ʼಮನರೇಗಾʼ ಮರು ಸ್ಥಾಪನೆಯಾಗುವವರೆಗೆ ಹೋರಾಟಕ್ಕೆ ಸಜ್ಜಾಗಿ : ಸಿದ್ದರಾಮಯ್ಯ ಕರೆ
ಮೈಸೂರು: ವಿಬಿ-ಜಿ ರಾಮ್ ಜಿ ಕಾಯ್ದೆ ರದ್ದಾಗಿ ಮನರೇಗಾ ಮರು ಸ್ಥಾಪನೆಯಾಗುವವರೆಗೆ ಮಾಡುವ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮೈಸೂರು ವತಿಯಿಂದ ಟಿ. ನರಸೀಪುರ ತಾಲೂಕಿನ ಕುಪ್ಯಾ ಗ್ರಾಮದಲ್ಲಿ ರವಿವಾರ ಆಯೋಜಿಸಲಾಗಿದ್ದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು.
2005 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಈ ಕಾನೂನು ಜಾರಿ ಮಾಡಿದರು. ಕೆಲಸದ ಹಕ್ಕು ಕೊಟ್ಟರು. ಅದನ್ನು ಕಿತ್ತುಹಾಕುತ್ತಿದ್ದಾರೆ. ಬಿಜೆಪಿಯವರು ಬಡವರು, ಹೆಣ್ಣುಮಕ್ಕಳು, ಕಾರ್ಮಿಕರಿಗೆ ಕೆಲಸ ಕೊಡಲು ಬಿಡುತ್ತಿಲ್ಲ. ನೀವು ಯಾವಾಗ ಕೇಳಿದರೂ ಉದ್ಯೋಗ ಕೊಡುವ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು. ಈಗ ಕೇಂದ್ರ ಸರಕಾರ ಅದನ್ನು ತೀರ್ಮಾನಿಸಲಿದೆ. ವಿಬಿ- ಜಿ ಗ್ರಾಮ್ ಜಿ ರದ್ದಾಗಬೇಕು. ಎಲ್ಲರೂ ಚಳುವಳಿಗೆ ತಯಾರಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಕುಪ್ಯಾ ಗ್ರಾಮದಲ್ಲಿ ಸುಮಾರು 323 ಕೋಟಿ ರೂ.ಗಳ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಾಗಿದೆ. ಈ ಬಾರಿ ಅಧಿಕಾರಕ್ಕೆ ಬಂದ ನಂತರ ಮೂರು ಬಾರಿ ವರುಣಾ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2024ರಲ್ಲಿ 501 ಕೋಟಿ ರೂ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ನಂತರ 2025ರಂದು 1108 ಕೋಟಿ ರೂ.ಗಳ ಕಾರ್ಯಕ್ರಮ. ಮತ್ತು ಇಂದು 323 ಕೋಟಿ ಸೇರಿದಂತೆ ಒಟ್ಟು 1932 ಕೋಟಿ ರೂ. ಮೊತ್ತದ ಕಾಮಗಾರಿಗಳಿಗೆ ವರುಣಾ ಕ್ಷೇತ್ರದಲ್ಲಿ ಚಾಲನೆ ನೀಡಲಾಗಿದೆ ಎಂದರು.
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಸಿ.ಮಹದೇವಪ್ಪ, ಸಚಿವ ಶರಣ ಪ್ರಕಾಶ್ ಪಾಟೀಲ್, ಡಾ.ಎಂ.ಸಿ.ಸುಧಾಕರ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರು ಹಾಗೂ ರಾಜ್ಯ ಮಟ್ಟದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಚ್.ಎಂ.ರೇವಣ್ಣ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಶಾಸಕ ಡಿ.ರವಿಶಂಕರ್ ಸೇರಿ ಮೊದಲಾದವರು ಉಪಸ್ಥಿತರಿದ್ದರು.