ಬೆಂಗಳೂರಿನ ರಸ್ತೆ ಅವ್ಯವಸ್ಥೆಗೆ ಉದ್ಯಮಿಗಳ ಆಕ್ರೋಶ: ಸರಕಾರ ತಕ್ಷಣ ಮಧ್ಯಪ್ರವೇಶಕ್ಕೆ ಆಗ್ರಹ
ಬೆಂಗಳೂರು: ಬೆಂಗಳೂರಿನ ರಸ್ತೆ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಉದ್ಯಮಿಗಳಾದ ಮೋಹನದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಷಾ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸರಕಾರ ತ್ವರಿತವಾಗಿ ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಚಾರ ದಟ್ಟಣೆ ಹಾಗೂ ಕಳಪೆ ರಸ್ತೆಯಿಂದ ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಕಚೇರಿಯನ್ನು ಸ್ಥಳಾಂತರಗೊಳಿಸುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಟೆಕ್ ಕಂಪನಿ ’ಬ್ಲ್ಯಾಕ್ಬಕ್’ ಘೋಷಿಸಿದ ಬೆನ್ನಲ್ಲೇ ರಾಜ್ಯ ರಾಜಧಾನಿಯ ರಸ್ತೆ ಅವ್ಯವಸ್ಥೆ ಬಗ್ಗೆ ಧ್ವನಿಯೆತ್ತಿರುವ ಇನ್ಫೋಸಿಸ್ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಮೋಹನ ದಾಸ್ ಪೈ, ‘ಇದು ಬೆಂಗಳೂರಿನಲ್ಲಿ ಭಾರಿ ಆಡಳಿತ ವೈಫಲ್ಯದ ಪ್ರತೀಕ’ ಎಂದು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಮೋಹನ ದಾಸ್ ಪೈ, ‘ದಯವಿಟ್ಟು ಗಮನಿಸಿ, ಕಂಪೆನಿಗಳು ಹೊರವರ್ತುಲ ರಸ್ತೆಯಿಂದ ಸ್ಥಳಾಂತರಗೊಳ್ಳುತ್ತಿವೆ. ಆಶಾದಾಯಕ ಪರಿಸ್ಥಿತಿ ಇಲ್ಲ. ದಯವಿಟ್ಟು ಮಧ್ಯಪ್ರದೇಶಿಸಿ’ ಎಂದು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳನ್ನೂ ಪೈಯವರು ಟ್ಯಾಗ್ ಮಾಡಿದ್ದಾರೆ.
‘ಇದು ಗಂಭೀರ ಸಮಸ್ಯೆ. ಇದನ್ನು ಸಮಸ್ಯೆಯನ್ನು ಬಗೆಹರಿಸಲು ತುರ್ತು ಕ್ರಮಗಳ ಅಗತ್ಯವಿದೆ’ ಕಿರಣ್ ಮಜುಂದರ್ ಷಾ ಅವರು ಮೋಹನ ದಾಸ್ ಪೈಯವರ ಪೋಸ್ಟ್ ಉಲ್ಲೇಖಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.