ನು ಬೇರೆಡೆ ತಿರುಗಿಸಲಾಗಿದೆ ಎಂದೂ ಹೇಳಲಾಗಿದೆ.

ಇದನ್ನು ಕೇಳಿ ನನಗೆ ತುಂಬಾ ನೋವಾಯಿತು. ಒಂದು ರೀತಿಯಲ್ಲಿ ಬದರಿನಾಥ ಧಾಮದ ಮೂಲ ಸ್ವರೂಪವನ್ನೇ ಬದಲಿಸಿದಂತಿದೆ.

ಸಾಂಪ್ರದಾಯಿಕ ಪ್ರಾಚೀನ ಬದರಿನಾಥ ಧಾಮವು ಸಿಂಗ ದ್ವಾರ, ಭೋಗ್ಮಂಡಿ, ಪಂಚಧಾರಾ (ಪ್ರಹ್ಲಾದ ಧಾರಾ, ಕೂರ್ಮಧಾರಾ, ಭೃಗುಧಾರಾ, ಊರ್ವಶಿ ಧಾರಾ, ಇಂದ್ರ ಧಾರಾ), ಪಂಚ ಶಿಲಾ (ಗರುಡ, ನರ, ನರಸಿಂಹ, ವರಾಹ ಮತ್ತು ಮಾರ್ಕಂಡೇಯ), ತಪ್ತ ಕುಂಡ, ನಾರದ ಕುಂಡ, ಸೂರ್ಯ ಕುಂಡ ಮತ್ತು ಬ್ರಹ್ಮ ಕಪಾಲಗಳನ್ನು ಒಳಗೊಂಡಿದೆ. ಅದರ ಸ್ವರೂಪದಲ್ಲಿನ ಯಾವುದೇ ರೀತಿಯ ಬದಲಾವಣೆ ಧಾಮದ ಮೂಲ ಸ್ವರೂಪದಲ್ಲಿನ ಬದಲಾವಣೆಯೇ ಆಗುತ್ತದೆ. ಇದು ಅದರ ಯೋಗಕ್ಷೇಮ, ಘನತೆ ಮತ್ತು ಪರಿಸರ ಸ್ಥಿರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪುನರ್‌ನಿರ್ಮಾಣ ಕಾರ್ಯಗಳು ಬದರಿನಾಥ ಧಾಮದ ಪ್ರಾಚೀನ ರೂಪ ಮತ್ತು ಮೇಲೆ ತಿಳಿಸಿದ ಸ್ಥಳಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಇದಲ್ಲದೆ, ಧಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆ, ನಿರ್ಮಾಣ ಇತ್ಯಾದಿಗಳ ಸರಿಯಾದ ಮೌಲ್ಯಮಾಪನವು ಧಾಮದ ಪರಿಸರ ಸ್ಥಿತಿಗೆ ಹೊಂದಿಕೆಯಾಗುತ್ತದೆ ಮತ್ತು ಅದರ ಮೂಲ ಸ್ವರೂಪದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ.’’

ಬದರಿನಾಥ ಕಣಿವೆ ‘U’ ಆಕಾರದಲ್ಲಿದ್ದು, ಐದು ಕಿಲೋಮೀಟರ್ ಉದ್ದ ಮತ್ತು ದೇವ ದರ್ಶನಿಯಿಂದ ಮಾನಾ ಗ್ರಾಮದವರೆಗೆ ಒಂದು ಕಿಲೋಮೀಟರ್ ಅಗಲದ ಹಿಮನದಿಯಿಂದ ರೂಪುಗೊಂಡಿದೆ. ಹಿಮನದಿ ತಂದುಹಾಕಿರುವ ರಾಶಿ ರಾಶಿ ಕಲ್ಲುಬಂಡೆಗಳು (ಹಿಮೋಧ್) ಬದರಿನಾಥ ಕಣಿವೆಯಲ್ಲಿವೆ ಎನ್ನುತ್ತಾರೆ ಭೂವಿಜ್ಞಾನಿ ಪ್ರೊ.ಎಂ.ಪಿ.ಎಸ್. ಬಿಶ್ಟ್.

ಅಲಕಾನಂದ ನದಿಯ ಎರಡೂ ದಡಗಳಲ್ಲಿರುವ ಈ ಶಿಲಾಖಂಡರಾಶಿಗಳ ಬಂಡೆಗಳು ನಿರಂತರವಾಗಿ ಒಡೆದುಕೊಳ್ಳುತ್ತಿರುತ್ತವೆ ಮತ್ತು ಕೆಳಗಿನ ಕಣಿವೆಯಲ್ಲಿ ಸಂಗ್ರಹವಾಗುತ್ತವೆ. ಅವುಗಳ ಮೇಲೆ ನರ ಪರ್ವತದ ತಪ್ಪಲಿನಲ್ಲಿ ಎರಡು ಸುಂದರವಾದ ಕಣ್ಣಿನ ಆಕಾರದ ಸರೋವರಗಳನ್ನು ರಚಿಸಲಾಗಿದೆ. ಇವುಗಳನ್ನು ಶೇಷನೇತ್ರ ಎನ್ನುತ್ತಾರೆ.

ಬದರಿನಾಥ ಕಣಿವೆಯ ಪ್ರಾರಂಭದಲ್ಲಿ ಕುಬೇರ ಭಂಡಾರ ಹಿಮನದಿಯಿಂದ ಹುಟ್ಟುವ ಕಾಂಚನ ಗಂಗಾ ಇದೆ. ಕಾಂಚನ ಗಂಗೆಯು ದೇವ ದರ್ಶನಿ ಮೊದಲು ಅಲಕಾನಂದದಲ್ಲಿ ಸೇರಿಕೊಳ್ಳುತ್ತದೆ. ಇದರ ನಂತರ, ನೀಲಕಂಠ ಪರ್ವತದಿಂದ ಹುಟ್ಟುವ ರಿಷಿ ಗಂಗಾ, ಬಮಾನಿ ಗ್ರಾಮದ ಬಳಿ ಸೇರುತ್ತದೆ.

ಸರಸ್ವತಿ ನದಿಯು ಮಾನಾ ಪಾಸ್‌ನಿಂದ ಹುಟ್ಟಿ ಅಲಕಾನಂದವನ್ನು ಮಾನಾ ಬಳಿಯ ಕೇಶವ ಪ್ರಯಾಗದಲ್ಲಿ ಸೇರುತ್ತದೆ, ಅನೇಕ ಸಣ್ಣ ಮತ್ತು ದೊಡ್ಡ ತೊರೆಗಳನ್ನು ಸೃಷ್ಟಿಸುತ್ತದೆ. ಅಲಕಾನಂದ ಸತೋಪಂಥ್ ಹಿಮನದಿ ಮತ್ತು ಭಗೀರಥ ಖಾರ್ಕ್ ಹಿಮನದಿ ಸಂಗಮವನ್ನು ಅಲಕಾಪುರಿ ದಂಡೆಯ ಹರಿವು ಎಂದು ಕರೆಯಲಾಗುತ್ತದೆ. ಈ ಸಣ್ಣ ಮತ್ತು ದೊಡ್ಡ ಹೊಳೆಗಳು ಕಾಲಕಾಲಕ್ಕೆ ತುಂಬಿಕೊಳ್ಳುವ ಮೂಲಕ ಉಂಟಾಗುವ ಪ್ರವಾಹ ಜೀವ ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗುತ್ತದೆ.

ನಾರಾಯಣ ಮತ್ತು ನರ ಪರ್ವತಗಳು ತುಳಸಿ, ಬ್ರಹ್ಮಕಮಲ ಮುಂತಾದ ಅನೇಕ ಕಾಡು ಹೂವುಗಳಿಂದ ಆವೃತವಾಗಿವೆ, ಜೊತೆಗೆ ಕೆಲವು ಜಾತಿಯ (ಸೇಮ್ರು ಮತ್ತು ಅಮೇಶ) ಪೊದೆಗಳಿಂದ ಆವೃತವಾಗಿವೆ. ಒಂದು ರೀತಿಯಲ್ಲಿ ಬದರಿನಾಥ ಪ್ರಕೃತಿ ಸೌಂದರ್ಯದ ಯಾತ್ರಾ ಸ್ಥಳವೂ ಹೌದು.

ನಾನು ಮೊದಲ ಬಾರಿಗೆ 1940ರಲ್ಲಿ ಏಳನೇ ವಯಸ್ಸಿನಲ್ಲಿ ಬದರಿನಾಥಕ್ಕೆ ಭೇಟಿ ನೀಡಿದ್ದೆ ಮತ್ತು ನಂತರ ಎಪ್ಪತ್ತರ ದಶಕದ ಆರಂಭದಿಂದ ಬಹುತೇಕ ಪ್ರತೀ ವರ್ಷ ಮತ್ತು ಈ ಪ್ರದೇಶದಲ್ಲಿ ಹಿಮಕುಸಿತ ಮತ್ತಿತರ ವಿಪತ್ತುಗಳು ಉಂಟಾದಾಗಲೂ ಅನೇಕ ಬಾರಿ ಹೋಗಿದ್ದೇನೆ.

ಈ ಎತ್ತರದ ಹಿಮಾಲಯ ಪ್ರದೇಶದ ಭೌಗೋಳಿಕ ಮತ್ತು ಭೂರೂಪ ಶಾಸ್ತ್ರದ ಸೂಕ್ಷ್ಮತೆ ಮತ್ತು ಹಿಂದಿನ ನೈಸರ್ಗಿಕ ಪ್ರಕೋಪಗಳನ್ನು ಗಮನದಲ್ಲಿಟ್ಟುಕೊಂಡು, ಬದರಿನಾಥ ಪ್ರದೇಶದಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವ ಮೊದಲು ವಿವರವಾದ ಭೂವೈಜ್ಞಾನಿಕ ಮತ್ತು ಪರಿಸರ ಮೌಲ್ಯಮಾಪನವನ್ನು ಮಾಡಬೇಕು ಎಂಬುದು ನನ್ನ ಅಭಿಪ್ರಾಯ.

ಇಲ್ಲಿನ ನಿರಂತರ ಹಿಮಕುಸಿತಗಳು, ಅದಕ್ಕೂ ಮುನ್ನ ಬರುವ ಹಿಮ ಬಿರುಗಾಳಿ ಮತ್ತು ನರ, ನಾರಾಯಣ, ನೀಲಕಂಠ ಪರ್ವತಗಳಿಂದ ಬರುವ ಹಿಮದಂಡೆಗಳನ್ನು ಅಧ್ಯಯನ ಮಾಡುವುದು ಅವಶ್ಯಕ. ಈ ಅಧ್ಯಯನವು ನರ, ನಾರಾಯಣ ಮತ್ತು ನೀಲಕಂಠ ಪರ್ವತಗಳ ಹಿಮನದಿಗಳ ಬಾಯಿಯ ಭೂ ಸ್ಥಿರತೆ, ಅಲಕಾನಂದದ ದಡದಲ್ಲಿನ ಬಂಡೆಗಳಲ್ಲಿ ಕಂಡುಬರುವ ನದಿ ಸವೆತದೊಂದಿಗೆ ಇದರ ಸಂಬಂಧ, ಮಣ್ಣಿನ ಭಾರ ಹೊರುವ ಸಾಮರ್ಥ್ಯ ಇತ್ಯಾದಿಗಳ ವಿವರವಾದ ಮೌಲ್ಯಮಾಪನವನ್ನು ಒಳಗೊಂಡಿರಬೇಕು.

ಇದಲ್ಲದೆ, ಬದರಿನಾಥ ಭಾರತದ ಸಾಂಸ್ಕೃತಿಕ ಪರಂಪರೆಯಾಗಿದೆ. ಇದರ ನೈಸರ್ಗಿಕ ಸೌಂದರ್ಯ ವಿಶಿಷ್ಟವಾಗಿದೆ. ನರ, ನಾರಾಯಣ ಮತ್ತು ನೀಲಕಂಠ ಪರ್ವತಗಳು ಮತ್ತು ಹಿಮನದಿಗಳು ಸುತ್ತಲೂ ಹರಡಿಕೊಂಡಿವೆ ಮತ್ತು ಬದರಿನಾಥ ಧಾಮದ ಸೌಂದರ್ಯದ ಭಾಗವಾಗಿವೆ. ಈ ಪ್ರಾಕೃತಿಕ ಸೊಬಗನ್ನು ಹಾಗೇ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪುನರ್‌ನಿರ್ಮಾಣ ಮತ್ತು ಸುಂದರೀಕರಣದ ಮೊದಲು, ಬದರಿನಾಥ ಪ್ರದೇಶದ ಬಗ್ಗೆ ಸಾಂಪ್ರದಾಯಿಕ ಜ್ಞಾನ ಹೊಂದಿರುವ ಜನರು, ತಜ್ಞರ ಅಭಿಪ್ರಾಯವನ್ನು ಪಡೆಯಬೇಕು. ಧಾಮದ ಮೂಲ ಸ್ವರೂಪವನ್ನು ಗೌರವಿಸುವ ಮೂಲಕ ನಿರ್ಮಾಣ ಕಾರ್ಯ ಪರಿಸರ ಸ್ನೇಹಿಯಾಗಲಿದೆ ಎಂದು ನಾನು ನಂಬುತ್ತೇನೆ.

 (ಕೃಪೆ: : thewire.in)

Similar News