ಫೆ.10 ರಿಂದ ಫೆ.25ರೊಳಗೆ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಸುವಂತೆ ಸೂಚನೆ
ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : 2025-26ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಫೆ.10ರಿಂದ ಫೆ.25ರೊಳಗೆ ಪರೀಕ್ಷೆಯನ್ನು ನಡೆಸಬೇಕು. ಯಾವುದೇ ಹಣ ಸಂಗ್ರಹಿಸದೆ ಪರೀಕ್ಷಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಕಾಲೇಜು ಮಟ್ಟದಲ್ಲಿ ಪರೀಕ್ಷೆ ನಡೆಸಬೇಕು ಎಂದು ಪದವಿ ಪೂರ್ವ ಕಾಲೇಜುಗಳಿಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸೂಚನೆ ನೀಡಿದೆ.
ಈ ಪರೀಕ್ಷೆ ಸಂಬಂಧ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ದ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧಿಕೃತ ವೆಬ್ ಸೈಟ್ ನಲ್ಲಿ ಅಳವಡಿಸಿರುವ ದ್ವಿತೀಯ ಪಿಯುಸಿ ವಿಷಯಗಳ ಮಾದರಿ ಪ್ರಶ್ನೆಪತ್ರಿಕೆಗಳನ್ನು ಅನುಸರಿಸಿ, ಅದೇ ಮಾದರಿಯಲ್ಲಿ ಪ್ರಥಮ ಪಿಯುಸಿ ತರಗತಿಗೆ ಪ್ರಶ್ನೆ ಪತ್ರಿಕೆಗಳನ್ನು ಪರೀಕ್ಷಾ ಕಾರ್ಯ ನಡೆಸಬೇಕು ಎಂದಿದ್ದಾರೆ.
ಫೆ.25ರೊಳಗೆ ಎಲ್ಲಾ ಪರೀಕ್ಷಾ ಕಾರ್ಯಗಳನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಎಸ್‍ಎಟಿಎಸ್ ತಂತ್ರಾಂಶದಲ್ಲಿ ಇಂದೀಕರಿಸಬೇಕು. ಫಲಿತಾಂಶ ಪಟ್ಟಿಯನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಮಾ.13ರೊಳಗೆ ಫಲಿತಾಂಶ ಪಟ್ಟಿಗೆ ಜಿಲ್ಲಾ ಉಪನಿರ್ದೇಶಕರಿಂದ ಅನುಮೋದನೆ ಪಡೆಯಬೇಕು. ಮಾ.30 ಫಲಿತಾಂಶವನ್ನು ಘೋಷಣೆ ಮಾಡಬೇಕು ಅವರು ಸೂಚನೆ ನೀಡಿದ್ದಾರೆ.
ನಾಳೆಯಿಂದ ದ್ವಿತೀಯ ಪಿಯು ಪೂರ್ವ ಸಿದ್ಧತಾ ಪರೀಕ್ಷೆ: ಜ.19 ರಿಂದ ಫೆ.2ರವರೆಗೆ ದ್ವಿತೀಯ ಪಿಯುನ ಎರಡನೇ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗದಂತೆ ಬೋರ್ಡ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.