×
Ad

ಭಯೋತ್ಪಾದನೆಯ ಮೂಲೋಚ್ಚಾಟನೆಯಾಗಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2025-04-30 21:39 IST

ಬಾಗಲಕೋಟೆ : ಪಾಕಿಸ್ತಾನದ ಮೇಲೆ ಯುದ್ಧ ಅನಿವಾರ್ಯವಾದರೆ ಯುದ್ಧ ಮಾಡಬೇಕು ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಭಯೋತ್ಪಾದನೆಯ ಮೂಲೋಚ್ಚಾಟನೆಯಾಗಬೇಕು. ಎಲ್ಲರಿಗೂ ಭದ್ರತೆಯನ್ನು ಕೇಂದ್ರ ಸರಕಾರ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬುಧವಾರ ಕೂಡಲಸಂಗಮ ಸಭಾ ಭವನ ಬಳಿ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಹಿಂದೆ ಇಂದಿರಾ ಗಾಂಧಿಯವರು 1971ರಲ್ಲಿ ಯುದ್ಧ ಮಾಡಿ ಪಾಕಿಸ್ತಾನವನ್ನು ಬಗ್ಗು ಬಡಿದಿದ್ದರು. ಪಾಕಿಸ್ತಾನದ ಸುಮಾರು 80 ಸಾವಿರ ಸೈನಿಕರು ಶರಣಾಗತರಾಗಿದ್ದರು ಎಂದರು.

ಸಮೀಕ್ಷೆ ಮುಖ್ಯ: ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಆಗಬೇಕೆಂದು ಹೇಳಿದ್ದು, ಕೇಂದ್ರ ಸರಕಾರ ಜಾತಿ ಗಣತಿ ಮಾಡುತ್ತಾರೋ ಅಥವಾ ಸಾಮಾಜಿಕ ಆರ್ಥಿಕ ಸಮೀಕ್ಷೆ ಮಾಡುತ್ತಾರೋ ತಿಳಿದಿಲ್ಲ. ಕೇಂದ್ರ ಸರಕಾರ ಜಾತಿ ಮತ್ತು ಜನಗಣತಿ ಮಾಡುವುದಾಗಿ ಹೇಳಿದೆ. ಸಾಮಾಜಿಕ ನ್ಯಾಯ ಒದಗಿಸಲು ಸಾಮಾಜಿಕ ಆರ್ಥಿಕ ಸಮೀಕ್ಷೆ ಯಾಗಬೇಕಿರುವುದು ಬಹಳ ಮುಖ್ಯ ಎಂದು ಅವರು ಹೇಳಿದರು.

ಸಾಮಾಜಿಕ, ಶೈಕ್ಷಣಿಕ ಆರ್ಥಿಕ ಸಮೀಕ್ಷೆಯನ್ನು ಸಚಿವ ಸಂಪುಟದಲ್ಲಿ ಮಂಡಿಸಲಾಗಿದ್ದು, ಈ ಬಗ್ಗೆ ಸಚಿವರು ಲಿಖಿತವಾಗಿ ತಮ್ಮ ಅಭಿಪ್ರಾಯಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದು, ಅದು ಸಲ್ಲಿಕೆಯಾದ ನಂತರ ಪುನಃ ಸಚಿವ ಸಂಪುಟ ಕರೆದು ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಮಾನಹಾನಿ ಮಾಡಬಾರದು: ಮೋದಿಯವರ ತಲೆ ಇಲ್ಲದ ಚಿತ್ರ ಹಾಕಿ ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದ್ದು, ಅದನ್ನು ತೆಗೆದಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಸಾಮಾಜಿಕ ಮಾಧ್ಯಮದಲ್ಲಿ ನರೇಂದ್ರ ಮೋದಿಯವರದ್ದಾಗಲಿ ಬೇರೆ ಯಾರದ್ದೇ ಆಗಲಿ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಇದೆ ಎಂದು ಇನ್ನೊಬ್ಬರ ಮಾನಹಾನಿ ಮಾಡಬಾರದು ಎಂದರು.

ಕೇಂದ್ರ ಸರಕಾರದ ತೀರ್ಮಾನಕ್ಕೆ ನಮ್ಮ ಬೆಂಬಲ: ಉಗ್ರರ ದಾಳಿಯ ನಂತರ ಕೇಂದ್ರ ಸರಕಾರ ರಾಜತಾಂತ್ರಿಕವಾಗಿ ಕೈಗೊಳ್ಳುವ ತೀರ್ಮಾನಕ್ಕೆ ನಮ್ಮ ಬೆಂಬಲ ಇದೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News