ಬಾಣಂತಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮ : ದಿನೇಶ್ ಗುಂಡೂರಾವ್
ಶಿವಮೊಗ್ಗ : ರಾಜ್ಯದಲ್ಲಿ ಬಾಣಂತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಎಲ್ಲ ತಾಲೂಕು ಆಸ್ಪತ್ರೆಯಲ್ಲಿ ಸ್ತ್ರೀರೋಗ, ಅರಿವಳಿಕೆ ತಜ್ಞರ ನಿಯೋಜನೆ ಮಾಡಲಾಗುತ್ತಿದೆ. ಅಧಿವೇಶನದ ಬಳಿಕ ಎರಡೆರಡು ಸ್ತ್ರೀರೋಗ, ಮಕ್ಕಳ ಹಾಗೂ ಅರಿವಳಿಕೆ, ಪ್ರಸೂತಿ ತಜ್ಞರನ್ನು ನೇಮಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಜ್ಞಾನಿಕವಾಗಿ ಬಾಣಂತಿ ಸಾವು ಪ್ರಕರಣ ಇಳಿಸಲಾಗುವುದು. ಶೇ. 58 ರಲ್ಲಿರುವ ಬಾಣಂತಿಯರ ಸಾವಿನ ಪ್ರಕರಣವನ್ನು 2030 ರ ಹೊತ್ತಿಗೆ ಶೇ.20ಕ್ಕೆ ಇಳಿಸಲಾಗುವುದು. ಪ್ರತಿಯೊಂದು ಬಾಣಂತಿ ಸಾವು ಆಡಿಟ್ ಮಾಡಿಸುತ್ತೇವೆ. ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವರು ತಿಳಿಸಿದರು.
ಮಂಗನ ಕಾಯಿಲೆ ಸಂಬಂಧಿಸಿದಂತೆ ಲಸಿಕೆ ಸಿದ್ಧವಾಗಿ ಪ್ರಯೋಗ ಮಾಡಲಾಗುತ್ತಿದೆ. ಮುಂದಿನ ವರ್ಷ ಲಸಿಕೆ ಲಭ್ಯವಾಗಲಿದೆ. ಈ ವರ್ಷ ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸರಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದೆ. ರಾಜ್ಯ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ನಾವು ಮುಂದೆಯೂ ಉತ್ತಮ ಆಡಳಿತ ನೀಡುತ್ತೇವೆ. ಸಿಎಂ ಸಿದ್ದರಾಮಯ್ಯನವರು ಎಲ್ಲದಕ್ಕೂ ಬಹಳ ತಾಳ್ಮೆಯಿಂದ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಜನನಾಯಕರಾಗಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡು ನಡೆಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಪೂರ್ಣಗೊಳಿಸಿದ್ದಾರೆ. ವಿಪಕ್ಷಗಳು ಬೇಕಂತಲೇ ಆರೋಪ ಮಾಡುತ್ತಿವೆ ಎಂದು ಹೇಳಿದರು.
ಎಚ್‌ಡಿಕೆಗೆ ತಿರುಗೇಟು:
ಕೇಂದ್ರ ಸಚಿವ ಕುಮಾರಸ್ವಾಮಿ ಕೇವಲ ಅರ್ಧಂಬರ್ಧ ತಿಳಿದುಕೊಂಡು ಮಾತನಾಡುತ್ತಾರೆ. ಎಲ್ಲ ಇಲಾಖೆಗಳಲ್ಲಿ ಅಭಿವೃದ್ಧಿ ಕುಸಿತ ಎಂದಿರುವುದು ಸತ್ಯಕ್ಕೆ ದೂರವಾದುದು. ಅವರ ಬಳಿ ಯಾವುದೇ ದಾಖಲೆಗಳಿಲ್ಲ.ಇವರ ಆರೋಪಕ್ಕೆ ಬೆಳಗಾವಿ ಅಧಿವೇಶನದಲ್ಲಿ ಉತ್ತರ ನೀಡುತ್ತೇವೆ ಎಂದರು.
ಕಾಂಗ್ರೆಸ್‌ನ ಎಲ್ಲ ಶಾಸಕರು ಶಿಸ್ತಿನಿಂದ ವರ್ತಿಸಿದ್ದಾರೆ. ಯಾರೂ ಕೂಡ ರೆಸಾರ್ಟ್‌ಗೆ ಹೋಗಿಲ್ಲ. ಬಿಜೆಪಿ ಅವಧಿಯಲ್ಲಿ ಕಿತ್ತಾಟ ಎಲ್ಲರೂ ನೋಡಿದ್ದಾರೆ. ಬಿಜೆಪಿಯ ಹಾಗೇ ರೆಸಾರ್ಟ್ ರಾಜಕೀಯ ನಮ್ಮಲ್ಲಿ ಮಾಡಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಸುಭದ್ರವಾಗಿದೆ. ಹೈಕಮಾಂಡ್ ತೀರ್ಮಾನಕ್ಕೆ ಸಿಎಂ ಸೇರಿದಂತೆ ಎಲ್ಲರೂ ಬದ್ಧವಾಗಿದ್ದೇವೆ ಎಂದು ತಿಳಿಸಿದರು.