ಬೆಂಗಳೂರು | ಸೌಜನ್ಯಾ ಸಹಿತ ಧರ್ಮಸ್ಥಳ ಪ್ರಕರಣಗಳಲ್ಲಿ ನ್ಯಾಯ ಒದಗಿಸಲು ಆಗ್ರಹಿಸಿ ಧರಣಿ
ಬೆಂಗಳೂರು: ದ.ಕ. ಜಿಲ್ಲೆಯ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯನ್ನು ಎಸ್ಐಟಿ ಯಾವುದೇ ಒತ್ತಡಗಳಿಗೆ ಮಣಿಯದೇ ನಿಷ್ಪಕ್ಷವಾಗಿ ನಡೆಸಬೇಕು ಮತ್ತು ಸೌಜನ್ಯಾ ಅತ್ಯಾಚಾರ-ಹತ್ಯೆ ಸಹಿತ ಎಲ್ಲ ಪ್ರಕರಣಗಳಿಗೆ ನ್ಯಾಯ ಒದಗಿಸಲು ಆಗ್ರಹಿಸಿ, ಎಐಡಿಎಸ್ಓ ಕರ್ನಾಟಕ ರಾಜ್ಯ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಶನಿವಾರ ಧರಣಿ ನಡೆಯಿತು
ಧರಣಿಯನ್ನು ಉದ್ದೇಶಿಸಿ ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಇಡೀ ದೇಶವೇ ಬೆಚ್ಚಿ ಬೀಳುವಂತಹ ಹಲವು ಕೊಲೆ ಹಾಗೂ ಅತ್ಯಾಚಾರದ ಪ್ರಕರಣಗಳು ಧರ್ಮಸ್ಥಳದಲ್ಲಿ ನಡೆದಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಈ ಪ್ರಕರಣಗಳ ಕುರಿತು ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಈ ಕುರಿತು ಮೌನ ತಾಳಿವೆ. ಈ ಹಲವು ಪ್ರಕರಣಗಳ ಕುರಿತು ಎದ್ದಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ದೊರೆಯಬೇಕಿದೆ. ಈ ಎಲ್ಲಾ ಅಪರಾಧ ಪ್ರಕರಣಗಳ ಕುರಿತು ಎಸ್ಐಟಿ ಯು ಯಾವುದೇ ಒತ್ತಡಗಳಿಗೆ ಮಣಿಯದೇ ನಿಷ್ಪಕ್ಷವಾಗಿ ತನಿಖೆ ನಡೆಸಬೇಕು. ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿರಲಿ ಅಥವಾ ಯಾರೇ ಆಗಿರಲಿ ಅವರಿಗೆ ಕಠಿಣ ಶಿಕ್ಷೆಯಾಗುವಂತಾಗಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಲ್ಯಾಣ ಕುಮಾರ್ ಧರಣಿಯ ಅಧ್ಯಕ್ಷತೆ ವಹಿಸಿದರು. ರಾಜ್ಯಾಧ್ಯಕ್ಷ ಅಶ್ವಿನಿ ಕೆ.ಎಸ್., ಕಾರ್ಯದರ್ಶಿ ಅಜಯ್ ಕಾಮತ್ ಸೇರಿದಂತೆ ಇತರ ಮುಖಂಡರು, ರಾಜ್ಯ ಸಮಿತಿಯ ಸದಸ್ಯರು ಮತ್ತು ನೂರಾರು ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದರು.