ಕೈ ತಪ್ಪಿದ ಬಾಗಲಕೋಟೆ ಟಿಕೆಟ್; ಪಕ್ಷ ಬಿಡಲ್ಲ, ಹುದ್ದೆ ಬಿಡುತ್ತೇನೆ ಎಂದ ವೀಣಾ ಕಾಶಪ್ಪನವರ್

Update: 2024-03-29 10:03 GMT

ಬಾಗಲಕೋಟೆ : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಂಯುಕ್ತಾ ಪಾಟೀಲ ಅವರ ಹೆಸರು ಘೋಷಣೆಯಾದ ಬಳಿಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳು ತಲೆ ಎತ್ತಿರುವ ಬಗ್ಗೆ ವರದಿಯಾಗಿದೆ.

ಸಂಯುಕ್ತಾ ಪಾಟೀಲ ಅಭ್ಯರ್ಥಿಯಾದ ಬಳಿಕ, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೀಣಾ ಕಾಶಪ್ಪನವರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಡಿಸಿಎಂ ನೇತೃತ್ವದ ಸಭೆಯಲ್ಲಿ ಸಂಧಾನವೂ ವಿಫಲವಾಗಿದೆ ಎನ್ನಲಾಗಿದೆ. ಇದೀಗ ವೀಣಾ ಕಾಶಪ್ಪನವರ್ ತಟಸ್ಥರಾಗಿ ಉಳಿಯಬೇಕು ಎಂದು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವೀಣಾ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋತರೂ, ಧೃತಿಗೆಡದೆ ಮತ್ತೆ ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡುತ್ತ, ತಮ್ಮದೇ ಆದ ಛಾಪು ಮೂಡಿಸಿದ್ದರು. ಆದರೆ ಕೊನೆಯ ಘಳಿಗೆಯಲ್ಲಿ ಹೈಕಮಾಂಡ್ ಸಂಯುಕ್ತಾ ಪಾಟೀಲ ಅವರೆಡೆಗೆ ಒಲವು ತೋರಿದ್ದರಿಂದ, ವೀಣಾ ಅವರ ಟಿಕೆಟ್ ಕೈ ತಪ್ಪಿದೆ. ಗುರುವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆಯಲ್ಲಿ, ಟಿಕೆಟ್ ಬದಲಾವಣೆ ಮಾಡಲು ಸಾಧ್ಯವಿಲ್ಲ. ಪಕ್ಷವು ಕ್ಷೇತ್ರದಲ್ಲಿ ಹೆಚ್ಚಿನ ಮತಗಳ ಅಂತರದಲ್ಲಿ ಗೆಲುವು ಸಾಧಿಸುವಂತೆ ಶ್ರಮ ವಹಿಸಿ, ಮುಂದೆ ಏನಾದರೂ ಮಾಡೋಣವೆಂದು ಹೇಳಿದ್ದಾಗಿ ತಿಳಿದು ಬಂದಿದೆ.

ತನಗಿಂತ ಸಂಯುಕ್ತಾ ಪಾಟೀಲ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಿದ್ದಾರೆ ಎಂದು ಮುಖಂಡರು ಹೇಳಿರುವುದು ವೀಣಾ ಮನಸ್ಸಿಗೆ ನೋವಾಗಿದೆ. ಐದು ವರ್ಷದಿಂದ ಕೆಲಸ ಮಾಡಿದರೂ, ಈಗ ತಾನೆ ಬಂದಿರುವ ಸಂಯುಕ್ತಾರನ್ನು ಎಲ್ಲರೂ ಬೆಂಬಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಮಾಡಿದರೆ ಸೂಕ್ತ ಸ್ಥಾನ ಮಾನ ಸಿಗಲ್ಲ. ನಾನೇಕೆ ಈಗ ಚುನಾವಣೆಗೆ ಕೆಲಸ ಮಾಡಬೇಕು. ನನಗೆ ಅನ್ಯಾಯವಾಗಿದೆ, ತಟಸ್ಥವಾಗಿ ಉಳಿಯುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಬಿಜೆಪಿಯಲ್ಲಿ ಆಹ್ವಾನ ಬಂದಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿನ ನಿಷ್ಠೆ ಹಾಗೂ ಇಲ್ಲಿಯೇ ಟಿಕೆಟ್ ಸಿಗಲಿದೆ ಎಂಬ ಕಾರಣದಿಂದಾಗಿ ವೀಣಾ ಕಾಶಪ್ಪನವರ ನಿರಾಕರಿಸಿದದ್ದರು ಎನ್ನಲಾಗಿದೆ. ಈಗ ಕಾಂಗ್ರೆಸ್ ಪಕ್ಷದಿಂದಲೇ ಅನ್ಯಾಯವಾಗಿರುವುದರಿಂದ ಪಕ್ಷದ ರಾಜ್ಯ ಮಹಿಳಾ ಘಟಕ ಉಪಾಧ್ಯಕ್ಷೆ ಸ್ಥಾನ ಸೇರಿದಂತೆ, ಪಕ್ಷದ ಇತರ ಹುದ್ದೆಗಳಿಗೆ ರಾಜಿನಾಮೆ ನೀಡಿ, ತಟಸ್ಥವಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿರುವ ಪತಿ ವಿಜಯಾನಂದ ಕಾಶಪ್ಪನವರ ಅವರಿಗೆ ಲಿಂಗಾಯತ ಅಭಿವೃದ್ಧಿ ನಿಗಮ ನೀಡಿದ್ದಾರೆ. ಹೀಗಾಗಿ ಪತಿಗೆ ವಿರೋಧ ಮಾಡಿ, ಪಕ್ಷೇತರ ನಿಲ್ಲಲ್ಲು ಸಾಧ್ಯವಿಲ್ಲ. ರಾಜ್ಯ ಮಟ್ಟದ ಮಹಿಳಾ ಘಟಕದ ಅಧ್ಯಕ್ಷರಾಗುವಂತೆ ಪಕ್ಷದಿಂದ ವೀಣಾಗೆ ಆಹ್ವಾನ ಬಂದಿದೆ. ಆದರೆ ಈ ಬಗ್ಗೆ ವೀಣಾ ಕಾಶಪ್ಪನವರ್ ಒಲವು ತೋರಿಸಿಲ್ಲ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದರಿಂದ ಅಧಿಕಾರ ಸಿಗುವ ಖಚಿತತೆಯಿತ್ತು. ಆದರೆ ಕೊನೆಯ ಘಳಿಗೆಯಲ್ಲಿ ಅನ್ಯಾಯವಾಗಿದೆ. ಪಕ್ಷ ನಡೆಸಿಕೊಂಡ ರೀತಿಗೆ ಬೇಸರಗೊಂಡ ವೀಣಾ ಕಾಶಪ್ಪನವರ ತಟಸ್ಥರಾಗಿ ಉಳಿಯಲು ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News