×
Ad

ಪಿಜಿ ವೈದ್ಯಕೀಯ 3ನೇ ಸುತ್ತಿನಲ್ಲಿ ಸೀಟು ನೋಂದಣಿಗೆ ಅವಕಾಶ

Update: 2026-01-18 23:04 IST

ಬೆಂಗಳೂರು : ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸೂಚನೆ ಮೇರೆಗೆ ಪಿಜಿನೀಟ್-2025 ರಲ್ಲಿ ಪಿಜಿ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ಕನಿಷ್ಠ ಅರ್ಹತಾ ಅಂಕಗಳನ್ನು ಕಡಿಮೆಗೊಳಿಸಿ ಪರಿಷ್ಕರಿಸಿರುವುದರಿಂದ 3ನೇ ಸುತ್ತಿನ (ಮಾಪ್-ಅಪ್) ಸೀಟು ಹಂಚಿಕೆಗಾಗಿ ಅರ್ಹ ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

ರವಿವಾರ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಪ್ರಸನ್ನ ಪ್ರಕಟಣೆ ಹೊರಡಿಸಿದ್ದು, ಆನ್ ಲೈನ್ ನೋಂದಣಿ, ಅರ್ಜಿ ಸಲ್ಲಿಕೆ ಹಾಗೂ ಶುಲ್ಕ ಪಾವತಿಗಾಗಿ ಪ್ರಾಧಿಕಾರದ ಪೋರ್ಟಲ್ ಅನ್ನು ಜ.26ರ ಬೆಳಿಗ್ಗೆ 11ರವರೆಗೆ ತೆರೆದಿರಲಾಗುತ್ತದೆ. 3ನೇ ಸುತ್ತಿನಲ್ಲಿ (ಮಾಪ್- ಅಪ್) ಲಭ್ಯವಾಗುವ ಸೀಟುಗಳ ಹಂಚಿಕೆಗೆ ಮಾತ್ರ ಇತರೆ ಅಭ್ಯರ್ಥಿಗಳ ಜೊತೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಬಹುದು ಎಂದಿದ್ದಾರೆ.

ಮುಂದಿನ ಯಾವುದೇ ಸುತ್ತಿನ ಸೀಟು ಹಂಚಿಕೆಗೆ ಆನ್ ಲೈನ್ ನೋಂದಣಿ ಮಾಡಿಕೊಳ್ಳಲು / ಅರ್ಜಿ ಸಲ್ಲಿಸಲು ಅವಕಾಶಗಳನ್ನು ನೀಡುವುದಿಲ್ಲ. 3ನೇ ಸುತ್ತಿಗೆ ಲಭ್ಯವಿರುವ ಸೀಟುಗಳ ವಿವರಗಳನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ರದ್ದುಗೊಳ್ಳಬಹುದಾದ ಅಥವಾ ಹೊಸದಾಗಿ ಸೇರ್ಪಡೆಯಾಗುವ ಸೀಟುಗಳು ಇದ್ದಲ್ಲಿ ಅವನ್ನೂ ಹಂಚಿಕೆಗೆ ಪರಿಗಣಿಸಲಾಗುತ್ತದೆ. ಅಭ್ಯರ್ಥಿಗಳು ಪರಿಷ್ಕೃತ ಮಾಹಿತಿಗಾಗಿ ಆಗಿಂದಾಗ್ಗೆ ಪ್ರಾಧಿಕಾರದ ವೆಬ್ ಸೈಟ್ ಗೆ ಭೇಟಿ ನೀಡುತ್ತಿರಬೇಕು ಎಂದು ಅವರು ಸೂಚಿಸಿದ್ದಾರೆ.

ಈವರೆಗೆ ನೋಂದಣಿ ಮಾಡದಿರುವ ಪಿಜಿ ವೈದ್ಯಕೀಯ ಅರ್ಹ ಅಭ್ಯರ್ಥಿಗಳೂ ನೋಂದಣಿ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News