×
Ad

ಬೆಂಗಳೂರು | ಸಿಗರೇಟ್ ವಿತರಕನಿಗೆ ಬೆದರಿಸಿ 15 ಲಕ್ಷ ರೂ. ದರೋಡೆ

Update: 2024-02-02 19:34 IST

ಬೆಂಗಳೂರು: ಸಿಗರೇಟ್ ವಿತರಕನನ್ನು ಬೆದರಿಸಿ 15ಲಕ್ಷ ರೂ.ದರೋಡೆ ಮಾಡಿ ಮೂವರು ಆರೋಪಿಗಳು ಪರಾರಿಯಾಗಿರುವ ಘಟನೆ ಇಲ್ಲಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಫೆ.1ರಂದು ಸಿಗರೇಟ್ ವಿತರಕ ಗೋಪಾಲ್ ಎಂಬುವವರು ಕೆಂಗೇರಿಯಿಂದ ಸಿಗರೇಟ್ ಬಿಲ್ ಸಂಗ್ರಹಿಸಿಕೊಂಡು ಬರುತ್ತಿದ್ದರು. ನಾಗರಭಾವಿ ಪಾಪರೆಡ್ಡಿ ಪಾಳ್ಯಕ್ಕೆ ಬಂದಿದ್ದ ಅವರು, ನಾಥೂರಾಮ್ ಎಂಬವರ ಅಂಗಡಿ ಬಳಿ ಸಿಗರೇಟ್ ಬಿಲ್ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ಮೂವರು ಆರೋಪಿಗಳು ಗೋಪಾಲ್ ಅವರನ್ನು ಅಡ್ಡಗಟ್ಟಿ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನಂತರ ತಪ್ಪಿಸಿಕೊಳ್ಳಲು ಯತ್ನಿಸಿದ ಗೋಪಾಲ್ ಅವರನ್ನು ಮಾರಕಾಸ್ತ್ರ ಬೀಸಿ ಅಟ್ಟಾಡಿಸಿದ್ದು, ಮಾರಕಾಸ್ತ್ರ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ತುಂಡಾಗಿದೆ. ಕೂಡಲೇ ಹಣವಿದ್ದ ಬ್ಯಾಗ್ ಹೊತ್ತು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News