×
Ad

ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ರೋಗಿಗಳ ಸಾವು: ಕಾರಣ ಉಷ್ಣ ಮಾರುತವಲ್ಲ, ವಿದ್ಯುತ್ ಕಡಿತ!

Update: 2023-06-22 21:41 IST

ಲಕ್ನೋ: ಕಳೆದ ವಾರ ಬಲ್ಲಿಯದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೃತಪಟ್ಟಿರುವುದಕ್ಕೆ ವಿದ್ಯುತ್ ಕಡಿತ ಮುಖ್ಯ ಕಾರಣವಾಗಿದೆ ಎಂದು ಉತ್ತರಪ್ರದೇಶದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಪಿಟಿಐ ಬುಧವಾರ ವರದಿ ಮಾಡಿದೆ. ವಿದ್ಯುತ್ ಕಡಿತಗಳಿಂದಾಗಿ ರೋಗಿಗಳ ಆರೋಗ್ಯ ಪರಿಸ್ಥಿತಿ ಹದಗೆಟ್ಟಿತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘‘ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಗೆ ಅಡಚಣೆಯುಂಟಾಗಿತ್ತು’’ ಎಂದು ಎ.ಕೆ. ಸಿಂಗ್ ತಿಳಿಸಿದರು. ಸಿಂಗ್, ಸಾವುಗಳ ಕಾರಣ ಪತ್ತೆಹಚ್ಚಲು ರಾಜ್ಯ ಸರಕಾರವು ಜಿಲ್ಲೆಗೆ ಕಳುಹಿಸಿದ ಸಮಿತಿಯ ಓರ್ವ ಸದಸ್ಯರಾಗಿದ್ದಾರೆ. ‘‘ಟ್ರಾನ್ಸ್‌ಫಾರ್ಮರ್ ಸುಟ್ಟುಹೋಗಿವೆ. ವಿದ್ಯುತ್ ಅಲಭ್ಯತೆ ಮತ್ತು ಇತರ ಕಾರಣಗಳಿಂದಾಗಿ ಜನರ ಪರಿಸ್ಥಿತಿ ಹದಗೆಟ್ಟಿತು’’ ಎಂದು ಅವರು ನುಡಿದರು.

ರೋಗಿಗಳಿಗೆ ಜಿಲ್ಲಾಆಸ್ಪತ್ರೆ ತಲುಪಲು 5-6 ಗಂಟೆಗಳು ಬೇಕಾಯಿತು. ಹಾಗಾಗಿ, ಆಸ್ಪತ್ರೆಗೆ ದಾಖಲಾದ ಒಂದು ಗಂಟೆಯಲ್ಲಿ ಅವರು ಮೃತಪಟ್ಟರು ಎಂದು ಸಿಂಗ್ ಹೇಳಿದರು.

ಉತ್ತರಪ್ರದೇಶದ ಹಲವು ಭಾಗಗಳಲ್ಲಿ ಉಷ್ಣಮಾರುತ ಬೀಸಿದ್ದು, ಜೂನ್ 15ರ ಬಳಿಕ ಬಲ್ಲಿಯ ಜಿಲ್ಲಾ ಆಸ್ಪತ್ರೆಯಲ್ಲಿ 76 ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ ರಾಜ್ಯಾದ್ಯಂತ ಪದೇ ಪದೇ ವಿದ್ಯುತ್ ಕಡಿತಗಳೂ ಸಂಭವಿಸಿದ್ದು, ಪರಿಸ್ಥಿತಿಯನ್ನು ಬಿಗಡಾಯಿಸಿದೆ.

ಆದರೆ, ಬಲ್ಲಿಯದಲ್ಲಿನ ಸಾವುಗಳಿಗೆ ತೀವ್ರ ಸೆಖೆ ಕಾರಣ ಎನ್ನುವುದಕ್ಕೆ ಪುರಾವೆಯಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಉಷ್ಣಮಾರುತದಿಂದಾಗಿ ಕೇವಲ ಎರಡು ಸಾವುಗಳು ಸಂಭವಿಸಿವೆ ಎಂದು ನಗರದ ಮುಖ್ಯ ವೈದ್ಯಾಧಿಕಾರಿ ಜಯಂತ್ ಕುಮಾರ್ ಹೇಳಿದ್ದಾರೆ.

ಸಾವುಗಳಿಗೆ ಉಷ್ಣಮಾರುತ ಕಾರಣ ಎಂಬ ಹೇಳಿಕೆ ನೀಡಿರುವುದಕ್ಕಾಗಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಸೂಪರಿಂಟೆಂಡೆಂಟ್ ದಿವಾಕರ್ ಸಿಂಗ್ ರನ್ನು ವರ್ಗಾಯಿಸಲಾಗಿತ್ತು.

Similar News