×
Ad

ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹತ್ಯೆಗೆ ಸಂಚು ಆರೋಪ | ಐವರ ವಿರುದ್ಧ ಎಫ್‌ಐಆರ್‌ ದಾಖಲು

Update: 2025-03-28 22:24 IST

ಎಸ್‌ಪಿಗೆ ದೂರು ನೀಡಿದ್ದ ಆರ್.ರಾಜೇಂದ್ರ

ತುಮಕೂರು : ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ಅವರ ಹತ್ಯೆಗೆ ಸುಫಾರಿ ನೀಡಲಾಗಿತ್ತು ಎಂಬ ದೂರಿನ ಹಿನ್ನೆಲೆಯಲ್ಲಿ ಕ್ಯಾತ್ಸಂದ್ರ ಪೊಲೀಸರು ಐವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಕಳೆದ ನವೆಂಬರ್​ನಲ್ಲಿ ನನ್ನ ಕೊಲೆಗೆ ಯತ್ನ ನಡೆದಿತ್ತು ಎಂದು ಆರೋಪಿಸಿದ್ದ ಸಚಿವ ಕೆ.ಎನ್ ರಾಜಣ್ಣ ಅವರ ಪುತ್ರ ಎಂಎಲ್​ಸಿ ರಾಜೇಂದ್ರ ಇಂದು(ಮಾ.28) ತುಮಕೂರು ಎಸ್​ಪಿಗೆ ದೂರು ನೀಡಿದ್ದರು.

ಸದರಿ ದೂರಿನ ಅನ್ವಯ ಕೆ.ಎನ್.ರಾಜಣ್ಣ ಅವರ ಮನೆ ಇರುವ ವ್ಯಾಪ್ತಿಯ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಸೋಮ, ಭರತ್, ಅಮಿತ್, ಗುಂಡ ಹಾಗು ಯತೀಶ್ ಇತರರ ವಿರುದ್ದ ಭಾರತೀಯ ನ್ಯಾಯ ಸಂಹಿತೆ ಕಲಂ 109, 329(4) 190, ಮತ್ತು 61(2)ರ ಅನ್ವಯ ಎಫ್‌ಐಆರ್‌ ದಾಖಲಾಗಿದೆ.

70 ಲಕ್ಷ ರೂ.ಗೆ ಸುಪಾರಿ : ಆ‌ರ್.ರಾಜೇಂದ್ರ

ನನ್ನ ಕೊಲೆಗೆ ಸುಪಾರಿ ನೀಡಲಾಗಿದೆ ಎಂದು ಗುರುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪೆನ್‌ ಡ್ರೈವ್ ಸಮೇತ ದೂರು ನೀಡಿದ್ದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಪುತ್ರ ಹಾಗೂ ವಿಧಾನ ಪರಿಷತ್ ಸದಸ್ಯ ಆ‌ರ್.ರಾಜೇಂದ್ರ ಶುಕ್ರವಾರ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೂ ಈ ಕುರಿತು ದೂರು ಸಲ್ಲಿಸಿದ್ದರು.

ತುಮಕೂರು ಎಸ್‌ಪಿ ಅಶೋಕ್ ಅವರಿಗೆ ಸುಫಾರಿ ಬಗ್ಗೆ ಸಂಭಾಷಣೆ ಇರುವ ಆಡಿಯೋವನ್ನು ದಾಖಲೆ ಸಮೇತ ಎರಡು ಪುಟಗಳ ದೂರು ನೀಡಿದ್ದರು.

ದೂರು ನೀಡಿದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ್ದ ಅವರು, ನನ್ನ ಹತ್ಯೆಗೆ 70 ಲಕ್ಷ ರೂ.ಗಳಿಗೆ ಸುಪಾರಿ ಕೊಡಲಾಗಿದೆ. ಈ ಸಂಬಂಧ 5 ಲಕ್ಷ ರೂ.ಮುಂಗಡವಾಗಿ ಪಡೆದಿರುವ ಬಗ್ಗೆ ಆಡಿಯೋ ಸಂಭಾಷಣೆಯಲ್ಲಿ ಇದೆ. ಅಲ್ಲದೆ ನನ್ನ ಕಾರಿಗೆ ಜಿಪಿಎಸ್ ಅಳವಡಿಸಬೇಕು ಎಂಬ ಬಗ್ಗೆಯೂ ಸಂಭಾಷಣೆ ಇದೆ. ಎಲ್ಲವನ್ನು ಎಸ್‌ಪಿ ಯವರ ಗಮನಕ್ಕೆ ತಂದಿದ್ದು ಎಫ್‌ ಐಆರ್ ಮಾಡಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇನೆ. ಸುಮಾರು 18 ನಿಮಿಷಗಳ ಆಡಿಯೋ ಕ್ಲಿಪ್ ದೊರೆತಿದ್ದು, ಈ ಆಡಿಯೋದಲ್ಲಿ ಓರ್ವ ಮಹಿಳೆ ಮತ್ತು ಹುಡುಗ ಮಾತನಾಡಿದ್ದು, ಮಂತ್ರಿ ಮಗನನ್ನು ಹೊಡೆಯಬೇಕು, ಕಾರಿಗೆ ಟ್ರ್ಯಾಕರ್ ಹಾಕಬೇಕು ಎಂಬ ಬಗ್ಗೆಯೂ ಮಾತನಾಡಿರುವ ಸಂಭಾಷಣೆ ಇದೆ. ಸೋಮ ಮತ್ತು ಭರತ್ ಎಂಬ ಹೆಸರುಗಳು ಆಡಿಯೋ ಸಂಭಾಷಣೆಯಲ್ಲಿ ಕೇಳಿ ಬಂದಿದೆ. ಈ ಸೋಮ ಮತ್ತು ಭರತ್ ಯಾರು ಎಂದು ನನಗೆ ಗೊತ್ತಿಲ್ಲ. ಆದರೆ ಏಕೆ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ತನಿಖೆ ನಡೆಸುವಂತೆ ಎಸ್ಪಿಯವರಿಗೆ ದೂರು ಸಲ್ಲಿಸಿದ್ದೇನೆ  ಎಂದು ತಿಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News