×
Ad

ಬಾಗಲಕೋಟೆ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ಕ್ರಿಕೆಟಿಗ ರಿಷಬ್ ಪಂತ್ ಆರ್ಥಿಕ ನೆರವು

Update: 2025-08-06 13:06 IST

 ವಿದ್ಯಾರ್ಥಿನಿ ಜ್ಯೋತಿ ಕಣಬೂರ್/ರಿಷಭ್‌ ಪಂತ್‌(@RishabhPant17)

ಬಾಗಲಕೋಟೆ : ಬಾಗಲಕೋಟೆಯ ವಿದ್ಯಾರ್ಥಿನಿಗೆ ಭಾರತೀಯ ಸ್ಟಾರ್‌ ಕ್ರಿಕೆಟಿಗ ರಿಷಭ್ ಪಂತ್ ನೆರವಿನ ಹಸ್ತ ಚಾಚಿದ್ದಾರೆ. ಬಿಸಿಎ ತರಗತಿ ಪ್ರವೇಶಕ್ಕೆ ಅವಶ್ಯಕವಿದ್ದ 40 ಸಾವಿರ ಹಣವನ್ನು ವಿದ್ಯಾರ್ಥಿನಿ ಜ್ಯೋತಿ ಕಣಬೂರ್ ಅವರಿಗೆ ರಿಷಭ್​ ಪಂತ್​ ನೀಡಿದ್ದಾರೆ.

ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರ ಪಿಯುಸಿಯಲ್ಲಿ ಶೇ.83 ಅಂಕ ಗಳಿಸಿದ್ದರು. ಉನ್ನತ ಶಿಕ್ಷಣ ಪಡೆಯಬೇಕು ಎಂದು ಕನಸು ಕಂಡಿದ್ದ ಜ್ಯೋತಿಗೆ ಬಡತನ ಹಾಗೂ ಆರ್ಥಿಕ ತೊಂದರೆ ಕಾಡತೊಡಗಿತ್ತು. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಿದ್ದರು.

ಈ ಸಂದರ್ಭದಲ್ಲಿ ಕುಟುಂಬವು ಗ್ರಾಮದವರಾದ ಗುತ್ತಿಗೆದಾರ ಅನಿಲ ಹುಣಶಿಕಟ್ಟಿ ಅವರನ್ನು ಜಮಖಂಡಿ ಬಿಎಲ್‌ಡಿಇ ಸಂಸ್ಥೆಯ ಕಾಲೇಜಿನಲ್ಲಿ ಬಿಸಿಎಗೆ ಸೀಟ್ ಕೊಡಿಸುವಂತೆ ಕೋರಿಕೊಂಡಿದ್ದರು. ಸೀಟ್ ಕೊಡಿಸುವ ಜತೆಗೆ ಆರ್ಥಿಕ ನೆರವು ಒದಗಿಸುವುದಕ್ಕೂ ಪ್ರಯತ್ನಿಸುವ ಭರವಸೆಯನ್ನು ಅನಿಲ್‌ ನೀಡಿದ್ದರು.

ಅನಿಲ್ ಹುಣಶಿಕಟ್ಟಿ, ಬೆಂಗಳೂರು ಹಾಗೂ ಮುಂಬೈನಲ್ಲಿ ರಿಷಭ್ ಪಂತ್ ಅವರ ಡಿಜಿಟಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಸ್ನೇಹಿತ ಅಕ್ಷಯ್ ನಾಯಕ್ ಎಂಬುವರಿಗೆ ಈ ಸಂಬಂಧ ಮಾಹಿತಿ ನೀಡಿದ್ದಾರೆ. ಅಕ್ಷಯ್ ಕೂಡಲೇ ರಿಷಭ್​ ಪಂತ್​​​ಗೆ ವಿಷಯ ತಿಳಿಸಿದ್ದಾರೆ. ಈ ವಿಷಯ ರಿಷಬ್ ಅವರ ಗಮನಕ್ಕೆ ತಂದಾಗ ಕೂಡಲೇ ನೆರವಿಗೆ ಬಂದಿರುವ ಅವರು, ಜು.17ರಂದು ಕಾಲೇಜಿನ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿದ್ದಾರೆ.

ವಿದ್ಯಾರ್ಥಿನಿ ಜ್ಯೋತಿಯ ಮೊದಲ ಸೆಮಿಸ್ಟರ್‌ನ 40 ಸಾವಿರ ರೂ.ಗಳ ಶುಲ್ಕವನ್ನು ಪಂತ್ ಭರಿಸಿದ್ದಾರೆ. ಗ್ರಾಮದ ವಿದ್ಯಾರ್ಥಿನಿಗೆ ಯಾವುದೇ ಅಪೇಕ್ಷೆ ಇಲ್ಲದೆ, ಪಂತ್ ನೆರವಾಗುವುದರ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News