×
Ad

ಹಲಸಿಗೆ ಮೌಲ್ಯವರ್ಧನೆ, ಸೂಕ್ತ ಮಾರುಕಟ್ಟೆ ಅವಕಾಶ ಕಲ್ಪಿಸಬೇಕು: ಶಾಸಕ ಯಶ್ಪಾಲ್ ಸುವರ್ಣ

ಉಡುಪಿಯಲ್ಲಿ ಹಲಸು ಮೇಳ ಉದ್ಘಾಟನೆ

Update: 2023-06-22 21:05 IST

ಉಡುಪಿ: ಹಲಸಿನ ಮೌಲ್ಯವರ್ಧನೆ ಹಾಗೂ ರೈತ ಭಾಂಧವರಿಗೆ ಸೂಕ್ತ ಮಾರುಕಟ್ಟೆಯನ್ನು ಒದಗಿಸುವ ಉದ್ದೇಶ ದಿಂದ ಹಲಸಿನ ಮೇಳಗಳನ್ನ ಅಯೋಜಿಸಲಾಗುತ್ತಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆಯ ಬೇಕು ಎಂದು ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ. 

ಗುರುವಾರ ಉಡುಪಿ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ (ರೈತ ಸೇವಾ ಕೇಂದ್ರ) ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ರೋಬೋಸಾಫ್ಟ್ ಟೆಕ್ನೋಲಾಜಿಸ್ ಇವರ ಸಂಯುಕ್ತ ಆಶ್ರಯದಲ್ಲಿ ರೋಬೋಸಾಫ್ಟ್ ಟೆಕ್ನೋಲಾಜಿಸ್ ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ ನಿರ್ಮಿಸಿದ ರೈತ ಸೇವಾ ಕೇಂದ್ರದ ಆವರಣದ ಮೇಲ್ಛಾವಣಿಯ ಲೋಕಾರ್ಪಣೆ ಹಾಗೂ ಹಲಸು ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಪೌಷ್ಠಿಕ ಆಹಾರಗಳಲ್ಲಿ ಒಂದಾದ ಹಲಸು ಹೇರಳವಾಗಿ ಉತ್ಪಾದನೆ ಯಾಗುತ್ತದೆ. ಇದಕ್ಕೆ ಹೆಚ್ಚಿನ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಯನ್ನು ಒದಗಿಸುವುದರಿಂದ ರೈತರು ಹೆಚ್ಚಿನ ಲಾಭ ಪಡೆಯುವುದರೊಂದಿಗೆ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ ಹಲಸಿನಿಂದ ವಿವಿಧ ರೀತಿಯ ಖಾದ್ಯ ಉತ್ಪನ್ನಗಳನ್ನು ತಯಾರಿಸಿ ದೇಶ- ವಿದೇಶಗಳಿಗೆ ರಫ್ತು ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಲು ರೈತರು ಮುಂದಾಗಬೇಕು ಎಂದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಹಲಸಿನ ಮೇಳದಲ್ಲಿ ವಿವಿಧ ಬಗೆಯ ಹಲಸು ಲಭ್ಯವಿದ್ದು, ಇದನ್ನು ಜನರು ಸವಿಯಲು ಅನುಕೂಲ ಮಾಡಿರುವುದರ ಜೊತೆಗೆ ರೈತರಿಗೆ ಮಾರುಕಟ್ಟೆ ಸೌಲಭ್ಯವನ್ನೂ ಕಲ್ಪಿಸಲಾಗಿದೆ ಎಂದರು.

ರೋಬೋಸಾಫ್ಟ್ ಟೆಕ್ನೋಲಾಜಿಸ್ ವತಿಯಿಂದ ಸಾಮಾಜಿಕ ಹೊಣೆಗಾರಿಕೆ ನಿಧಿಯಿಂದ ೪೮.೫ ಲಕ್ಷ ರೂ ವೆಚ್ಚ ದಲ್ಲಿ ರೈತ ಸೇವಾ ಕೇಂದ್ರದ ಮೇಲ್ಛಾವಣಿ ನಿರ್ಮಿಸಿರುವುದು ರೈತರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ವಾಗುವ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ರೋಬೋಸಾಫ್ಟ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರವಿತೇಜ ಬೊಮ್ಮಿರೆಡ್ಡಿ ಪಲ್ಲಿ ಮಾತನಾಡಿ, ನಮ್ಮ ಕಂಪೆನಿಯ ಮುಖ್ಯ ಕಚೇರಿಯು ಈ ಜಿಲ್ಲೆಯಲ್ಲಿದ್ದು, ಇಲ್ಲಿನ ಅಭಿವೃಧ್ದಿ ಸೇರಿದಂತೆ ಜನಹಿತ ಕಾರ್ಯವನ್ನು ಮಾಡಲು ಕೈ ಜೋಡಿಸಲಿದ್ದೇವೆ ಎಂದರು.

ಜಿಲ್ಲಾ ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್, ರೋಬೋಸಾಫ್ಟ್ ಕಂಪೆನಿಯ  ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮತ್ತಿತರರು ಉಪಸ್ಥಿತರಿದ್ದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ ಸ್ವಾಗತಿಸಿ, ಅಶೋಕ್ ಕಾಮತ್ ನಿರೂಪಿಸಿದರು. ರೋಬೋಸಾಫ್ಟ್ ಕಂಪೆನಿಯ ಹಣಕಾಸು ವಿಭಾಗದ ನಾಗೇಶ್ ದೊಂಡಿಯ ವಂದಿಸಿದರು.

Similar News