×
Ad

ರಾಜ್ಯದ ಖಜಾನೆ ಲೂಟಿ ಹೊಡದಿದ್ದೇ ಬೊಮ್ಮಾಯಿ ಸರಕಾರದ ಹೆಗ್ಗಳಿಕೆ : ದಿನೇಶ್ ಗುಂಡೂರಾವ್

Update: 2025-02-22 19:36 IST

ದಿನೇಶ್ ಗುಂಡೂರಾವ್

ಬೆಂಗಳೂರು : ಬಸವರಾಜ ಬೊಮ್ಮಾಯಿ ಅವರು ಈಗ ಸರ್ವಸಂಪನ್ನರಂತೆ ಮಾತನಾಡುತ್ತಿದ್ದಾರೆ. ನಮ್ಮ ಸರಕಾರ ಜನರ ಬಾಯಿಗೆ ಮಣ್ಣು ಹಾಕುತ್ತಿದೆ ಎನ್ನುವ ಬೊಮ್ಮಾಯಿಯವರಿಗೆ ಕನಿಷ್ಠ ಪಕ್ಷ ಆತ್ಮಸಾಕ್ಷಿ ಇದ್ದಿದರೆ ಈ ರೀತಿಯ ಮಾತು ಆಡುತ್ತಿರಲಿಲ್ಲ. ರಾಜ್ಯದ ಖಜಾನೆ ಲೂಟಿ ಹೊಡೆದಿದ್ದೇ ಅವರ ಸರಕಾರದ ಹೆಗ್ಗಳಿಕೆಯಲ್ಲವೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಬೊಮ್ಮಾಯಿಯವರೆ, ನೀವು ಮುಖ್ಯಮಂತ್ರಿಯಾಗಿ ಏನು ಕಡಿದು ಕಟ್ಟೆ ಹಾಕಿದ್ದೀರಿ? ಎಂದು ಕೇಳಿದರೆ ನೀವು ಉತ್ತರ ಕೊಡಲು ತಡಕಾಡುವಿರಿ. ಮುಖ್ಯಮಂತ್ರಿಯಾಗಿದ್ದಾಗ ನೀವು ಈ ರಾಜ್ಯಕ್ಕೆ ಕೊಟ್ಟ ಕೊಡುಗೆಯೇನು? ಉತ್ತರಿಸುವಿರಾ? ಎಂದು ಪ್ರಶ್ನಿಸಿದ್ದಾರೆ.

ಬೊಮ್ಮಾಯಿಯವರೆ, 2023ರಲ್ಲಿ ನೀವು ಮರಳಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸತ್ಯ ಗೊತ್ತಿತ್ತು. ಹಾಗಾಗಿ ಅಧಿಕಾರ ಬಿಡುವ ಮುನ್ನ ಬಜೆಟ್ ವೆಚ್ಚಕ್ಕಿಂತ 7 ಪಟ್ಟು ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಿದಿರಿ. ಆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಹಣ ಪಾವತಿ ಯಾರು ಮಾಡಬೇಕು.? ನಿಮ್ಮ ಸ್ವಂತ ಖಜಾನೆಯಿಂದ ಕೊಡುವಂತೆ ಅಪ್ರಸ್ತುತ ಕಾಮಗಾರಿಗಳಿಗೆ ಅನುಮೋದನೆ ಕೊಟ್ಟಾಗ ಪ್ರಜ್ಞೆ ಇರಲಿಲ್ಲವೆ.? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ.? ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೊಮ್ಮಾಯಿಯವರೆ, ನೀವು ಮುಖ್ಯಮಂತ್ರಿಯಾಗಿದ್ದಾಗ ಎಂದಾದರೂ ಕೇಂದ್ರ ಸರಕಾರದ ತೆರಿಗೆ ಅನ್ಯಾಯದ ಬಗ್ಗೆ ಎದೆಯೆತ್ತಿ ಮಾತನಾಡಿದ್ದೀರಾ.? ಹೋಗಲಿ ಮೋದಿ ಸರಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಒಮ್ಮೆಯಾದರೂ ಬಾಯಿ ಬಿಟ್ಟಿದ್ದೀರಾ.? ಮೋದಿಯವರ ಮುಂದೆ ನಡು ಬಗ್ಗಿಸಿ ನಿಂತಿದ್ದೆ ನಿಮ್ಮ ಸಾಧನೆಯಲ್ಲವೆ.? ಇದು ಜನರ ಬಾಯಿಗೆ ಮಣ್ಣು ಹಾಕುವ ಕೆಲಸವಲ್ಲವೆ.? ಎಂದು ಅವರು ಕಿಡಿಗಾರಿದ್ದಾರೆ.

ಬೊಮ್ಮಾಯಿಯವರೆ, ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರಕಾರ 58 ಸಾವಿರ ಕೋಟಿ ರೂ. ಮೀಸಲಿರಿಸಿದೆ. ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಎಷ್ಟೋ ಮನೆಗಳ ದೀಪ ಉರಿಯುತ್ತಿದೆ ಎಂಬ ಅರಿವು ನಿಮಗಿರಲಿ. ನಿಮ್ಮ ನೇತೃತ್ವದ ಸರಕಾರವಿದ್ದಾಗ ಯಾವುದಾದರೂ ಒಂದೇ ಒಂದು ಜನಪರ ಕಾರ್ಯಕ್ರಮ ಮಾಡಿದ ಉದಾಹರಣೆ ಇದೆಯೇ.? ರಾಜ್ಯದ ಖಜಾನೆ ಲೂಟಿ ಹೊಡದಿದ್ದೆ ನಿಮ್ಮ ಸರಕಾರದ ಹೆಗ್ಗಳಿಕೆಯಲ್ಲವೆ.? ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News