×
Ad

ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಆಕ್ರಮಣ: ಜಾಗತಿಕ ಪತ್ರಕರ್ತರ ಸಂಘಟನೆಗಳಿಂದ ಜಂಟಿ ಹೇಳಿಕೆ

Update: 2023-06-22 21:59 IST

ಹೊಸದಿಲ್ಲಿ: ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ಆಕ್ರಮಣ ನಡೆಯುತ್ತಿದೆ ಎಂದು 8 ಜಾಗತಿಕ ಪತ್ರಕರ್ತರ ಸಂಘಟನೆಗಳು ಬುಧವಾರ ಹೇಳಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಸಭೆಗೆ ಮುನ್ನ ‘ದ ವಾಶಿಂಗ್ಟನ್ ಪೋಸ್ಟ್’ನಲ್ಲಿ ನೀಡಿರುವ ಜಾಹೀರಾತೊಂದರಲ್ಲಿ ಅವುಗಳು ಈ ಆರೋಪ ಮಾಡಿವೆ.

ಭಾರತದಲ್ಲಿ ಪತ್ರಕರ್ತರು ದೈಹಿಕ ಆಕ್ರಮಣ, ಕಿರುಕುಳ, ಸುಳ್ಳು ಮೊಕದ್ದಮೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷ ಅಭಿಯಾನಗಳನ್ನು ಎದುರಿಸುತ್ತಿದ್ದಾರೆ ಎಂದು ಅವುಗಳು ಹೇಳಿವೆ.

‘‘ಭಾರತದಲ್ಲಿ ಪತ್ರಕರ್ತರು ಎದುರಿಸುತ್ತಿರುವ ಬೆದರಿಕೆಗಳನ್ನು ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಆ ದೇಶದಲ್ಲಿ ಅಧಿಕಾರದಲ್ಲಿರುವವರನ್ನು ಜಗತ್ತಿನಾದ್ಯಂತವಿರುವ ಪ್ರಜಾಪ್ರಭುತ್ವಕ್ಕೆ ಮನ್ನಣೆ ನೀಡುವ ನಾಯಕರು ಒತ್ತಾಯಿಸಬೇಕು’’ ಎಂದು ಜಾಹೀರಾತು ಮನವಿ ಮಾಡಿದೆ.

ಆಸಿಫ್ ಸುಲ್ತಾನ್, ಸಾಜಿದ್ ಗುಲ್, ಫಹಾದ್ ಶಾ, ಇರ್ಫಾನ್ ಮೆಹ್ರಾಜ್, ಗೌತಮ್ ನವ್ಲಾಖ ಮತ್ತು ರೂಪೇಶ್ ಕುಮಾರ್ ಸಿಂಗ್ ಮುಂತಾದ ಪತ್ರಕರ್ತರ ಬಂಧನಗಳನ್ನು ಅದು ಉಲ್ಲೇಖಿಸಿದೆ. ಜಾಹೀರಾತು ನೀಡಿರುವ ಪತ್ರಕರ್ತರ ಸಂಘಟನೆಗಳಲ್ಲಿ ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್, ದ ವಾಶಿಂಗ್ಟನ್ ಪೋಸ್ಟ್ ಪ್ರೆಸ್ ಫ್ರೀಡಮ್ ಪಾರ್ಟ್ನರ್ಶಿಪ್, ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್, ಇಂಟರ್ನ್ಯಾಶನಲ್ ಪ್ರೆಸ್ ಇನ್‌ಸ್ಟಿಟ್ಯೂಟ್ ಮತ್ತು ಜೇಮ್ಸ್ ಡಬ್ಲು ಫಾಲಿ ಲೆಗಲಿ ಫೌಂಡೇಶನ್ ಸೇರಿವೆ. ಪ್ರಧಾನಿ ನರೇಂದ್ರ ಮೋದಿ ಮೂರು ದಿನಗಳ ಪ್ರವಾಸಕ್ಕಾಗಿ ಜೂನ್ 21ರಂದು ಅಮೆರಿಕ ತಲುಪಿದ್ದಾರೆ.

ಪತ್ರಿಕೆಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ಮತ್ತು ‘‘ತಾವು ಮಾಡಬೇಕಾದ ಕೆಲಸವನ್ನು ಮಾಡಿರುವುದಕ್ಕೆ’’ ಪ್ರತೀಕಾರವಾಗಿ ಸ್ವೇಚ್ಛಾಚಾರದಿಂದ ಬಂಧಿಸಲ್ಪಟ್ಟಿರುವ ಈ ಆರು ಪತ್ರಕರ್ತರನ್ನು ಬಿಡುಗಡೆ ಮಾಡಬೇಕೆಂದು ಭಾರತವನ್ನು ಒತ್ತಾಯಿಸುವಂತೆ ಬೈಡನ್ ಆಡಳಿತಕ್ಕೆ ‘ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ಸ್’ ಕರೆ ನೀಡಿದೆ.

ದೇಶಿ ಮತ್ತು ವಿದೇಶಿ ಎರಡೂ ಸ್ವತಂತ್ರ ಮಾಧ್ಯಮ ಸಂಸ್ಥೆಗಳು ನಿಯಮಿತ ದಾಳಿಗಳು ಮತ್ತು ಪ್ರತೀಕಾರ ಸ್ವರೂಪದ ಆದಾಯ ತೆರಿಗೆ ತನಿಖೆಗಳ ರೂಪದಲ್ಲಿ ಬಿಜೆಪಿ ಸರಕಾರದಿಂದ ಕಿರುಕುಳ ಎದುರಿಸುತ್ತಿವೆ ಎಂದು ಪತ್ರಕರ್ತರ ಸಂಘಟನೆಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ.

2014ರಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಂದಿನಿಂದ ಭಾರತದಲ್ಲಿ ಮಾಧ್ಯಮಗಳ ಮೇಲಿನ ದಾಳಿ ಹೆಚ್ಚಿದೆ ಎಂದು ಅವು ಹೇಳಿವೆ.

‘‘ಸರಕಾರ ಮತ್ತು ಬಿಜೆಪಿ ಪಕ್ಷವನ್ನು ಟೀಕಿಸುವ ಪತ್ರಕರ್ತರನ್ನು ಜೈಲಿಗೆ ತಳ್ಳಲಾಗುತ್ತಿದೆ ಮತ್ತು ಅವರಿಗೆ ಕಿರುಕುಳ ಕೊಡಲಾಗುತ್ತಿದೆ. ತಮ್ಮ ಕರ್ತವ್ಯದ ಭಾಗವಾಗಿ ಅವರು ಮಾಡುವ ಕೆಲಸಕ್ಕೆ ಪ್ರತೀಕಾರವಾಗಿ ಅವರ ಮೇಲೆ ನಿಗಾ ಇಡಲಾಗುತ್ತದೆ. ಭಾರತವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿದೆ. ಮುಕ್ತ ಮತ್ತು ಸ್ವತಂತ್ರ ಮಾಧ್ಯಮಕ್ಕೆ ಅವಕಾಶ ಕಲ್ಪಿಸುವ ಮೂಲಕ ಅದು ತನ್ನ ಹೆಗ್ಗಳಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ’’ ಎಂದು ಈ ಸಂಘಟನೆಗಳು ಹೇಳಿವೆ.

Similar News