Bengaluru | ಯುವತಿಗೆ ಮದುವೆಯಾಗುವುದಾಗಿ ನಂಬಿಸಿ 1.53 ಕೋಟಿ ರೂ. ವಂಚನೆ : ಪ್ರಕರಣ ದಾಖಲು
ಬೆಂಗಳೂರು : ಸಾಫ್ಟ್ ವೇರ್ ಇಂಜಿನಿಯರ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ 1.53 ಕೋಟಿ ರೂ. ಹಣ ಪಡೆದು ವಂಚಿಸಿದ ಆರೋಪದಡಿ ವಿಜಯ್‍ರಾಜ್ ಗೌಡ ಸಹಿತ ಮೂವರ ವಿರುದ್ಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
29 ವರ್ಷದ ಯುವತಿಯೊಬ್ಬಳು ನೀಡಿದ ದೂರಿನನ್ವಯ ಪ್ರಮುಖ ಆರೋಪಿ ವಿಜಯ್‍ರಾಜ್ ಗೌಡ ಮತ್ತು ಆತನ ತಂದೆ ಬೊರೇಗೌಡ, ಆತನ ಪತ್ನಿ ಸೌಮ್ಯ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕೃತ್ಯ ನಡೆದ ಸ್ಥಳದ ಆಧಾರದಲ್ಲಿ ಕೆಂಗೇರಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿವಾಹಿತನಾಗಿದ್ದರೂ ಸಹ ಪತ್ನಿಯನ್ನು ಸಹೋದರಿ ಎಂದು ಪರಿಚಯಿಸಿ ವಂಚಿಸಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಆರೋಪಿಸಿದ್ದು, ಈ ಸಂಬಂಧವೂ ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವೈಟ್‍ಫೀಲ್ಡ್ ವ್ಯಾಪ್ತಿಯಲ್ಲಿ ವಾಸವಿದ್ದ ಯುವತಿಗೆ 2024ರ ಮಾರ್ಚ್‍ನಲ್ಲಿ ಮ್ಯಾಟ್ರಿಮೋನಿ ಮೂಲಕ ವಿಜಯ್ ರಾಜ್ ಗೌಡನ ಪರಿಚಯವಾಗಿತ್ತು. ‘ತಾನು ಓರ್ವ ಉದ್ಯಮಿ 715 ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಜಾರಿ ನಿರ್ದೇಶನಾಲಯ(ಈ.ಡಿ.)ದಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಜಾಮೀನು ದೊರೆತಿದೆ’ ಎಂದು ಹೇಳಿಕೊಂಡಿದ್ದ. ಬಳಿಕ ಯುವತಿಯ ಮನೆಯವರನ್ನೂ ಭೇಟಿಯಾಗಿದ್ದ ಆರೋಪಿ, ಸೌಮ್ಯ ಎಂಬಾಕೆಯನ್ನು ತನ್ನ ಸಹೋದರಿ ಹಾಗೂ ತಂದೆ ಬೊರೇಗೌಡ ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿಕೊಂಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪರಿಚಯ ಗಟ್ಟಿಯಾದ ನಂತರ, ‘ತನ್ನ ಆಸ್ತಿಯ ಸಂಬಂಧ ಈ.ಡಿ.ಯಲ್ಲಿ ಪ್ರಕರಣ ದಾಖಲಾಗಿದೆ, ಬ್ಯಾಂಕ್ ಖಾತೆಗಳು ಫ್ರೀಜ್ ಆಗಿವೆ ಮತ್ತು ಹೈಕೋರ್ಟ್, ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣಗಳಿವೆ’ ಎಂದು ಸುಳ್ಳು ಹೇಳಿ ಕೆಲವು ನಕಲಿ ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ಯುವತಿಗೆ ತೋರಿಸಿದ್ದ. ಹಣದ ಅವಶ್ಯಕತೆ ಇದೆ ಎಂದು ಹೇಳಿ ಆರಂಭದಲ್ಲಿ 15 ಸಾವಿರ ರೂ. ಪಡೆದಿದ್ದ. ನಂತರ, ಒಟ್ಟಿಗೆ ವ್ಯವಹಾರ ಮಾಡೋಣ ಎಂದು ನಂಬಿಸಿ ಯುವತಿಯ ಹೆಸರಿನಲ್ಲಿ ಸಾಲ ಮಾಡಿಸಿದ್ದಲ್ಲದೆ, ಆಕೆಯ ಸ್ನೇಹಿತರ ಬಳಿಯೂ ಸಾಲ ಮಾಡಿಸಿದ್ದ. ಮದುವೆಗೆ ಹೆಣ್ಣು ನೋಡಲು ಬರುತ್ತೇವೆ ಎಂದು ಸುಳ್ಳು ಹೇಳಿ ಪುನಃ ಯುವತಿಯ ಸ್ನೇಹಿತರಿಗೆ ವ್ಯವಹಾರ ಮಾಡಲು ಪ್ರೇರೇಪಿಸಿ, ಲಕ್ಷ ಲಕ್ಷ ರೂಪಾಯಿ ಸಾಲ ಪಡೆದಿದ್ದ. ಹೀಗೆ ಹಂತ-ಹಂತವಾಗಿ, ಯುವತಿ, ಆಕೆಯ ಸ್ನೇಹಿತರು ಮತ್ತು ಸಂಬಂಧಿಕರಿಂದ ಒಟ್ಟು 1.53 ಕೋಟಿ ರೂಪಾಯಿ ಹಣ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಣ ವಾಪಸ್ ನೀಡುವಂತೆ ಯುವತಿ ಮತ್ತು ಆಕೆಯ ಸ್ನೇಹಿತರು ಒತ್ತಾಯಿಸಿದಾಗ ಆರಂಭದಲ್ಲಿ ಸ್ವಲ್ಪ ಹಣ ಮರಳಿಸಿದ್ದ. ಆದರೆ, ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಲ್ಲದೆ, ಹಣ ಕೇಳಿದ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಲು ಶುರುಮಾಡಿದ್ದಾನೆ. ಹಣ ವಾಪಸ್ ಕೇಳಲು ಹೋದಾಗ, ವಿಜಯ್‍ರಾಜ್ ಗೌಡ ಈಗಾಗಲೇ ಮದುವೆಯಾಗಿದ್ದು, ಒಂದು ಮಗುವೂ ಇರುವುದು ಗೊತ್ತಾಗಿದೆ. ಸಹೋದರಿ ಎಂದು ಪರಿಚಯಿಸಿದ್ದವರೇ ಆರೋಪಿಯ ಪತ್ನಿ ಎಂದು ತಿಳಿದಿದೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.