×
Ad

Bengaluru | ಹಾಡಹಗಲೇ ಎಟಿಎಂಗೆ ಹಣ ತುಂಬುವ ವಾಹನ ತಡೆದು 7.11 ಕೋಟಿ ರೂ. ದರೋಡೆ!

ಅಧಿಕಾರಿಗಳ ಸೋಗಿನಲ್ಲಿ ಕೃತ್ಯ

Update: 2025-11-19 17:19 IST

Screengrab : x/@dpkBopanna

ಬೆಂಗಳೂರು : ಅಧಿಕಾರಿಗಳ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಎಟಿಎಂ ಯಂತ್ರಗಳಿಗೆ ಹಣ ತುಂಬಿಸಲು ಕೊಂಡೊಯ್ಯುತ್ತಿದ್ದ ವಾಹನದಿಂದ 7.11 ಕೋಟಿ ರೂ.ಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಂಗಳೂರು ನಗರದ ಡೈರಿ ವೃತ್ತದ ಮೇಲ್ಸೇತುವೆಯ ಮೇಲೆ ನಡೆದಿದೆ.

ನ.19ರ ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಸರಕಾರಿ ವಾಹನದಂತೆ ಸ್ಟಿಕ್ಕರ್ ಹಾಕಿದ್ದ ಇನ್ನೋವಾ ಕಾರಿನಲ್ಲಿ ಬಂದಿದ್ದ 5ರಿಂದ 6 ಜನರ ಗುಂಪು ನಗರದ ಸೌತ್ ಎಂಡ್ ಸರ್ಕಲ್ ಬಳಿ ಎಟಿಎಂಗೆ ಹಣ ತುಂಬಿಸಿ ಹೊರಟಿದ್ದ ಕಸ್ಟೋಡಿಯನ್ ವಾಹನವನ್ನು ತಡೆದಿದ್ದಾರೆ.

ಬಳಿಕ ತಾವು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಹಾಗೂ ಆರ್‌ಬಿಐ ಎನ್ನುತ್ತಾ ಕಸ್ಟೋಡಿಯನ್ ವಾಹನದಲ್ಲಿದ್ದ ಗನ್‍ಮ್ಯಾನ್ ಸಹಿತ ಎಲ್ಲ ಸಿಬ್ಬಂದಿಯನ್ನು ಕೆಳಗಿಳಿಸಿದ್ದಾರೆ. ಚಾಲಕನನ್ನು ಮಾತ್ರ ಕೂರಿಸಿಕೊಂಡು ಜಯದೇವ ಆಸ್ಪತ್ರೆ ಕಡೆಯಿಂದ ಡೈರಿ ಸರ್ಕಲ್ ಕಡೆಗೆ ವಾಹನವನ್ನು ಕರೆದೊಯ್ದಿದ್ದಾರೆ.

ಡೈರಿ ವೃತ್ತ ಬಳಿಯ ಮೇಲ್ಸೇತುವೆಯ ಮೇಲೆ ಕಸ್ಟೋಡಿಯನ್ ವಾಹನವನ್ನು ನಿಲ್ಲಿಸಿ ಚಾಲಕನನ್ನು ಬೆದರಿಸಿ, 7.11 ಕೋಟಿ ರೂಪಾಯಿ ಹಣವಿದ್ದ ಪೆಟ್ಟಿಗೆಯನ್ನು ತಮ್ಮ ಕಾರಿಗೆ ಹಾಕಿಕೊಂಡು ಪರಾರಿಯಾಗಿದ್ದಾರೆ ಎಂದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಮತ್ತು ಪಶ್ಚಿಮ ವಿಭಾಗ ಜಂಟಿ ಪೊಲೀಸ್ ಆಯುಕ್ತರು ಹಶಗೂ ಆಗ್ನೇಯ ವಿಭಾಗದ ಡಿಸಿಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ನಡೆದ ತಕ್ಷಣವೇ ನಗರದ ಎಲ್ಲ ವಿಭಾಗಗಳ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ಆರೋಪಿಗಳ ಪತ್ತೆಗೆ ತೀವ್ರ ಕಾರ್ಯಾಚಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಕೃತ್ಯ: ಆರೋಪಿಗಳು ತಂದಿದ್ದ ಇನ್ನೋವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿರುವುದು ಬೆಳಕಿಗೆ ಬಂದಿದೆ.  ಇನ್ನೋವಾ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದಾರೆ. 

ನಗರದೆಲ್ಲೆಡೆ ನಾಕಾಬಂದಿ, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ: ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರತಿಕ್ರಿಯಿಸಿ, ‘ಈ ಘಟನೆ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ, ಅಂದಾಜು 7.11 ಕೋಟಿ ಹಣ ದರೋಡೆಯಾಗಿದೆ. ಈ ಪ್ರಕರಣದ ಚಾಲಕನ ಹೇಳಿಕೆ ಪಡೆಯಲಾಗಿದ್ದು, ಆರೋಪಿಗಳು ಶಸ್ತ್ರಾಸ್ತ್ರ ಹೊಂದಿದ್ದರಾ ಎಂಬ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ನಗರದ ಸುತ್ತ ನಾಕಾಬಂದಿ ಹಾಕಿದ್ದು, ತಮ್ಮ ಪೊಲೀಸರ ತಂಡ ಎಲ್ಲೆಡೆ ಕಾರ್ಯಪ್ರವೃತ್ತವಾಗಿದೆ. ಕಂಟ್ರೋಲ್ ರೂಮ್, ಬೇರೆ ಬೇರೆ ತಾಂತ್ರಿಕ ವಿಭಾಗ ಸೇರಿದಂತೆ ಎಲ್ಲರೂ ಆರೋಪಿಗಳನ್ನು ಪತ್ತೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದೇವೆ’ ಎಂದು ಮಾಹಿತಿ ನೀಡಿದರು.

ಚಾಲಕ ನೀಡಿದ ಪ್ರಾಥಮಿಕ ಮಾಹಿತಿ ಅನುಸಾರ ಹಳೆ ಆರೋಪಿಗಳು ಹಾಗು ಕೆಲವು ಶಂಕಿತರೂ ಸೇರಿ 6 ಜನರ ಫೋಟೋ ಬಿಡುಗಡೆ ಮಾಡಲಾಗಿದೆ. ನಾಕಾ ಬಂದಿಯಲ್ಲಿರುವ ಸಿಬ್ಬಂದಿಗೆ ಈ ಫೋಟೊಗಳನ್ನು ರವಾನಿಸಿದ್ದು, ಪರಿಶೀಲನೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News