ಕಾಂಗ್ರೆಸ್ ಸರಕಾರ ಕೆಡವಲು ಬಿಜೆಪಿ ಜೊತೆಗೆ ಕೆಲಸ ಮಾಡಬೇಕಿದೆ : ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರವನ್ನು ಕೆಡವಲು ನಾವು ಬಿಜೆಪಿಗೆ ಸಹಕಾರ ಮಾಡಬೇಕಾಗಿದೆ ಎಂದು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ರವಿವಾರ ಬಿಡದಿಯ ತಮ್ಮ ನಿವಾಸದಲ್ಲಿ ಜೆಡಿಎಸ್ ಪಕ್ಷದ ಶಾಸಕರು, ಪರಿಷತ್ ಸದಸ್ಯರು, ಮಾಜಿ ಸಚಿವರು ಮತ್ತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳ ಜತೆ ಸಭೆ ನಡೆಸಿದ ಅವರು, ಪಕ್ಷ ಬಲವರ್ಧನೆ ಮತ್ತು ಸಂಘಟನೆಯ ದೃಷ್ಟಿಯಿಂದ ರಾಜ್ಯಾದ್ಯಂತ ಮತ್ತೆ ಸದಸ್ಯತ್ವ ನೊಂದಣಿ ಪುನಾರಂಭವಾಗಬೇಕು ಎಂದು ಸೂಚನೆ ನೀಡಿದರು.
ನೀವು ಪಟ್ಟ ಶ್ರಮದಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. ಇನ್ನೂ ಮುಂದಿನ ಸವಾಲುಗಳಿಗೆ ತಯಾರಾಗಬೇಕು. ಪ್ರತಿ ಬೂತ್‍ಗಳಲ್ಲಿ ಸದಸ್ಯತ್ವ ನೊಂದಣಿ ಚಾಲನೆ ಆಗಬೇಕು. ಇನ್ನು ಕೆಲವು ಜಿಲ್ಲೆಗಳಲ್ಲಿ ಸದಸ್ಯತ್ವ ಚಾಲನೆ ನಿಂತಿದೆ ಅದನ್ನು ಮತ್ತೆ ಆರಂಭಿಸಬೇಕು. ಉಪಚುನಾವಣೆ ಫಲಿತಾಂಶಗಳು ಪಕ್ಷದ ಭವಿಷ್ಯವನ್ನ ತೀರ್ಮಾನಿಸುವುದಿಲ್ಲ ಎಂದು ಅವರು ತಿಳಿಸಿದರು.
ಜೆಡಿಎಸ್ ಹಿಂದಕ್ಕೆ ಬಿದ್ದಿಲ್ಲ:
ಜೆಡಿಎಸ್ ಪಕ್ಷ ಎಂದಿಗೂ ಹಿಂದಕ್ಕೆ ಬಿದ್ದಿಲ್ಲ. ದೇವೇಗೌಡರು ಮುಖ್ಯಮಂತ್ರಿ ಆದರು, ನಂತರ ಪ್ರಧಾನಿ ಆದರು. ಈಗ 2023ರ ಚುನಾವಣೆಯಲ್ಲಿ ಕೇವಲ 18 ಸ್ಥಾನಗಳನ್ನು ಗೆದ್ದಿದ್ದರೂ ನಾನು ಕೇಂದ್ರ ಸಚಿವನಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
‘ನಿಖಿಲ್’ ಭವಿಷ್ಯದ ನಾಯಕ :
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ನನ್ನ ಮಗ. ಇಂದು ನಾನು ಅವರನ್ನು ಪಕ್ಷಕ್ಕೆ ಒಪ್ಪಿಸುತ್ತಿದ್ದೇನೆ. ಅವನನ್ನು ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮಗೆ ಇದೆ. ಆತ ಭವಿಷ್ಯದ ನಾಯಕ ಎಂದು ಕುಮಾರಸ್ವಾಮಿ ಬಣ್ಣಿಸಿದರು.
ಚುನಾವಣೆ ತಯಾರಿ :
ಪಕ್ಷದ ಬಗ್ಗೆ ಅಸಮಾಧಾನಗಳಿದ್ದರೆ, ಬಗೆಹರಿಸಿಕೊಳ್ಳಿ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲ್ಲುವ ದೃಷ್ಟಿಯಿಂದ ಮುಖ್ಯ ಎಂದು ಅವರು, ನಮ್ಮ ಪಕ್ಷವು ಕಾರ್ಯಕರ್ತರಿಗೋಸ್ಕರ ಇರುವ ಪಕ್ಷ. ಜಾತಿ ರಾಜಕಾರಣದಲ್ಲಿ ನಮಗೆ ನಂಬಿಕೆ ಇಲ್ಲ. ಎಲ್ಲ ಸಮುದಾಯಗಳನ್ನು ನಮ್ಮೊಂದಿಗೆ ಕೊಂಡೊಯ್ಯಲು ಬದ್ಧರಾಗಿದ್ದೇವೆ. ನಾವು ಒಗ್ಗಟ್ಟಿನಿಂದ ಇದ್ದರೆ, ನಮ್ಮನ್ನು ಯಾವುದೇ ಶಕ್ತಿಗಳು ಅಂತ್ಯಗೊಳಿಸಲಾರವು ಎಂದು ನುಡಿದರು.
ಈ ಸಭೆಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಖಾಶೆಂಪುರ್, ಲೀಲಾದೇವಿ ಪ್ರಸಾದ್, ಎಂ.ಟಿ.ಕೃಷ್ಣಪ್ಪ, ಎಚ್.ಕೆ.ಕುಮಾರಸ್ವಾಮಿ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಮುಖಂಡರಾದ ಸುರೇಶ ಬಾಬು, ಸಮೃದ್ಧಿ ಮಂಜುನಾಥ, ನಿಖಿಲ್ ಕುಮಾರಸ್ವಾಮಿ, ಬಾಲಕೃಷ್ಣ, ಶಾರದಾ ಪೂರ್ಯಾ ನಾಯಕ್, ಜಿ.ಟಿ ಹರೀಶ್ ಗೌಡ, ಮಂಜೇಗೌಡ, ರಮೇಶ್ ಗೌಡ, ತಿಪ್ಪೇಸ್ವಾಮಿ ಮತ್ತು ನಾಗರಾಜಯ್ಯ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು.